ನವದೆಹಲಿ: ಲೈವ್ ಸ್ಯಾಟಲೈಟ್ ಅನ್ನು ಭಾರತೀಯ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿಯೇ ಸರ್ಜಿಕಲ್ ಸ್ಟ್ತೈಕ್ ನಡೆಸಿ ಹೊಡೆದುರುಳಿಸುವ ಮೂಲಕ ಸ್ಯಾಟಲೈಟ್ ಪ್ರತಿರೋಧ ಕ್ಷಿಪಣಿ ಪ್ರಯೋಗ ಯಶಸ್ವಿಯಾಗಿದ್ದು, ಇದಕ್ಕಾಗಿ ವಿಜ್ಞಾನಿಗಳ ಸಾಧನೆಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಷ್ಟ್ರದ ಜನತೆಯನ್ನುದ್ದೇಶಿಸಿ ಮಾತನಾಡುತ್ತ ತಿಳಿಸಿದ್ದಾರೆ.
2011ರಿಂದಲೇ ಈ ಸ್ಯಾಟಲೈಟ್ ಸಂಶೋಧನೆ ಜಾರಿಯಲ್ಲಿತ್ತು. ಭಾರತ ಖಂಡಾಂತರ ಕ್ಷಿಪಣಿ ಯೋಜನೆ ಅಡಿಯಲ್ಲಿ ಈ ಯೋಜನೆ 2012ರಿಂದ ಸಂಶೋಧನೆ ನಡೆಸುತ್ತಿತ್ತು. ಇದೀಗ 300 ಕಿಲೋ ಮೀಟರ್ ದೂರದಲ್ಲಿದ್ದ ಸ್ಯಾಟಲೈಟ್ ಅನ್ನು ಹೊಡೆದುರುಳಿಸುವ ಪ್ರಯೋಗ ಯಶಸ್ವಿಯಾಗಿದೆ. ಇದರಿಂದ ಭಾರತದ ವಿಜ್ಞಾನಿಗಳ 9 ವರ್ಷಗಳ ಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ ಎಂದು ಹೇಳಿದರು.
ಬಾಹ್ಯಾಕಾಶದಲ್ಲಿಯೇ ಸ್ಯಾಟಲೈಟ್ ಅನ್ನು ಹೊಡೆದುರುಳಿಸುವ ಕ್ಷಿಪಣಿ ತಂತ್ರಜ್ಞಾನದ ಮೂಲಕ ಭಾರತ ಕೂಡಾ ಅಮೆರಿಕ, ರಷ್ಯಾ, ಚೀನಾದ ಸಾಲಿಗೆ ಸೇರಿದಂತಾಗಿದೆ. ಇದು ಅತ್ಯಂತ ಕಠಿಣವಾದ ಕಾರ್ಯಾಚರಣೆಯಾಗಿದೆ. ಆದರೆ ನಮ್ಮ ಸ್ವದೇಶಿ ನಿರ್ಮಿತ ಸ್ಯಾಟಲೈಟ್ ಬಳಸಿ ಬಾಹ್ಯಾಕಾಶದಲ್ಲಿಯೇ ಕೇವಲ ಮೂರು ನಿಮಿಷಗಳಲ್ಲಿ ಮಿಷನ್ ಆಪರೇಷನ್ ಮೂಲಕ ಸ್ಯಾಟಲೈಟ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಏನಿದು ASAT?
*A SAT(ಆ್ಯಂಟಿ ಸೆಟಲೈಟ್ ವೆಪನ್ ಉಪಗ್ರಹ). ಅಮೆರಿಕ, ಚೀನಾ, ರಷ್ಯಾದಲ್ಲಿ 1950ರಲ್ಲಿಯೇ ಅಭಿವೃದ್ಧಿ ಕಾರ್ಯ ಆರಂಭವಾಗಿತ್ತು.
*ಈಗಾಗಲೇ ಚೀನಾ, ಅಮೆರಿಕ, ರಷ್ಯಾದ ಬಳಿ ಮಾತ್ರ ಎಸ್ಯಾಟ್ ಇದೆ
*2007ರಲ್ಲಿ ಚೀನಾ ಎಸ್ಯಾಟ್ ಅನ್ನು ಪರೀಕ್ಷಿಸಿತ್ತು, 2008ರಲ್ಲಿ ಅಮೆರಿಕ, 2014ರಲ್ಲಿ ರಷ್ಯಾ ಮಿಸೈಲ್ ಪರೀಕ್ಷೆ ನಡೆಸಿತ್ತು.
*ಬಾಹ್ಯಾಕಾಶ ಶಕ್ತಿಯಲ್ಲಿ ಭಾರತಕ್ಕೆ 4ನೇ ಸ್ಥಾನ ಸಿಕ್ಕಂತಾಗಿದೆ