Advertisement

ನೆಬ್ಬೂರು ನಾರಾಯಣ ಹೆಗಡೆ ಗಾನಲೀನ

05:55 PM May 16, 2019 | Team Udayavani |

ಸುಮಧುರ ಕಂಠದಿಂದ ಯಕ್ಷಗಾನ ಸುಧೆಯುಣಿಸಿ ರಂಜಿಸಿದ ನೆಬ್ಬೂರರೆಂದೇ ಖ್ಯಾತರಾಗಿದ್ದ ನೆಬ್ಬೂರು ನಾರಾಯಣ ಹೆಗಡೆಯವರು ಮೇ 11ರಂದು ಇಹಲೋಕ ಯಾತ್ರೆಗೆ ಮಂಗಲ ಹಾಡಿದರು.

Advertisement

ಗುರುಮನೆಯಾದ ಕೆರೆಮನೆ
ಯಕ್ಷಗಾನ ಅವರಿಗೆ ವಂಶಪಾರಂಪರ್ಯವಾಗಿ ಬಂದ ಬಳುವಳಿ. ತಂದೆ ದೇವರು ಹೆಗಡೆ ಯಕ್ಷಗಾನ ಭಾಗವತರು. ಕೊಡಗಿಪಾಲು ಗಣಪತಿ ಹೆಗಡೆಯವರ ಸೂಚನೆಯಂತೆ ಕೆರೆಮನೆ ಶಿವರಾಮ ಹೆಗಡೆಯವರಲ್ಲಿಗೆ ಬಾಲಕ ನಾರಾಯಣ ಗುರುವನ್ನರಸಿ ಬಂದರು. ಕೆರೆಮನೆಯೆ ಗುರುಮನೆಯಾಯಿತು. ಶಿವರಾಮ ಹೆಗಡೆಯವರ ಮಕ್ಕಳಾದ ಶಂಭು ಹೆಗಡೆ, ಗಜಾನನ ಹೆಗಡೆ ಅವರಿಗೆ ಓರಗೆಯವರಾದರೆ ಮಹಾಬಲ ಹೆಗಡೆ ಹಿರಿಯಣ್ಣನಾಗಿ ಮಾರ್ಗದರ್ಶಕರಾದರು ಅಲ್ಲಿಯೇ ಕಲಿಯುತ್ತಾ ಭಾಗವತರಾಗಿ ಮೂಡಿ ಬಂದರು. ಕೆರೆಮನೆ ಮೇಳದಲ್ಲಿ ಯಾಜಿ ಭಾಗವತರಿಂದ ತೆರವಾದ ಸ್ಥಾನವನ್ನು ಸಮರ್ಥವಾಗಿ ತುಂಬಿದರು

ಕೆರೆಮನೆಯ ಘಟಾನುಘಟಿ ಕಲಾವಿದರ ಒಡನಾಟ ಅವರ ಕಲೋತ್ಕರ್ಷಕ್ಕೆ ವೇಗೋತ್ಕರ್ಷವಾಯಿತು. ಕಿನ್ನೀರು ನಾರಾಯಣ ಹೆಗಡೆ, ಕರ್ಕಿ ಭಂಡಾರಿ ಸಹೋದರರು, ಇಡಗುಂಜಿ ಕೃಷ್ಣ ಯಾಜಿ, ಎ.ಪಿ ಪಾಠಕ್‌ ಮೊದಲಾದ ಹಿಮ್ಮೇಳ ವಾದಕರು ಅವರ ಹಾಡಿಗೆ ಅನುಕೂಲವಾಗಿ ಒದಗಿ ಬಂದರು.

ಸುಮಾರು ನಾಲ್ಕು ದಶಕ ಇಡಗುಂಜಿ ಮೇಳದ ಅವಿಭಾಜ್ಯ ಅಂಗವಾಗಿ ಪ್ರಧಾನ ಭಾಗವತರಾಗಿ ಮೇಳವನ್ನು ಮುನ್ನಡೆಸಿದರು. ಕೆರೆಮನೆ ಶಂಭು ಹೆಗಡೆಯವರು ಅಪೂರ್ವವಾಗಿ ಚಿತ್ರಿಸಿದ ಹಲವು ಪೌರಾಣಿಕ ಪಾತ್ರಗಳ ಸೊಗಸಿನಲ್ಲಿ ಅವರ ಭಾಗವತಿಕೆ ಧನಾತ್ಮಕ ಪರಿಣಾಮ ಬೀರಿದೆ. ನೆಬ್ಬೂರರ ಭಾಗವತಿಕೆಯಿಲ್ಲದ ಶಂಭು ಪಾತ್ರ ಇಲ್ಲವೆಂಬಷ್ಟು ಕಡಿಮೆ. ಅವರಿಬ್ಬರದು ಅನುಪಮ ಜೋಡಿ. ಪಾತ್ರದ ಭಾವ, ಶಂಭು ಹೆಗಡೆಯವರ ಮನೋಭಾವ ಅರಿತು ಹಾಡುವ ಕಲೆ ಅವರಿಗೆ ಕರಗತವಾಗಿತ್ತು.

