ಬೆಂಗಳೂರು: ಈ ವರ್ಷ ಪ್ರಥಮ ಪಿಯುಸಿ ಗಣಕ ವಿಜ್ಞಾನ, ಮನಃಶಾಸ್ತ್ರ ಮತ್ತು ಗೃಹವಿಜ್ಞಾನ ವಿಷಯಗಳಿಗೆ ಎನ್‌ಸಿಇಆರ್‌ಟಿ (ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಗಾಗಿನ ರಾಷ್ಟ್ರೀಯ ಪರಿಷತ್) ಪಠ್ಯವನ್ನು ಬೋಧಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಈವರೆಗೆ ರಾಜ್ಯಪಠ್ಯಕ್ರಮದಲ್ಲಿ ಈ ಮೂರು ವಿಷಯಗಳ ಬೋಧನೆ ನಡೆಯುತ್ತಿತ್ತು. ಆದರೆ ಈ ಶೈಕ್ಷಣಿಕ ವರ್ಷದಿಂದ ಎನ್‌ಸಿಇಆರ್‌ಟಿ ಪಠ್ಯವನ್ನೇ ಅಧಿಕೃತ ಪಠ್ಯವನ್ನಾಗಿ ಅಳವಡಿಸಲಾಗುತ್ತದೆ ಎಂದು ಪಿಯು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಪ್ರಥಮ ವರ್ಷದ ಪಿಯುನಲ್ಲಿ ಈ ಮೂರು ವಿಷಯಗಳಿಗೆ ಎನ್‌ಸಿಇಆರ್‌ಟಿ ಪಠ್ಯ ಪರಿಚಯಗೊಳ್ಳಲಿದ್ದು ಮುಂದಿನ ಶೈಕ್ಷಣಿಕ ವರ್ಷಕ್ಕೆ ದ್ವಿತೀಯ ಪಿಯುಸಿಗೂ ವಿಸ್ತರಣೆಗೊಳ್ಳಲಿದೆ.
ರಾಜ್ಯದಲ್ಲಿ ವಿಜ್ಞಾನ ವಿಷಯಗಳಿಗೆ 2012-13ರ ಸಾಲಿನಿಂದಲೇ ಎನ್‌ಸಿಇಆರ್‌ಟಿ ಪಠ್ಯವನ್ನು ಬೋಧಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ವಿಷಯಗಳು ಎನ್‌ಸಿಇಆರ್‌ಟಿ ಪಠ್ಯಕ್ರಮದ ವ್ಯಾಪ್ತಿಯಲ್ಲಿವೆ. ಉಳಿದಂತೆ ವಾಣಿಜ್ಯ ವಿಷಯದಲ್ಲಿ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರಗಳಿಗೆ ಎನ್‌ಸಿಇಆರ್‌ಟಿ ಪಠ್ಯವನ್ನು ಬೋಧಿಸಲಾಗುತ್ತಿದೆ.
ವಿಜ್ಞಾನದ ಸಂಯೋಜನೆಯಲ್ಲಿರುವ ಕಂಪ್ಯೂಟರ್ ಸೈನ್ಸ್‌ನು° ಎನ್‌ಸಿಇಆರ್‌ಟಿ ಪಠ್ಯಕ್ರಮದ ವ್ಯಾಪ್ತಿಗೆ ತರಬೇಕು ಎಂಬ ಅಭಿಪ್ರಾಯ ಶೈಕ್ಷಣಿಕ ವಲಯದಲ್ಲಿ ಕೆಲ ವರ್ಷಗಳಿಂದ ಇತ್ತು. ಇದೀಗ ಕಂಪ್ಯೂಟರ್ ಸೈನ್ಸ್‌ಗೂ ಎನ್‌ಸಿಇಆರ್‌ಟಿ ಪಠ್ಯಕ್ರಮ ಬಂದಿದ್ದು ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.
ರಾಜ್ಯದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯ ಜಾರಿಯಾಗಿ ಹಲವು ವರ್ಷಗಳೇ ಸರಿದಿದ್ದರೂ ಸಹ ಕಲಾ ವಿಷಯದಲ್ಲಿ ಮಾತ್ರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹೊರತಂದಿರುವ ಪಠ್ಯ ಪುಸ್ತಕಗಳನ್ನೇ ಅಧಿಕೃತ ಎಂದು ಅಳವಡಿಸಲಾಗಿತ್ತು. ಆದರೆ ಇದೀಗ ಮನಃಶಾಸ್ತ್ರ ಮತ್ತು ಗೃಹ ವಿಜ್ಞಾನಕ್ಕೆ ಎನ್‌ಸಿಇಆರ್‌ಟಿ ಪಠ್ಯ ಅಳವಡಿಸುವುದರೊಂದಿಗೆ ಕಲಾ ವಿಭಾಗದಲ್ಲಿಯೂ ಎನ್‌ಸಿಇಆರ್‌ಟಿ ಪಠ್ಯ ಪರಿಚಯವಾದಂತಾಗಿದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ 2.50 ಲಕ್ಷ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್, 3,400 ವಿದ್ಯಾರ್ಥಿಗಳು ಸೈಕಾಲಜಿ ಮತ್ತು 1,200 ವಿದ್ಯಾರ್ಥಿಗಳು ಹೋಮ್ ಸೈನ್ಸ್ ವಿಷಯವನ್ನು ಓದಿದ್ದರು.
ಜೂನ್ 1ರಿಂದ ಪಿಯು ತರಗತಿ ಆರಂಭ
ಜೂನ್ ಒಂದರಿಂದ ಪಿಯು ತರಗತಿಗಳು ಆರಂಭಗೊಳ್ಳಲಿದ್ದು ಮೊದಲ ಅವಧಿ ಅಕ್ಟೋಬರ್ 10ರವರೆಗೆ ಇರಲಿದೆ. ಎರಡನೇ ಅವಧಿ ಅಕ್ಟೋಬರ್ 19ರಿಂದ 2025ರ ಮಾರ್ಚ್ 31ರವರೆಗೆ ಇರಲಿದೆ. ಏಪ್ರಿಲ್ ಒಂದರಿಂದ ಬೇಸಿಗೆ ರಜೆ ಆರಂಭಗೊಳ್ಳಲಿದೆ.
-ರಾಕೇಶ್ ಎನ್.ಎಸ್.