Advertisement

ನಾಳೆ ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡ ಆಗಮನ: ಮುಲ್ಲೈ ಮುಗಿಲನ್‌

01:19 AM Jun 01, 2024 | Team Udayavani |

ಮಂಗಳೂರು: ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ನಿಟ್ಟಿನಲ್ಲಿ ಸಂಭಾವ್ಯ ವಿಪತ್ತು ನಿರ್ವಹಣೆಗೆ ಸಕಲ ಕ್ರಮ ಕೈಗೊಳ್ಳಲಾಗಿದೆ. ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ-ಎನ್‌ಡಿಆರ್‌ಎಫ್‌ ತಂಡವು ಜೂ.1ರಂದು ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ.

Advertisement

ಶುಕ್ರವಾರ ಮುಂಗಾರು ಪೂರ್ವ ಸಿದ್ಧತೆಗಳ ಕುರಿತಂತೆ ಮಾಹಿತಿ ನೀಡಿದ ಅವರು, ಎನ್‌ಡಿಆರ್‌ಎಫ್‌ ತಂಡಗಳು ಮಂಗಳೂರು, ಪುತ್ತೂರಿನಲ್ಲಿ ಕಾರ್ಯಾಚರಿಸಲಿವೆ. ಎಸ್‌ಡಿಆರ್‌ಎಫ್‌(ರಾಜ್ಯ ವಿಪತ್ತು ನಿರ್ವಹಣಾ ದಳ) ತಂಡವೂ ಕಾರ್ಯೋನ್ಮುಖವಾಗಲಿದೆ ಎಂದರು.

ಮಂಗಳೂರು ಸ್ಮಾರ್ಟ್‌ ಸಿಟಿಯೊಂದಿಗೆ ಸೇರಿ ವನ್‌ ಟಚ್‌ ಆ್ಯಪ್‌ ಅಭಿವೃದ್ಧಿಗೊಳಿಸಿದ್ದು ಅದರ ಮೂಲಕ ದೂರುಗಳನ್ನು ಸ್ವೀಕರಿಸಿ, ಇನ್ಸಿಡೆಂಟ್‌ ಕಮಾಂಡರ್‌ಗೆ ಅದನ್ನು ಕಳುಹಿಸಿ, ಇತ್ಯರ್ಥ ಪಡಿಸುವ ವ್ಯವಸ್ಥೆ ಸಿದ್ಧಪಡಿಸಲಾಗುತ್ತಿದೆ ಎಂದರು.

ಜಿಲ್ಲೆಯ 86 ಗ್ರಾಮಗಳನ್ನು ಸಂಭವನೀಯ ಪ್ರವಾಹ ಪೀಡಿತ, ಭೂಕುಸಿತ ಪ್ರದೇಶಗಳಾಗಿ ಗುರುತಿಸಿದ್ದು, ಇವುಗಳ ಒಟ್ಟು 90 ಪ್ರದೇಶಗಳಲ್ಲಿ ಪ್ರವಾಹ ಪೀಡಿತ ಹಾಗೂ 73 ಪ್ರದೇಶಗಳಲ್ಲಿ ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 97 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಜಿಲ್ಲಾ ಮಟ್ಟ ಹಾಗೂ ಪ್ರತಿ ಗ್ರಾ.ಪಂ., ವಾರ್ಡ್‌ ಮಟ್ಟದಲ್ಲೂ ಇನ್‌ಸಿಡೆಂಟ್‌ ಕಮಾಂಡರ್‌ಗಳನ್ನು ನೇಮಿಸಲಾಗಿದೆ. ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ಣ, ಪಣಂಬೂರ, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸುರತ್ಕಲ್‌ ಕಡಲ ಕಿನಾರೆಗಳಲ್ಲಿ ಜೂನ್‌ನಿಂದ ಸೆಪ್ಟಂಬರ್‌ ವರೆಗೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.

Advertisement

ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ 24*7 ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಪೊಲೀಸ್‌ ಇಲಾಖೆ, ಅಗ್ನಿಶಾಮಕ, ಮೆಸ್ಕಾಂ ಇಲಾಖೆಯಲ್ಲೂ ತುರ್ತು ನಿರ್ವಹಣೆಗಾಗಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಮೆಸ್ಕಾಂಗೆ ಸಂಬಂಧಿಸಿದ ದೂರುಗಳಿಗೆ ಆರು ಗಂಟೆಯೊಳಗೆ ಸ್ಪಂದಿಸುವುದು ಹಾಗೂ 24 ಗಂಟೆಯೊಳಗೆ ವಿದ್ಯುತ್‌ ಪೂರೈಕೆ ಪುನರಾರಂಭಿಸಲು ಸೂಚಿಸಲಾಗಿದೆ ಎಂದರು. ಮೀನುಗಾರಿಕಾ ನಿಷೇಧ ಅವಧಿಯಲ್ಲಿ ನಾಡದೋಣಿಗಳು ಸಮದ್ರ, ನದಿಗೆ ಹೋಗದಂತೆ ಗಮನಹರಿಸಲು ಮೀನುಗಾರಿಕಾ ಇಲಾಖೆಗೆ ನಿರ್ದೇಶನ ನೀಡಲಾಗಿದೆ, ಘಾಟಿ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದ್ದಲ್ಲಿ ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ರಸ್ತೆ ಬದಿ, ಕಟ್ಟಡಗಳ ಮೇಲಿನ ಅಪಾಯಕಾರಿ ಜಾಹೀರಾತು ಫ‌ಲಕ, ಫ್ಲೆಕ್ಸ್‌ಗಳಿದ್ದಲ್ಲಿ ತೆರವಿಗೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಪ್ರಾಕೃತಿಕ ವಿಕೋಪದಿಂದ ಒಟ್ಟು 124 ಮನೆಗಳು ಹಾನಿಗೊಳಗಾಗಿವೆ. ಸುಳ್ಯ ತಾಲೂಕಿನಲ್ಲಿ 3 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ವಿವಿಧ ತಾಲೂಕುಗಳಲ್ಲಿ 16 ಮನೆಗಳು ತೀವ್ರವಾಗಿ ಹಾಗೂ 105 ಮನೆಗಳು ಭಾಗಶ: ಹಾನಿಗೊಳಗಾಗಿವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next