ಅನನ್ಯ ಕಂಠಸಿರಿ
ದೈವದತ್ತವಾದ ಸುಮಧುರ ಕಂಠದ ಹಾಡಿಗೆ ವಿಶೇಷ ಮೆರಗು ನೀಡುವ ಸಾಮರ್ಥ್ಯ ಹೊಂದಿತ್ತು. ಇಂಪಾದ ಧ್ವನಿಗೆ ಮಾರು ಹೋಗದವರಿಲ್ಲ. ಪರಂಪರೆಯ ಹಾಡಿನ ಮಟ್ಟಿಗೆ ನೆಬ್ಬೂರುತನದ ಮುದ್ರೆಯೊತ್ತಿ ಅದರ ಮೌಲ್ಯ ಹೆಚ್ಚಿಸಿದರು. ಕಾಲದಲ್ಲಿ (ನಿಧಾನಗತಿ) ಪದ್ಯ ಹೇಳುತ್ತಾ ಕೇಳುಗ ರಸಲೀನನಾಗುವಂತೆ ಮಾಡುತ್ತಿದ್ದರು. ಕೆಲವು ಭಾಮಿನಿ – ವಾರ್ದಿಕಗಳಂತೂ ಅವರಿಗೇ ಮೀಸಲು. ಕರ್ಣಾನಂದಕರವಾದ ಹಾಡುಗಳು ಕೇಳುಗನಲ್ಲಿ ಅನುರಣನಗೊಳ್ಳುತ್ತಿದ್ದವು. ವೃದ್ಧಾಪ್ಯದಿಂದ ಅವರ ದೇಹ ಕುಗ್ಗಿತೇ ಹೊರತು ಧ್ವನಿ ಮುಕ್ಕಾಗಿರಲಿಲ್ಲ. ಆದ್ದರಿಂದಲೇ ನಿವೃತ್ತರಾದ ಮೇಲೂ ತಾಳಮದ್ದಳೆಯ ಬಹುಬೇಡಿಕೆಯ ಭಾಗವತರಾಗಿದ್ದರು.

Advertisement

ಯೋಗ-ಯೋಗ್ಯತೆ
ಯೋಗ್ಯತೆ ಇರುವವರಿಗೆಲ್ಲ ಯೋಗ ಇರುವುದಿಲ್ಲ. ನೆಬ್ಬೂರರಿಗೆ ಅವೆರಡು ಲಭ್ಯ. ಅವರಿಗೆ ಸಿಕ್ಕ ಆಶ್ರಯ; ಒಂದೇ ಮೇಳದಲ್ಲಿ ನಿಡುಗಾಲ ಸೇವೆ ಮಾಡುವ ಅವಕಾಶ, ದೇಶ ವಿದೇಶಗಳಲ್ಲಿ ಹಾಡಿನ ಇಂಪು ಪಸರಿಸುವ ಭಾಗ್ಯ ಅವರಿಗೊದಗಿತು. ಹಲವು ಸಂಘ ಸಂಸ್ಥೆಗಳು ಸಮ್ಮಾನಿಸಿವೆ. ಹಲವು ಪ್ರಶಸ್ತಿಗಳು ಅರಸಿ ಬಂದವು. ರಾಜ್ಯೋತ್ಸವ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, ಶ್ರೀರಾಮ ವಿಠಲ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಇವು ಕೀರ್ತಿ ಕಿರೀಟದ ಹೊನ್ನ ಗರಿಗಳು. ಅವರ ಆತ್ಮ ಕಥನ ಪ್ರಕಟವಾಗಿದೆ. ಅವರ ಹೆಸರಿನಲ್ಲಿ ಟ್ರಸ್ಟ್‌ ಕಾರ್ಯನಿರ್ವಹಿಸುತ್ತಿದೆ. ವ್ಯಕ್ತಿಚಿತ್ರವನ್ನು ಉಡುಪಿಯ ಯಕ್ಷಗಾನ ಕಲಾರಂಗ ಪರಿಚಯ-ಸ್ವರಚಯ ಸಿಡಿಯಲ್ಲಿ ದಾಖಲಿಸಿದೆ. ಟ್ರಸ್ಟ್‌ ನೆಬ್ಬೂರು ನಿನಾದ ವ್ಯಕ್ತಿಚಿತ್ರ ಪ್ರಕಟಿಸಿದೆ. ನೀನೇ ಕುಣಿಸಿದೆ ಜೀವರನು ಮಾಲಿಕೆಯಲ್ಲಿ ಅವರ ಹಾಡುಗಳ ಸಿ.ಡಿ ಲಭ್ಯವಿದೆ. ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

– ಪ್ರೊ| ನಾರಾಯಣ ಎಂ. ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next