ಚಿಕ್ಕಬಳ್ಳಾಪುರ: ನಗರದ ಹೊರವಲಯದ ನಾಗಾರ್ಜುನ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಸ್ಕಾಲರ್‌ಶಿಫ್ ಘೋಷಿಸಿದೆ. ಸಿಇಟಿ ಘಟಕದಿಂದ 1 ರಿಂದ 5 ಸಾವಿರದೊಳಗೆ ರ್‍ಯಾಂಕ್ ಪಡೆದು, ನೇರವಾಗಿ ಇಲ್ಲಿನ ಎಂಜಿನಿಯರಿಂಗ್ ಕಾಲೇಜಿಗೆ ದಾಖಲಾತಿ ಪಡೆದರೆ ಟ್ಯೂಷನ್ ಶುಲ್ಕ, ಹಾಸ್ಟೆಲ್ ಹಾಗೂ ಸಾರಿಗೆ ಶುಲ್ಕದಿಂದ ವಿನಾಯಿತಿ ನೀಡಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಾಗಾರ್ಜುನ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶ್ರೀಕಂಠಮೂರ್ತಿ, ರಾಜ್ಯದ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜ್ ವಿಶೇಷವಾಗಿ ಸ್ಕಾಲರ್‌ಶಿಫ್ ಘೋಷಣೆ ಮಾಡಿದ್ದು, ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಿಇಟಿ ಘಟಕದಿಂದ 1 ರಿಂದ 5,000 ಒಳಗೆ ರ್‍ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ನಾಗಾರ್ಜುನ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿನಲ್ಲಿ ಟೂಷನ್ ಫೀ, ವಾರ್ಷಿಕ ಶುಲ್ಕ, ಹಾಸ್ಟೆಲ್ ಹಾಗೂ ಸಾರಿಗೆ ಶುಲ್ಕ ನೀಡಬೇಕಿಲ್ಲ. 5 ರಿಂದ 10 ಸಾವಿರದೊಳಗಿನ ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಟ್ಯೂಷನ್ ಶುಲ್ಕ ಸಂಪೂರ್ಣ ಉಚಿತ.
ಹಾಸ್ಟೆಲ್ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು. ಜೊತೆಗೆ, ಸಾರಿಗೆ ಸೌಲಭ್ಯ ಉಚಿತ. ಅದೇ ರೀತಿ 10 ಸಾವಿರದಿಂದ 20 ಸಾವಿರ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಟ್ಯೂಷನ್ ಹಾಗೂ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿ, ಹಾಸ್ಟೆಲ್ ಹಾಗೂ ಸಾರಿಗೆ ಸೌಲಭ್ಯವನ್ನು ಉಚಿತವಾಗಿ ನೀಡಲಾಗುವುದು ಎಂದರು.
ಪ್ರತಿ ವರ್ಷ ಸ್ಕಾಲರ್‌ಶಿಫ್: ಈ ಸ್ಕಾಲರ್‌ಶಿಫ್ ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ನೋಡಿಕೊಂಡು ಪ್ರತಿ ವರ್ಷ ಈ ಸ್ಕಾಲರ್‌ಶಿಫ್ ನೀಡುತ್ತೇವೆ. ನಾಗಾರ್ಜುನ ಕನ್ಸ್‌ಸ್ಟ್ರಷನ್ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಈ ಸ್ಕಾಲರ್‌ಶಿಫ್ ಕೊಡುತ್ತಿದ್ದು,
ಇದರ ಪ್ರಯೋಜನವನ್ನು ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಸಿಇಟಿ ಘಟಕದಿಂದ ನೇರವಾಗಿ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಮಾತ್ರವೇ ಈ ಸೌಲಭ್ಯ ಇದ್ದು, ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಪಿ.ಹರೀಶ್ (9845248463) ಅವರನ್ನು ಸಂಪರ್ಕಿಸಬಹುದು ಎಂದರು.