ಹೊಸದಿಲ್ಲಿ: ವಿವಾದ ಸೃಷ್ಟಿಸಿರುವ ರಫೇಲ್ ಡೀಲ್‌ಗೆ ಸಂಬಂಧಿಸಿದ ಮಹಾಲೇಖಪಾಲರ (ಸಿಎಜಿ) ವರದಿಯನ್ನು ಸಂಸತ್‌ನಲ್ಲಿ ಬುಧವಾರ ಮಂಡಿಸಲಾಗಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಸಹಿ ಹಾಕಿ ರಫೇಲ್ ಒಪ್ಪಂದವು 2007ರಲ್ಲಿ ಯುಪಿಎ ಮಾತುಕತೆ ನಡೆಸುತ್ತಿದ್ದಾ ಗಿನ ದರಕ್ಕೆ ಹೋಲಿಸಿದರೆ ಶೇ. 2.86ರಷ್ಟು ಕಡಿಮೆ ಇದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಆದರೆ ಡಸ್ಸಾಲ್ಟ್ ಜತೆಗಿನ ಒಪ್ಪಂದದಲ್ಲಿ ಫ್ರಾನ್ಸ್ ಸರಕಾರದೊಂದಿಗೆ ಗ್ಯಾರಂಟಿ ಪಡೆಯದೆ “ಲೆಟರ್ ಆಫ್ ಕಂಫರ್ಟ್’ ಪಡೆದುದಕ್ಕೆ ಸಿಎಜಿ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತಕ್ಕೆ ಸೂಕ್ತವಾದ ಸಲಕರಣೆಗಳನ್ನು ರಫೇಲ್ ಯುದ್ಧ ವಿಮಾನಗಳಿಗೆ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಎನ್‌ಡಿಎ ಒಪ್ಪಂದವು ಶೇ. 17.08ರಷ್ಟು ಅಗ್ಗವಾಗಿದೆ. ಇದೇ ವೇಳೆ ಶಸ್ತ್ರಾಸ್ತ್ರದ ಪ್ಯಾಕೇಜ್ ಶೇ. 1.05ರಷ್ಟು ಅಗ್ಗವಾಗಿದೆ ಎಂದೂ ಸಿಎಜಿ ಹೇಳಿದೆ. ಆದರೆ ಈ ಹಿಂದೆ ಸಂಸತ್ತಿನಲ್ಲಿ ಪ್ರತಿಕ್ರಿಯೆ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಮೋದಿ ಸರಕಾರದ ರಫೇಲ್ ಒಪ್ಪಂದವು ಶೇ. 9ರಷ್ಟು ಕಡಿಮೆಯಾಗಿದೆ ಎಂದಿದ್ದರು. ಇನ್ನೊಂದೆಡೆ ಎಂಜಿನಿಯರಿಂಗ್ ಸಪೋರ್ಟ್ ಪ್ಯಾಕೇಜ್ ಮತ್ತು ಕಾರ್ಯ ಕ್ಷಮತೆ ಆಧರಿತ ಲಾಜಿಸ್ಟಿಕ್ಸ್ ವಿಚಾರದಲ್ಲಿ ಶೇ. 6.54ರಷ್ಟು ಮತ್ತು ತರಬೇತಿ ವೆಚ್ಚದಲ್ಲಿ ಶೇ. 2.68ರಷ್ಟು ವೆಚ್ಚ ದಾಯಕವಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ. ಅಲ್ಲದೆ ನಿಗದಿಗಿಂತ ಒಂದು ತಿಂಗಳು ಮೊದಲೇ ರಫೇಲ್ ಯುದ್ಧ ವಿಮಾನಗಳನ್ನು ಈ ಒಪ್ಪಂದದಲ್ಲಿ ಪಡೆಯಲಾಗುತ್ತಿದೆ ಎಂದೂ ಉಲ್ಲೇಖೀಸಲಾಗಿದೆ. ಆದರೆ ಆಫ್ಸೆಟ್ ಪಾಲುದಾರರ ಬಗ್ಗೆ ಒಪ್ಪಂದದಲ್ಲಿ ಯಾವುದೇ ವಿವರ ನೀಡಲಿಲ್ಲ.
