ಮುಂಬಯಿ: ಎನ್‌ಸಿಪಿಯ ಎರಡು ದಿನಗಳ ಕಾಲ ನಿರಂತರವಾಗಿ ನಡೆದ ವಿಚಾರ ಮಂಥನ ಸಭೆಯು ಮಂಗಳವಾರ ಮುಕ್ತಾಯಗೊಂಡಿದೆ. ಸಭೆಯಲ್ಲಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಪಕ್ಷಗಳು ಮತ್ತೂಮ್ಮೆ ಮೈತ್ರಿಕೂಟವನ್ನು ರಚಿಸುವ ಇಚ್ಛೆಯನ್ನು ಎನ್‌ಸಿಪಿ ಮುಖಂಡರು ವ್ಯಕ್ತಪಡಿಸಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಪಕ್ಷವು ಕಾಂಗ್ರೆಸ್ ಜೊತೆಗೂಡಿ ಸ್ಫರ್ಧಿಸುವ ಸಾಧ್ಯತೆ ಹೆಚ್ಚಾಗಿದೆ. ಮೈತ್ರಿಕೂಟದಲ್ಲಿ ಚುನಾವಣೆ ಫಲಿತಾಂಶದತ್ತ ಕೊಂಡೊಯ್ಯುವ ಜವಾಬ್ದಾರಿ ಪಕ್ಷದ ಸಚಿವ ಪ್ರಫುಲ್ ಪಟೇಲ್ ಅವರಿಗೆ ನೀಡಿದ್ದಾರೆ. ಈ ವಿಷಯದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ಯಾರು ಒಪ್ಪಲಿ ಒಪ್ಪದಿರಲಿ ಕಾಂಗ್ರೆಸನ್ನು ಮುಂದೆ ತರಲು ಗಾಂಧಿ ಪರಿವಾರದ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಎನ್‌ಸಿಪಿಯು ಜೊತೆಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಬಹುದೆ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಪವಾರ್, ಯಾರ ನೇತೃತ್ವದಲ್ಲಿ ಎನ್ನುವುದು ಮುಖ್ಯವಲ್ಲ. ಮೈತ್ರಿಕೂಟದಲ್ಲಿ ಚುನಾವಣೆಗೆ ಕಡಿಮೆ ಕಾರ್ಯಸೂಚಿಯಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಹಾಗೂ ಹೊಸ ರೀತಿಯ ಯೋಜನೆಯ ಜೊತೆಗೆ ಹೇಗೆ ಮುಂದಾಗಬೇಕು ಎಂಬುದು ಮುಖ್ಯವಾಗಿದೆ. ಮೊದಲಿಗಿಂತಲೂ ರಾಹುಲ್ ಗಾಂಧಿ ಅವರಿಗೆ ಜನರಿಂದ ತುಂಬಾ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಅವರು ತುಂಬಾ ಜನಪ್ರಿಯರಾಗಿದ್ದಾರೆ. ಇದರಿಂದಾಗಿ ಬಿಜೆಪಿಯು ರಾಹುಲ್ ಗಾಂಧಿ ಅವರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಲಾರಂಭಿಸಿದೆ. ಮಾಜಿ ಪ್ರಧಾನ ಮಂತ್ರಿ ಡಾ| ಮನ್‌ಮೋಹನ್ ಸಿಂಗ್ ಅವರು ತುಂಬಾ ಸರಳ ಸ್ವಭಾವದವರು. ಅವರು ಯಾವ ವಿಷಯದ ಕುರಿತು ಮಾತನಾಡುತ್ತಾರೋ ಅದರಲ್ಲಿ ಮಹತ್ವದ ಅಂಶವಿರುತ್ತದೆ. ನೋಟ್‌ಬಂಧಿ ಹಾಗೂ ಜಿಎಸ್‌ಟಿಗಳ ಕುರಿತು ಅವರು ನೀಡಿದ ಟಿಪ್ಪಣಿ ನಿಜವಾಗಿದೆ. ಜಿಡಿಪಿ ಯು ಶೇ. 2ರಷ್ಟು ಕಡಿತವಾಗಿದೆ ಎಂದು ನುಡಿದು, ದೇಶದ ಕೃಷಿಯಲ್ಲಿ ಶೇ. 12ರಷ್ಟು ಅಭಿವೃದ್ಧಿಯ ಬಗ್ಗೆ ಸರಕಾರ ಹೇಳಿದ ಮಾತನ್ನು ತಿರಸ್ಕರಿಸಿದ್ದಾರೆ. ಇದು ಸರಕಾರದ ಜಾಹೀರಾತುಗಳಲ್ಲಿ ಮಾತ್ರ ಸಂಭವವಿದೆ ಎಂದು ಶರದ್ ಪವಾರ್ ತಿಳಿಸಿದ್ದಾರೆ.