Advertisement

ಎನ್‌ಸಿಇಆರ್‌ಟಿಗೆ ನಿಯೋಜಿತ ವಿಶ್ವವಿದ್ಯಾನಿಲಯ ಸ್ಥಾನಮಾನ

11:52 PM Sep 17, 2022 | Team Udayavani |

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಯು ಸದ್ಯವೇ “ನಿಯೋಜಿತ ವಿಶ್ವವಿದ್ಯಾನಿಲಯ (ಡೀಮ್ಡ್ ಟು ಬಿ ಯುನಿವರ್ಸಿಟಿ) ಸ್ಥಾನಮಾನವನ್ನು ಪಡೆಯಲಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಎನ್‌ಸಿಇಆರ್‌ಟಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಪ್ರಸ್ತಾವನೆಗೆ ಅಂಗೀಕಾರ ಲಭಿಸಿದೆ. ಇದರಿಂದ ದೇಶದ ಶಿಕ್ಷಣ ಕ್ಷೇತ್ರಕ್ಕೆ ಏನು ಲಾಭವಾಗಲಿದೆ, ಹೊಸ ಸ್ಥಾನಮಾನ ಪಡೆದ ಬಳಿಕ ಏನೇನು ಬದಲಾವಣೆಗಳು ಆಗಲಿವೆ, ಎನ್‌ಸಿಇಆರ್‌ಟಿಗೆ ಏನು ಸಾಧ್ಯವಾಗಲಿದೆ ಎಂಬ ವಿವರಗಳು ಇಲ್ಲಿವೆ.

Advertisement

ಮಣಿಪಾಲ: ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ, ಸಂಶೋಧನೆ, ಆವಿಷ್ಕಾರ, ನೀತಿ ರೂಪಣೆಯಂಥ ಚಟುವಟಿಕೆಗಳಲ್ಲಿ ತೊಡಗಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಯು “ಡಿ -ನೊವೊ’ ವಿಭಾಗದಲ್ಲಿ ನಿಯೋಜಿತ ವಿಶ್ವವಿದ್ಯಾನಿಲಯ ಸ್ಥಾನಮಾನವನ್ನು ಪಡೆಯಲಿದೆ.

“ಡಿ-ನೊವೊ ನಿಯೋಜಿತ ವಿ.ವಿ.’ ಎಂದರೇನು?
ಅಸ್ತಿತ್ವದಲ್ಲಿ ಇರುವ ಇತರ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲದ, ನವೀನ ಮತ್ತು ಉದಯಿಸುತ್ತಿರುವ ಜ್ಞಾನ ಕ್ಷೇತ್ರಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗುವ ಉದ್ದೇಶದಿಂದ ಹೊಸ ಸಂಸ್ಥೆಯನ್ನು ಹುಟ್ಟುಹಾಕಲು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ಕ್ಕೆ ಕೋರಿಕೆ ಸಲ್ಲಿಸಬಹುದಾದ ಶಿಕ್ಷಣ ಸಂಸ್ಥೆಯನ್ನು ಡಿ-ನೊವೊ ನಿಯೋಜಿತ ವಿಶ್ವವಿದ್ಯಾನಿಲಯ ಎನ್ನಲಾಗುತ್ತದೆ.

ಏನಿದು ಎನ್‌ಸಿಇಆರ್‌ಟಿ?
ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ರಾಷ್ಟ್ರಮಟ್ಟದ ಅತ್ಯುಚ್ಚ ಸಂಸ್ಥೆ ಇದು. ಶೈಕ್ಷಣಿಕ ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳು, ಶಾಲಾ ಶೈಕ್ಷಣಿಕ ಪಠ್ಯಕ್ರಮ ಅಭಿವೃದ್ಧಿ, ಬೋಧನೆ ಮತ್ತು ಕಲಿಕೆಯ ಸಾಮಗ್ರಿಗಳ ಅಭಿವೃದ್ಧಿಗಳ ಸಹಿತ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಎನ್‌ಸಿಇ
ಆರ್‌ಟಿ ಕೈಗೊಳ್ಳುತ್ತದೆ.

