ಹೊಸದಿಲ್ಲಿ: ಸಂಕಷ್ಟದ ಸುಳಿಯಲ್ಲಿದ್ದ ಜೆಟ್ ಏರ್‌ವೆಸ್ ಸಂಸ್ಥೆಗೆ ನೆರವು ನೀಡಲು ಬ್ಯಾಂಕ್‌ಗಳ ಒಕ್ಕೂಟಕ್ಕೆ ಸೂಚನೆ ನೀಡಿರುವ ಕೇಂದ್ರ ಸರಕಾರದ ಕ್ರಮವನ್ನು ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಪ್ರಶ್ನೆ ಮಾಡಿದ್ದಾರೆ. ಸರಕಾರದ ಕ್ರಮ ದ್ವಂದ್ವ ನೀತಿ ಎಂದು ಅವರು ಟೀಕಿಸಿದ್ದಾರೆ. ಕೆಲವೊಂದು ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಉದ್ದೇಶ ಪೂರ್ವಕವಾಗಿಯೇ ಕಿಂಗ್ ಫಿಶರ್ ಏರ್‌ಲೈನ್ಸ್ ಅನ್ನು ಹಾರಾಟ ನಡೆಸದಂತೆಯೇ ಮಾಡಿದವು ಎಂದು ಸರಣಿ ಟ್ವೀಟ್‌ನಲ್ಲಿ ಆಕ್ಷೇಪ ಮಾಡಿದ್ದಾರೆ.
“ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು ಜೆಟ್ ಏರ್‌ವೆàಸ್‌ಗೆ ನೆರವಾಗಿ ಉದ್ಯೋಗ ನಷ್ಟವಾಗದಂತೆ ತಡೆದಿರುವುದು ಸಂತಸ ತಂದಿದೆ. ಆದರೆ ಅದೇ ಬ್ಯಾಂಕ್‌ಗಳು ನನ್ನ ಕಿಂಗ್‌ಫಿಶರ್ ಸಂಸ್ಥೆಯನ್ನು ನಿರ್ದಾಕ್ಷಿಣ್ಯವಾಗಿ ಕಾರ್ಯವೆಸಗದಂತೆ ಮಾಡಿದವು. ಎನ್‌ಡಿಎ ಸರಕಾರದ ಅವಧಿಯಲ್ಲಿನ ದ್ವಂದ್ವ ನಿಲುವಿಗೆ ಇದು ಉತ್ತಮ ಉದಾಹರಣೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ನಾನು ನನ್ನ ಸಾಲ ತೀರಿಸಲು ಆಸ್ತಿಗಳನ್ನು ಕರ್ನಾಟಕ ಹೈಕೋರ್ಟ್ ಮುಂದಿಟ್ಟಿದ್ದೇನೆ. ಬ್ಯಾಂಕುಗಳು ಅದನ್ನು ಪಡೆದು, ಜೆಟ್ ಏರ್‌ವೆಸ್‌ಗೆ ನೆರವಾಗಲಿ ಎಂದೂ ಹೇಳಿದ್ದಾರೆ.
ಬಿಜೆಪಿ ವಿರುದ್ಧವೂ ವಾಗ್ಧಾಳಿ ಮಾಡಿದ ಮಲ್ಯ “ಬಿಜೆಪಿ ವಕ್ತಾರರು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್‌ಗೆ ನಾನು ಬರೆದಿದ್ದ ಪತ್ರವನ್ನು ಹಿಡಿದುಕೊಂಡು ಓದುತ್ತಾರೆ. ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಕಿಂಗ್‌ಫಿಶರ್‌ಗೆ ಬೆಂಬಲಿಸಿ ತಪ್ಪು ಮಾಡಿದ್ದವು. ಮಾಧ್ಯಮಗಳು ಕೂಡ ನನ್ನನ್ನು ವಂಚಿಸಿವೆ’ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ, ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ಮನವಿ ಮಾಡಿರುವ ಜೆಟ್ ಏರ್‌ವೆàಸ್‌ನ ಪೈಲಟ್‌ಗಳ ಒಕ್ಕೂಟ, ಶೀಘ್ರವೇ ಬಾಕಿ ವೇತನ ನೀಡುವಂತೆ ಒತ್ತಾಯಿಸಿದೆ.