ಮೀರತ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮೀರತ್‌ನಿಂದ ಉತ್ತರ ಪ್ರದೇಶದ ತಮ್ಮ ಲೋಕಸಭಾ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಮುಂಬರುವ ಚುನಾವಣೆ ಸರಕಾರವನ್ನು ಆಯ್ಕೆ ಮಾಡಲು ಅಲ್ಲ, ಬದಲಿಗೆ ‘ವಿಕಸಿತ ಭಾರತ’ ಮಾಡಲು ಎಂದು ಹೇಳಿದರು.
ಮುಂಬರುವ ಚುನಾವಣೆಗಳು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಎನ್‌ಡಿಎ ಮತ್ತು ಭ್ರಷ್ಟರನ್ನು ಉಳಿಸಲು ಹೋರಾಡುತ್ತಿರುವ ಇನ್ನೊಂದು ಗುಂಪಿನ ನಡುವೆಯದ್ದಾಗಿದೆ. ಮೋದಿಯ ಮಂತ್ರ ‘ಭ್ರಷ್ಟಾಚಾರ್ ಹಠಾವೋ’ ಆಗಿದ್ದರೆ ವಿಪಕ್ಷಗಳ ಗುಂಪಿನವರು ‘ಭ್ರಷ್ಟಾಚಾರಿ ಬಚಾವೋ ಎಂದು ಹೇಳುತ್ತಾರೆಎಂದು ತೀವ್ರ ವಾಗ್ದಾಳಿ ನಡೆಸಿದರು.
ಕಳೆದ 10 ವರ್ಷಗಳಲ್ಲಿ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿರುವುದನ್ನು ದೇಶ ನೋಡಿದೆ. ಯಾವುದೇ ಮಧ್ಯವರ್ತಿ ಬಡವರ ಹಣವನ್ನು ಕದಿಯಲು ಸಾಧ್ಯವಿಲ್ಲ ಎಂದು ನಾವು ಖಚಿತಪಡಿಸಿದ್ದೇವೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ, ಅದಕ್ಕಾಗಿಯೇ ಭ್ರಷ್ಟರು ಇಂದು ಕಂಬಿ ಹಿಂದೆ ಬಿದ್ದಿದ್ದಾರೆ ಎಂದರು.
ರೈತರನ್ನು ದ್ವೇಷಿಸುವ ಇಂಡಿಯಾ ಮೈತ್ರಿಕೂಟ ಚೌಧರಿ ಚರಣ್ ಸಿಂಗ್ ಅವರಿಗೆ ಸೂಕ್ತ ಗೌರವವನ್ನೂ ನೀಡಲಿಲ್ಲ. ಚರ್ಚೆಯ ವೇಳೆ ಸಂಸತ್ತಿನೊಳಗೆ ಮೈತ್ರಿಕೂಟ ಏನು ಮಾಡಿದೆ ಎಂಬುದನ್ನು ಇಡೀ ದೇಶವೇ ನೋಡಿದೆ. ನಮ್ಮ ಕಿರಿಯ ಸಹೋದರ ಜಯಂತ್ ಚೌಧರಿ ಅವರು ಭಾರತ ರತ್ನ ಪ್ರಶಸ್ತಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮಾತನಾಡಲು ಎದ್ದು ನಿಂತಾಗ ಅವರನ್ನು ತಡೆಯುವ ಯತ್ನ, ಅವಮಾನಿಸುವ ಪ್ರಯತ್ನ ನಡೆಯಿತು. ಇದಕ್ಕಾಗಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮನೆ ಮನೆಗೆ ತೆರಳಿ ಈ ಭಾಗದ ರೈತರ ಕ್ಷಮೆಯಾಚಿಸಬೇಕು,’’ ಎಂದು ಪ್ರಧಾನಿ ಹೇಳಿದರು.
ನಾನು ಕೇವಲ ಭ್ರಷ್ಟರ ಬಗ್ಗೆ ತನಿಖೆ ನಡೆಸುತ್ತಿಲ್ಲ,ಅವರು ಕದ್ದ ಸಂಪತ್ತನ್ನು ಜನರಿಗೆ ಹಿಂದಿರುಗಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.