ಆಫ್ಸೆಟ್ ಪಾಲುದಾರರನ್ನಾಗಿ ರಿಲಯೆನ್ಸ್ ಡಿಫೆನ್ಸ್ ಅನ್ನು ಆಯ್ಕೆ ಮಾಡಿದ್ದರ ಬಗ್ಗೆ ಕೇಂದ್ರ ಸರ ಕಾರದ ವಿರುದ್ಧ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಆಫ್ ಸೆಟ್ ಪಾಲುದಾರರಿಗೆ ಸಂಬಂಧಿಸಿದ ಪ್ರಕ್ರಿಯೆ ಈಗಷ್ಟೇ ಪೂರ್ಣ ಗೊಂಡಿದ್ದು, ಮುಂಬರುವ ಅಕ್ಟೋ ಬರ್‌ನಲ್ಲಿ ಈ ವರದಿಯನ್ನು ಡಸ್ಸಾಲ್ಟ್ ಕಂಪೆನಿ ಸರಕಾರಕ್ಕೆ ಸಲ್ಲಿಸಲಿದೆ.
ಸಂಸತ್ತಿನಲ್ಲಿ ಸಿಎಜಿ ವರದಿ ಮಂಡನೆಗೂ ಮುನ್ನ ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಸರಕಾರದ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ ನಡೆಸಿತು. ಅಲ್ಲದೆ ಸಂಸತ್ ಭವನದ ಎದುರು ಕಾಂಗ್ರೆಸ್ ಪ್ರತಿಭಟನೆಯನ್ನೂ ನಡೆಸಿತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿ, ವರದಿಯಲ್ಲಿ ಮಾತು ಕತೆ ನಡೆಸಿದವರು ಸಲ್ಲಿಸಿದ ಅಸಮ್ಮತಿಯ ಟಿಪ್ಪಣಿಯೇ ಪ್ರಸ್ತಾವವಾಗಿಲ್ಲ ಎಂದಿದ್ದಾರೆ. ಶೀಘ್ರವೇ ಕಡಿಮೆ ದರದಲ್ಲಿ ರಫೇಲ್ ಭಾರತಕ್ಕೆ ಬರುತ್ತದೆ ಎಂದ ಸರಕಾರದ ವಾದದಿಂದಲೇ ಡೀಲ್ ಕುಸಿದು ಬಿದ್ದಿದೆ ಎಂದು ದೂರಿದ್ದಾರೆ. ಜತೆಗೆ ಟ್ವೀಟ್ ಮಾಡಿದ್ದ ಅವರು ಚೌಕಿದಾರ್ ಚೋರ್ ಎಂದಿದ್ದಾರೆ.
ಬೆಲೆ ವಿವರ ಇಲ್ಲ
ದೇಶದ ಭದ್ರತೆಗಾಗಿ ರಫೇಲ್ ಒಪ್ಪಂದದ ಮೊತ್ತದ ವಿವರವನ್ನು ಸಂಸತ್ತಿಗೆ ಸಲ್ಲಿಸಲಾಗಿರುವ ವರದಿಯಲ್ಲಿ ಉಲ್ಲೇಖೀಸಲಿಲ್ಲ. ಯುಪಿಎ ಸರಕಾರ ತಲಾ ವಿಮಾನಕ್ಕೆ 520 ಕೋಟಿ ರೂ. ನಿಗದಿಸಿತ್ತು. ಆದರೆ ಎನ್‌ಡಿಎ ಸರಕಾರದ ಒಪ್ಪಂದದಲ್ಲಿ ಇದರ ವೆಚ್ಚ 1,600 ಕೋಟಿ ರೂ. ಆಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.