ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಘಟನೆಯ ಎರಡು ವಾರಗಳ ಬಳಿಕ ಭಾರತ ಪಾಕ್ ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಂಡಿದೆ. ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಭಾರತೀಯ ವಾಯುಸೇನೆ ಪಡೆಯ ಐಎಎಫ್ ಮಿರಾಜ್ 2000 ಯುದ್ಧ ವಿಮಾನ ಎಲ್ ಒಸಿ ಒಳಗೆ ನುಗ್ಗಿ ಬಾಲಕೋಟ್ ನಲ್ಲಿರುವ ಜೈಶ್ ಎ ಮೊಹಮ್ಮದ್ ಉಗ್ರರ ಶಿಬಿರಗಳ ಮೇಲೆ ಬರೋಬ್ಬರಿ 1000 ಕೆಜಿಯ ಬಾಂಬ್ ಗಳ ಸುರಿಮಳೆಗೈದಿದೆ. ಇದರಿಂದ ಉಗ್ರರ ಅಡಗುತಾಣ ಸಂಪೂರ್ಣ ನಾಶವಾಗಿದ್ದು, 200ರಿಂದ 300 ಉಗ್ರರು ಬಲಿಯಾಗಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಮತ್ತೊಂದು ದಾಳಿ ನಡೆಸಲು ಪಾಕ್ ಉಗ್ರರು ಸಂಚು ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರಕಿತ್ತು. ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಾಕ್ ಗೆ ಸೂಚಿಸಿದ್ದೇವು. ಆದರೆ ಪಾಕ್ ಆ ಕೆಲಸ ಮಾಡಲಿಲ್ಲ. ಈ ವಿಚಾರದ ಹಿನ್ನೆಲೆಯಲ್ಲಿ ನಾವು ಏರ್ ಸ್ಟ್ರೈಕ್ ನಡೆಸಿದ್ದೇವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮಾಹಿತಿ ನೀಡಿದ್ದಾರೆ. ದಾಳಿಯಲ್ಲಿ ಉಗ್ರರು, ಕಮಾಂಡರ್ ಗಳನ್ನು ಹತ್ಯೆಗೈಯಲಾಗಿದೆ. ಪಾಕಿಸ್ತಾನದ ಖೈಬರ್ ಪಖ್ತೂನ್ ವಾ ಪ್ರಾಂತ್ಯಕ್ಕೆ ನುಗ್ಗಿ ಉಗ್ರರ ನೆಲೆಗಳನ್ನು ನಾಶ ಮಾಡಲಾಗಿದೆ. ವಾಯುಸೇನೆ ದಾಳಿಯಲ್ಲಿ ಪಾಕ್ ಪ್ರಜೆಗಳ ಜೀವ ಹಾನಿಯಾಗಿಲ್ಲ. ಜೈಶ್ ಎ ಮೊಹಮ್ಮದ್ ಸಂಘಟನೆಯ ರೂವಾರಿ ಅಜರ್ ಮಸೂದ್ ನ ಭಾವಮೈದ ಮೌಲಾನಾ ಯೂಸೂಫ್ ಅಜರ್ ಹತ್ಯೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಆದರೆ ಈ ಬಗ್ಗೆ ಇನ್ನಷ್ಟೇ ಖಚಿತ ಮಾಹಿತಿ ಲಭ್ಯವಾಗಬೇಕಾಗಿದೆ. ಭಾರತೀಯ ವಾಯುಸೇನೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಪಾಕ್ ವಿದೇಶಾಂಗ ಸಚಿವ ಶಾ ಮಹಮೂದ್ ಕುರೇಶಿ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತ, ಭಾರತ ಎಲ್ ಓಸಿ ಉಲ್ಲಂಘನೆಗೈದು ಪಾಕಿಸ್ತಾನದ ಮೇಲೆ ಆಕ್ರಮಣ ನಡೆಸಿದೆ. ಆದುದರಿಂದ ಈ ಆಕ್ರಮಣಕ್ಕೆ ಅತ್ಯಂತ ಪರಿಣಾಮಕಾರಿ ಉತ್ತರ ನೀಡುವ ಹಕ್ಕು ಪಾಕಿಸ್ತಾನಕ್ಕೆ ಇದೆ. ಮತ್ತು ಇದು ಆತ್ಮರಕ್ಷಣೆಗಾಗಿ ನಡೆಸುವ ಪ್ರತಿ ದಾಳಿಯಾಗಲಿದೆ ಎಂದು ತಿಳಿಸಿದ್ದಾರೆ.