Advertisement

ಸುಪ್ರೀಂ ಕದ ತಟ್ಟಿದ ‘ಟಾಟಾ’ ; ಕಂಪೆನಿಗೆ ಮಿಸ್ತ್ರಿ ಪುನರ್‌ ನೇಮಕ ಪ್ರಶ್ನಿಸಿ ಮೇಲ್ಮನವಿ

10:00 AM Jan 04, 2020 | Hari Prasad |

ಹೊಸದಿಲ್ಲಿ: ಟಾಟಾ ಸನ್ಸ್‌ ಕಂಪನಿ ಮುಖ್ಯ ಕಾರ್ಯ ನಿರ್ವಾಹಕ ಸೈರಸ್‌ ಮಿಸ್ತ್ರಿಯವರನ್ನು ಅದೇ ಸ್ಥಾನಕ್ಕೆ ಪುನರ್‌ ನೇಮಕ ಮಾಡಿದ್ದ ರಾಷ್ಟ್ರೀಯ ಕಂಪನಿ ಕಾನೂನುಗಳ ಮೇಲ್ಮನವಿ ನ್ಯಾಯಾಧಿಕರಣದ (ಎನ್‌ಸಿಎಲ್‌ಎಟಿ) ಆದೇಶದ ವಿರುದ್ಧ ಟಾಟಾ ಸನ್ಸ್‌ ಕಂಪನಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.

Advertisement

ಎನ್‌ಸಿ ಎಲ್‌ಎಟಿ ಆದೇಶ ಹೊರಬಿದ್ದ ದಿನದಿಂದ (ಡಿ. 18) ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಟಾಟಾ ಸನ್ಸ್‌ಗೆ 4 ವಾರಗಳ ಕಾಲಾವಕಾಶವಿತ್ತು. ರಜೆಯ ನಂತರ ಸುಪ್ರೀಂ ಕೋರ್ಟ್‌ ಜ. 6ರಿಂದ ಪುನಃ ಕಾರ್ಯಾರಂಭ ಮಾಡಲಿದ್ದು, ಈ ಪ್ರಕರಣವನ್ನು ತ್ವರಿತ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.

ಮೇಲ್ಮನವಿಯಲ್ಲಿ ಟಾಟಾ ಸನ್ಸ್‌, ‘ಸೈರಸ್‌ ಮಿಸ್ತ್ರಿಯವರ ವಜಾ ಪ್ರಕ್ರಿಯೆ ಕಾನೂನು ಬಾಹಿರ ಎಂದಿರುವ ಎನ್‌ಸಿಎಲ್‌ಎಟಿ, ಅದು ಹೇಗೆ ಕಾನೂನು ಬಾಹಿರ ಎನ್ನುವುದಕ್ಕೆ ಸ್ಪಷ್ಟನೆ ನೀಡಿಲ್ಲ ಎಂದು ಹೇಳಿದೆ. ಇನ್ನು, ಈ ತೀರ್ಪು, ಕಾರ್ಪೊರೇಟ್‌ ಪ್ರಜಾಪ್ರಭುತ್ವ ಹಕ್ಕುಗಳಿಗೆ ಹಾಗೂ ಕಾರ್ಪೊರೇಟ್‌ ಮಂಡಳಿಗಳ ಸದಸ್ಯರ ಹಕ್ಕುಗಳಿಗೆ ಚ್ಯುತಿ ತಂದಿದೆ. ಇದು ಮುಂದಿನ ದಿನಗಳಲ್ಲಿ ಕಾರ್ಪೊರೇಟ್‌ ವಲಯದಲ್ಲಿ ತಪ್ಪು ಆದೇಶಗಳಿಗೆ ಕಾರಣವಾಗುವಂಥ ‘ಅಪಾಯಕಾರಿ’ ತೀರ್ಪಾಗಿದೆ ಎಂದಿದೆ.

ಟಾಟಾ ಸನ್ಸ್‌ ಸಂಸ್ಥೆಯಲ್ಲಿ ಮಿಸ್ತ್ರಿಯವರ ಮುಖ್ಯ ಕಾರ್ಯನಿರ್ವಾಹಕರ ಸೇವಾವಧಿ 2017ರ ಮಾರ್ಚ್‌ನಲ್ಲೇ ಮುಗಿದಿರುವುದರಿಂದ ಈಗ ಅವರ ಮರುನೇಮಕ ಸಾಧ್ಯವಿಲ್ಲ. ಅದನ್ನು ತಮ್ಮ ದಾವೆಯಲ್ಲಿ ಮಿಸ್ತ್ರಿ ಕೇಳಿಯೂ ಇರಲಿಲ್ಲ. ಆದರೂ, ಅವರನ್ನು ಮರುನೇಮಿಸಲಾಗಿದೆ ಎಂದು ಟಾಟಾ ಸನ್ಸ್‌ ವಿವರಿಸಿದೆ. ಎನ್‌ಸಿಎಲ್‌ಎಟಿ ತೀರ್ಪಿನಲ್ಲಿ ಅನೇಕ ಗೊಂದಲಗಳಿವೆ ಎಂದು ಕಂಪನಿ ಅರ್ಜಿಯಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next