ಪಾಟ್ನಾ/ಮಣಿಪಾಲ: ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಈವರೆಗೆ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಆರ್ ಜೆಡಿ ನೇತೃತ್ವದ ಮಹಾಘಟಬಂಧನ ಕೂಟಕ್ಕೆ ಹಿನ್ನಡೆಯಾಗಿದ್ದು, ಎನ್ ಡಿಎ ಮೈತ್ರಿಕೂಟ ಭಾರೀ ಮುನ್ನಡೆ ಸಾಧಿಸಿದೆ.
ಭಾರತೀಯ ಜನತಾ ಪಕ್ಷದ ಎನ್ ಡಿಎ ಮೈತ್ರಿಕೂಟ 124 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಆರ್ ಜೆಡಿ ಮಹಾಮೈತ್ರಿಕೂಟ 109 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸೀ ವೋಟರ್ ಸೇರಿದಂತೆ ಹಲವು ಸಮೀಕ್ಷೆಗಳು ಆರ್ ಜೆಡಿ ನೇತೃತ್ವದ ಮಹಾಮೈತ್ರಿಕೂಟ ಈ ಬಾರಿ ಬಹುಮತ ಪಡೆಯಲಿದೆ ಎಂದು ತಿಳಿಸಿತ್ತು. ಆದರೆ ಇದೀಗ ಎನ್ ಡಿಎ ಮೈತ್ರಿಕೂಟ ಬಹುಮತದದತ್ತ ದಾಪುಗಾಲಿಟ್ಟಿದೆ.
ಆರ್ ಜೆಡಿ ಮಹಾಮೈತ್ರಿಕೂಟ ಹಾಗೂ ಎನ್ ಡಿಎ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದ್ದು, ಬಿಹಾರದ ಅಧಿಕಾರದ ಗದ್ದುಗೆ ಯಾರಿಗೆ ಎಂಬುದು ಇನ್ನಷ್ಟು ಕುತೂಹಲ ಮೂಡಿಸಿದ್ದು, ಮಧ್ಯಾಹ್ನದೊಳಗೆ ಬಹುತೇಕ ಚಿತ್ರಣ ದೊರೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ:Live Update: ಬಿಹಾರ ಚುನಾವಣೆಯ ಮಹಾತೀರ್ಪು-ಮುಖ್ಯಮಂತ್ರಿ ಗದ್ದುಗೆ ಯಾರ ಪಾಲಿಗೆ?
ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಟಾರ್ ಪ್ರಚಾರಕರಾಗಿದ್ದು, ಜೆಡಿಯುನಿಂದ ಬಿಜೆಪಿ ಅಂತರಕಾಯ್ದುಕೊಂಡಿತ್ತು. ನಿತೀಶ್ ಕುಮಾರ್ ಅವರ ಸಭೆಗಳಲ್ಲಿ ಬಿಜೆಪಿಯ ಯಾವ ಸಚಿವರು, ಸ್ಟಾರ್ ಪ್ರಚಾರಕರೂ ಭಾಗವಹಿಸಿರಲಿಲ್ಲವಾಗಿತ್ತು. ಪ್ರಸ್ತುತ ಜೆಡಿಯು 53 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿಯು 71 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಬಿಹಾರದಲ್ಲಿ ಈ ಬಾರಿಯೂ ಎನ್ ಡಿಎ ಮೈತ್ರಿಕೂಟ ಮತ್ತೆ ಅಧಿಕಾರದ ಗದ್ದುಗೆ ಏರಲಿದೆಯೇ ಅಥವಾ ಬದಲಾವಣೆಯ ಗಾಳಿ ಬೀಸಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.