ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ತಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟದ ಯಶಸ್ಸು ಗಳಿಸಿರುವ ಎನ್‌ಡಿಎ ಮುಂದೆ ತನ್ನ ಚಿತ್ತವನ್ನು ರಾಜ್ಯಸಭೆಯತ್ತ ಹೊರಳಿಸಲಿದೆ.
ರಾಜ್ಯಸಭೆಯಲ್ಲಿ ಸೂಕ್ತ ಬಹುಮತ ಇರದ ಕಾರಣ ಕಳೆದ ಅವಧಿಯಲ್ಲಿ ಮೋದಿ ಸರಕಾರದ ಕೆಲವಾರು ಮಹತ್ವದ ಕಾಯ್ದೆಗಳಿಗೆ (ತ್ರಿವಳಿ ತಲಾಖ್, ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಇತ್ಯಾದಿ) ರಾಜ್ಯಸಭೆಯ ಮನ್ನಣೆ ಸಿಗದೆ ನನೆಗುದಿಗೆ ಬೀಳುವಂತಾಗಿತ್ತು. ಹಾಗಾಗಿ ಮುಂದಿನ ವರ್ಷ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಪಡೆದು ರಾಜ್ಯಸಭೆಯಲ್ಲೂ ತನ್ನ ಪ್ರಾಬಲ್ಯ ಸ್ಥಾಪಿಸಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗಿದೆ.
245 ಸಂಸದರ ಬಲವಿರುವ ರಾಜ್ಯಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ 101 ಸದಸ್ಯರನ್ನು ಹೊಂದಿದೆ. ಲೋಕಸಭಾ ಚುನಾವಣೆಯಲ್ಲಿ ಅಮೇಠಿಯಿಂದ ಗೆದ್ದಿರುವ ಸ್ಮತಿ ಇರಾನಿ ಅವರ ರಾಜ್ಯಸಭಾ ಸ್ಥಾನವೂ ತೆರವಾಗಲಿದೆ. ಇದರ ಜತೆಗೆ ನಾಮ ನಿರ್ದೇಶಿತ ಸದಸ್ಯರಾದ ಸ್ವಪನ್ ದಾಸ್‌ಗುಪ್ತ, ಮೇರಿ ಕೋಂ, ನರೇಂದ್ರ ಜಾಧವ್ ಮತ್ತು ಮೂವರು ಸ್ವತಂತ್ರ ಅಭ್ಯರ್ಥಿಗಳು ಸೇರಿ ಎನ್‌ಡಿಎ ಸಂಖ್ಯೆ 107ರಷ್ಟಿದೆ. ಇನ್ನು, ಯುಪಿಎ ಅವಧಿಯಲ್ಲಿ ನಾಮ ನಿರ್ದೇಶಿತಗೊಂಡಿದ್ದ ಕೆಟಿಎಸ್ ತುಳಸಿ ಅವರ ಅವಧಿ ಮುಂದಿನ ವರ್ಷ ಮುಗಿಯಲಿದೆ.
ಈಗಿನಿಂದ 2020ರ ನವೆಂಬರ್‌ನೊಳಗೆ ಒಟ್ಟು 75 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಗಳು ನಡೆಯಲಿವೆ. 2020ರ ನವೆಂಬರ್ ವೇಳೆಗೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ತಮಿಳುನಾಡು, ಗುಜರಾತ್ ಮತ್ತು ಬಿಹಾರ ಸಹಿತ ಒಟ್ಟು 14 ರಾಜ್ಯಗಳಲ್ಲಿರುವ ತನ್ನ ಶಾಸಕರ ಆಧಾರದ ಮೇರೆಗೆ ಒಟ್ಟು 19 ಸ್ಥಾನಗಳ ಕೋಟಾವನ್ನು ರಾಜ್ಯಸಭೆಯಲ್ಲಿ ಎನ್‌ಡಿಎ ಪಡೆಯಲಿದೆ. ಅದರಿಂದ ಎನ್‌ಡಿಎ ಸದಸ್ಯರ ಸಂಖ್ಯೆ 123ಕ್ಕೇರಲಿದ್ದು, ರಾಜ್ಯಸಭೆಯ ಒಟ್ಟು ಸದಸ್ಯ ಬಲದಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನ ಗಳಿಸಿದಂತಾಗುತ್ತದೆ. ಆ ಮೂಲಕ ಕಳೆದ 15 ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರವೊಂದು ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತ ಗಳಿಸಿದ ಸಾಧನೆ ಮಾಡಿದಂತಾಗುತ್ತದೆ.