ಪ್ರಸ್ತುತ ಸ್ಥಿತಿಗತಿ ಏನು?
ಪ್ರಸ್ತುತ ಎನ್‌ಸಿಇಆರ್‌ಟಿಯ ಪ್ರಾಂತೀಯ ಶಿಕ್ಷಣ ಸಂಸ್ಥೆಗಳು (ಆರ್‌ಇಐಗಳು) ಒದಗಿಸುವ ಸ್ನಾತಕ ಮತ್ತು ಸ್ನಾತಕೋತ್ತರ ಕಲಿಕೆಗಳಿಗೆ ಪದವಿಗಳನ್ನು ನೀಡುವ ಸಂಸ್ಥೆಗಳು ವಿವಿಧ ರಾಜ್ಯಗಳ ವಿಶ್ವವಿದ್ಯಾನಿಲಯಗಳು ಮತ್ತು ಒಂದು ರಾಷ್ಟ್ರೀಯ ವಿಶ್ವವಿದ್ಯಾನಿಲಯ (ಎನ್‌ಇಎಚ್‌ಯು)ಕ್ಕೆ ಸಂಯೋಜನೆಗೊಂಡಿವೆ. ಉದಾಹರಣೆಗೆ, ಕರ್ನಾಟಕದಲ್ಲಿ ಇರುವ ಪ್ರಾಂತೀಯ ಶೈಕ್ಷಣಿಕ ಸಂಶೋಧನ ಸಂಸ್ಥೆಯಲ್ಲಿ ಇರುವ ಕಲಿಕೆಗಳಿಗೆ ಮೈಸೂರು ವಿ.ವಿ. ಪದವಿ ನೀಡುತ್ತದೆ.

Advertisement

ಐಎನ್‌ಐ ಸ್ಥಾನಮಾನ ಇನ್ನೂ ಸಿಕ್ಕಿಲ್ಲ
-ಎನ್‌ಸಿಇಆರ್‌ಟಿಯು ರಾಷ್ಟ್ರೀಯ ಮಹತ್ವದ ಸಂಸ್ಥೆ (ಐಎನ್‌ಐ) ಸ್ಥಾನಮಾನ ಪಡೆಯಲು ಪ್ರಯತ್ನಿಸುತ್ತಿದೆಯಾದರೂ ಅದು ಸಾಧ್ಯವಾಗಿಲ್ಲ.
– ಮಾನವ ಸಂಪದಭಿವೃದ್ಧಿ ಸಚಿವಾಲಯವು ಪ್ರೊ| ಗೋವರ್ಧನ ಮೆಹತಾ ಅವರ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು 2010ರಲ್ಲಿ ಎನ್‌ಸಿಇಆರ್‌ಟಿಗೆ ಐಎನ್‌ಐ ಸ್ಥಾನಮಾನ ನೀಡಬೇಕೆಂದು ಶಿಫಾರಸು ಮಾಡಿತ್ತು. ಆದರೆ ಅದು ಸಾಧ್ಯವಾಗಿಲ್ಲ.

ಡೀಮ್ಡ್ ವಿ.ವಿ. ಸ್ಥಾನಮಾನದಿಂದ
ಏನಾಗುತ್ತದೆ?
01. ಶೈಕ್ಷಣಿಕ ಸಂಶೋಧನೆ, ನಾವೀನ್ಯ ಗಳನ್ನು ಪ್ರವರ್ಧಿಸುವ ಎನ್‌ಸಿಇಆರ್‌ಟಿಯ ಪ್ರಯತ್ನಗಳಿಗೆ ಇಂಬು ಸಿಗಲಿದೆ.
02. ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಶೈಕ್ಷಣಿಕ, ಸಂಶೋಧನ ಸಂಸ್ಥೆಗಳ ಜತೆಗೆ ಸಹಭಾಗಿತ್ವ ಸಾಧ್ಯವಾಗಲಿದೆ.
03. ಎನ್‌ಸಿಇಆರ್‌ಟಿಯ ರಾಷ್ಟ್ರೀಯ ಶೈಕ್ಷಣಿಕ ಚಿಂತನ ಚಿಲುಮೆ(ಥಿಂಕ್‌ ಟ್ಯಾಂಕ್‌)ಯ ಪಾತ್ರಕ್ಕೆ ಒತ್ತು ದೊರೆಯುತ್ತದೆ.
04. ಶಾಲಾ ಶಿಕ್ಷಣ, ವೃತ್ತಿಪರ ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ಶೈಕ್ಷಣಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯ ಸರಕಾರ ಗಳಿಗೆ ತಾಂತ್ರಿಕ ಸಹಕಾರವನ್ನು ಒದಗಿಸುವ ರಾಷ್ಟ್ರೀಯ ಸಂಪನ್ಮೂಲ ಸಂಸ್ಥೆಯಾಗಿ ಎನ್‌ಸಿಇಆರ್‌ಟಿಯ ಹೊಣೆಗಾರಿಕೆ ಹೆಚ್ಚಲಿದೆ.
05. 1961ರಲ್ಲಿ ಎನ್‌ಸಿಇಆರ್‌ಟಿ ಸ್ಥಾಪನೆ ಯಾಯಿತು. ಸರಕಾರಗಳಿಗೆ ಶಾಲಾ ಶಿಕ್ಷಣ ವಿಚಾರದಲ್ಲಿ ನೆರವು ಮತ್ತು ಸಲಹೆ ನೀಡುವುದಕ್ಕಾಗಿ ಸೊಸೈಟಿಗಳ ಕಾಯ್ದೆಯಡಿ ಇದನ್ನು ಸ್ಥಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next