ಹೊಸದಿಲ್ಲಿ: ಕೇಂದ್ರ ಸಚಿವೆ ಮತ್ತು ಅಮೇಠಿ ಸಂಸದೆ ಸ್ಮತಿ ಇರಾನಿ ಲಟ್ಕಾಸ್- ಜಟ್ಕಾಸ್ (ಅಸಂಬದ್ಧ ನೃತ್ಯ) ಮಾಡಲು ಮಾತ್ರವೇ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಜಯ್ ರಾಯ್ ನೀಡಿದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ.
ರಾಜಕೀಯವಾಗಿಯೂ ಇದು ವಾಗ್ವಾದಕ್ಕೆ ಕಾರಣವಾಗಿದೆ. ಉ.ಪ್ರ.ದ ಸೋನಾಭದ್ರ ಜಿಲ್ಲೆಯಲ್ಲಿ ರಾಯ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಷ್ಟ್ರೀಯ ಮಹಿಳಾ ಆಯೋಗ ಕಾಂಗ್ರೆಸ್ ನಾಯಕನಿಗೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಹೇಳಿಕೆಯನ್ನು ಸಮರ್ಥಿಸಿಕೊಂಡ ರಾಯ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ.
ಅಮೇಠಿಯಲ್ಲಿ ಇಂಥ ಮಾತುಗಳು ಸಾಮಾನ್ಯವಾಗಿವೆ ಎಂದು ಹೇಳಿದ್ದಾರೆ. ಅಮೇಠಿ ಲೋಕಸಭಾ ಕ್ಷೇತ್ರದ ಸದಸ್ಯೆ ಸ್ಮತಿ ಇರಾನಿ ಪ್ರತಿಕ್ರಿಯೆ ನೀಡಿ, “ದೇಶದ ಸೇನೆಯನ್ನು ಅವಮಾನಿಸಿದ ಕಾಂಗ್ರೆಸ್ ಮುಖಂಡರು ಕ್ಷಮೆ ಯಾಚಿಸುತ್ತಾರೆ ಎಂಬ ನಿರೀಕ್ಷೆ ನನಗೆ ಇಲ್ಲ’ ಎಂದು ಹೇಳಿದ್ದಾರೆ.
ದೇಶದ ಸೇನೆಯನ್ನು, ಸ್ವಾತಂತ್ರ್ಯಕ್ಕಾಗಿ ಹೋರಾಡಿವರನ್ನು ಅವಮಾನಿಸಿ ಗಾಂಧಿ ಕುಟುಂಬದವರನ್ನು ಖುಷಿಯಾಗಿ ಇರಿಸುವ ಪ್ರಯತ್ನ ಆ ಪಕ್ಷದ ಮುಖಂಡರದ್ದು ಎಂದು ಹೇಳಿದ್ದಾರೆ.