ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಮಾರಣಾಂತಿಕ ಕೋವಿಡ್ 19 ವೈರಸ್ ಮರಣ ಮೃದಂಗ ಮುಂದುವರಿದಿದ್ದು, ಕಳೆದ 24ಗಂಟೆಯಲ್ಲಿ 4,491 ಜನರು ಸಾವನ್ನಪ್ಪಿದ್ದು, ಇದು ಸೋಂಕು ಆರಂಭವಾದ ನಂತರ ಒಂದೇ ದಿನದಲ್ಲಿ ಅತೀ ಹೆಚ್ಚು ಮಂದಿ ಸಾವನ್ನಪ್ಪಿರುವ ಅಂಕಿ ಅಂಶ ಇದಾಗಿದೆ ಎಂದು ವರದಿ ತಿಳಿಸಿದೆ.
ಅಮೆರಿಕದಲ್ಲಿ ಶುಕ್ರವಾರದವರೆಗೆ ಕೋವಿಡ್ 19 ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ 32,917ಕ್ಕೆ ತಲುಪಿರುವುದಾಗಿ ಜಾನ್ಸ್ ಹೋಪ್ ಕಿನ್ಸ್ ಯೂನಿರ್ವಸಿಟಿ ತಿಳಿಸಿದೆ.
ಮಾರಕ ಕೋವಿಡ್ ಸೋಂಕು ಅಮೆರಿಕದಲ್ಲಿ ತೀವ್ರಗತಿಯಲ್ಲಿ ಹರಡುತ್ತಿದ್ದು, ಜನರು ತತ್ತರಿಸಿವಂತಾಗಿದೆ. ಈ ವಾರದಲ್ಲಿ ನ್ಯೂಯಾರ್ಕ್ ನಗರ ಕೂಡಾ ಕೋವಿಡ್ ವೈರಸ್ ನಿಂದ 3,778 ಮಂದಿ ಸಾವನ್ನಪ್ಪಿರುವುದಾಗಿ ಘೋಷಿಸಿತ್ತು.
ಇಡೀ ಜಗತ್ತಿನಲ್ಲಿ ಕೋವಿಡ್ 19 ವೈರಸ್ ಗೆ ಅತೀ ಹೆಚ್ಚು ಮಂದಿ ಸಾವನ್ನಪ್ಪಿದ್ದು ಅಮೆರಿಕದಲ್ಲಿ, ಎರಡನೇ ದೇಶ ಇಟಲಿ(22,170)ಯಾಗಿದೆ ಎಂದು ವರದಿ ವಿವರಿಸಿದೆ. ಸ್ಪೇನ್ ನಲ್ಲಿ 19,130 ಜನರು ಸಾವನ್ನಪ್ಪಿದ್ದು, ಫ್ರಾನ್ಸ್ ನಲ್ಲಿ 17,920 ಮಂದಿ ಸಾವನ್ನಪ್ಪಿದ್ದಾರೆ.
ಅಮೆರಿಕದಲ್ಲಿ 6,67,800ಕ್ಕೂ ಅಧಿಕ ಜನರು ಮಾರಣಾಂತಿಕ ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೇ ಕಳೆದ ಎರಡು ದಿನಗಳಲ್ಲಿ ಅಮೆರಿಕದಲ್ಲಿ ದಾಖಲೆ ಮಟ್ಟದ ಸಾವು ಸಂಭವಿಸಿದೆ.