Advertisement

NDA vs UPA: ಹೆಚ್ಚು ಉಗ್ರರ ಹತ್ಯೆ, ಕಡಿಮೆ ಉಗ್ರದಾಳಿ: ವರದಿ

07:11 PM Jan 02, 2018 | udayavani editorial |

ಹೊಸದಿಲ್ಲಿ : ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ  ಯುಪಿಎ ಅವಧಿಗೆ (2010-13) ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ ನಾಲ್ಕು ವರ್ಷಗಳ (2014-17) ಎನ್‌ಡಿಎ ಆಡಳಿತಾವಧಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರಸಂಬಂಧಿ ಘಟನೆಗಳ ಸಂಖ್ಯೆ ಕಡಿಮೆ ಎಂದು ಸರಕಾರದ ಅಧಿಕೃತ ವರದಿ ತಿಳಿಸಿದೆ. 

Advertisement

ಎಎನ್‌ಐ ಸುದ್ದಿ ಸಂಸ್ಥೆಗೆ ಸಿಕ್ಕಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ 2010-13ರ ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಜಮ್ಮು ಕಾಶ್ಮೀರದಲ್ಲಿ 1,218 ಉಗ್ರ ಸಂಬಂಧಿ ಘಟನೆಗಳು ವರದಿಯಾಗಿದ್ದವು; ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ (2014-17) ಇದು 1,094ಕ್ಕೆ ಇಳಿದಿದೆ.

ಮನಮೋಹನ್‌ ಸಿಂಗ್‌ ಅವಧಿಯಲ್ಲಿ 471 ಉಗ್ರರನ್ನು ಹೊಡೆದುರುಳಿಸಲಾಗಿದ್ದರೆ ಮೋದಿ ಅವರು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 580 ಉಗ್ರರನ್ನು ಮಟಾಶ್‌ ಮಾಡಲಾಗಿದೆ. 

ಇದೇ ರೀತಿ 2014-17ರ ಮೋದಿ ಅವಧಿಯಲ್ಲಿ ಉಗ್ರ ಸಂಬಂಧಿ ಘಟನೆಗಳಲ್ಲಿ ಸಿಲುಕಿ ಮೃತ ಪಟ್ಟ ಪೌರರ ಸಂಖ್ಯೆ 100; ಮನಮೋಹನ್‌ ಸಿಂಗ್‌ ಕಾಲದಲ್ಲಿ ಇದು 108 ಆಗಿತ್ತು. 

ಜಮ್ಮು ಕಾಶ್ಮೀರದಲ್ಲಿ ಉಗ್ರರ ಮೇಲೆ ತಮ್ಮ ಸರಕಾರ ಬಲವಾದ ಪ್ರಹಾರವನ್ನೇ ಇಕ್ಕಿದೆ ಎಂದು ಮೋದಿ ಸರಕಾರ ಪದೇ ಪದೇ ಹೇಳಿಕೊಂಡಿತ್ತು. ಉಗ್ರವಾದ ಎನ್ನುವುದು ಈಗ ಜಾಗತಿಕ ಬೆದರಿಕೆಯಾಗಿರುವುದರಿಂದ ಸರಕಾರವು ಇದಕ್ಕೆ ಇನ್ನೂ ಪರಿಣಾಮಕಾರಿಯಾದ ಶಾಶ್ವದ ಪರಿಹಾರವನ್ನು ಕಂಡುಕೊಳ್ಳಲು ಉದ್ದೇಶಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

“ಪಾಕಿಸ್ಥಾನದ ಮೇಲೆ ನಾವೇ  ಮೊದಲಾಗಿ ಗುಂಡು ಹಾರಿಸಬಾರದು ಎಂದು ನಾನು ಗಡಿಯಲ್ಲಿನ ನಮ್ಮ ಯೋಧರಿಗೆ ಹೇಳಿದ್ದೇನೆ. ಆದರೆ ಅವರು ನಮ್ಮ ಮೇಲೆ ದಾಳಿ ಮಾಡಿದಾಗ ನಾವು ಯಾವುದೇ ಮುಲಾಜಿಲ್ಲದೆ ಅದಕ್ಕಿಂತಲೂ ಉಗ್ರ ಪ್ರತ್ಯುತ್ತರ ನೀಡಬೇಕು ಎಂದು ಕೂಡ ಹೇಳಿದ್ದೇನೆ. ಭಾರತ ಈಗ ದುರ್ಬಲ ದೇಶವಾಗಿ ಉಳಿದಿಲ್ಲ; ಅದೀಗ ಅತ್ಯಂತ ಬಲಿಷ್ಠ ದೇಶವಾಗಿದೆ’ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ. 

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಪ್ರಕಾರ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಕಡಿಮೆಯಾಗಲು ನಾಲ್ಕು ಮುಖ್ಯ ಕಾರಣಗಳಿವೆ : ಅವೆಂದರೆ ಕೇಂದ್ರ ಕೈಗೊಂಡ ನೋಟು ಅಮಾನ್ಯ ಕ್ರಮ, ಎನ್‌ಐಎ ತನಿಖೆ, ಉನ್ನತ ಉಗ್ರರ ಹತ್ಯೆ, ದಿನೇಶ್ವರ್‌ ಶರ್ಮಾ ಮೂಲಕ ನಡೆಸಲಾದ ಸಂಧಾನ ಯತ್ನ .

Advertisement

Udayavani is now on Telegram. Click here to join our channel and stay updated with the latest news.

Next