ಹೊಸದಿಲ್ಲಿ: ಇಂಡಿಯಾ ಬದಲು ಭಾರತ್ ಹೆಸರಿನ ಬಳಕೆ ಕುರಿತು ಹಲವು ಚರ್ಚೆ, ಪ್ರಸ್ತಾಪಗಳು ಕೇಳಿಬಂದಿದ್ದ ಬೆನ್ನಲ್ಲೇ, ಈಗ ಎಲ್ಲ ತರಗತಿಗಳ ಶಾಲಾ ಪಠ್ಯ ಪುಸ್ತಕಗಳಲ್ಲಿ ಇಂಡಿಯಾ ಪದವನ್ನು “ಭಾರತ’ ಎಂಬುದಾಗಿ ಬದಲಿಸುವಂತೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ)ಉನ್ನತ ಸಮಿತಿ ಶಿಫಾರಸು ಮಾಡಿದೆ.
ಪಠ್ಯಕ್ರಮ ಪರಿಷ್ಕರಿಸಲು ಎನ್‌ಸಿಇಆರ್‌ಟಿ ರಚಿಸಿರುವ ಸಾಮಾಜಿಕ ವಿಜ್ಞಾನಗಳ ಉನ್ನತ ಮಟ್ಟದ ಸಮಿತಿ ಈ ಶಿಫಾರಸು ಮಾಡಿದೆ ಎಂದು ಸಮಿತಿ ಅಧ್ಯಕ್ಷ ಸಿ.ಐ. ಐಸಾಕ್ ತಿಳಿಸಿದ್ದಾರೆ.
ಇಂಡಿಯಾ ಅನ್ನು ಭಾರತವೆಂದು ಬದಲಾಯಿಸುವುದು ಮಾತ್ರವಲ್ಲದೆ, “ಪ್ರಾಚೀನ ಇತಿಹಾಸ’ದ ಬದಲಿಗೆ “ಶಾಸ್ತ್ರೀಯ ಇತಿಹಾಸ’ ಎಂದು ಬಳ ಸಲೂ ಶಿಫಾರಸು ನೀಡಲಾಗಿದೆ. ಜತೆಗೆ ಪ್ರಸಕ್ತ ಪಠ್ಯ ಪುಸ್ತಕಗಳಲ್ಲಿ ಭಾರತದ ಹಿಂದೂ ರಾಜರ ಸೋಲು, ಯುದ್ಧಗಳ ವೈಫಲ್ಯವನ್ನು ಉಲ್ಲೇಖೀಸಲಾಗಿದೆ. ಆದರೆ ಮೊಘಲರು ಮತ್ತು ಸುಲ್ತಾನರ ವಿರುದ್ಧದ ದಿಗ್ವಿಜಯಗಳನ್ನು ಉಲ್ಲೇಖಸಲಾಗಿಲ್ಲ. ಈ ನಿಟ್ಟಿನಲ್ಲಿ ಹಿಂದೂ ಅರಸರ ದಿಗ್ವಿಜಯಗಳನ್ನು ಹೆಚ್ಚೆಚ್ಚು ಉಲ್ಲೇಖಿಸಿದಂತೆ ಮತ್ತು ಎಲ್ಲ ವಿಷಯಗಳ ಪಠ್ಯಕ್ರಮಗಳಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್) ಪರಿಚಯಿಸುವಂತೆ ಶಿಫಾರಸು ಮಾಡಲಾಗಿದೆ ಎಂದಿದ್ದಾರೆ. ಆದರೆ ಎನ್‌ಸಿಇಆರ್‌ಟಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಐಸಾಕ್ ಜತೆಗೆ ಐಸಿಎಚ್‌ಆರ್ ಮುಖ್ಯಸ್ಥ ರಾಘವೇಂದ್ರ ತನ್ವಾರ್, ಜೆಎನ್‌ಯುನ ಪ್ರೊ| ವಂದನಾ ಮಿಶ್ರಾ, ಡೆಕ್ಕನ್ ಕಾಲೇಜ್ ಡೀಮ್ಡ್ ವಿವಿ ಮಾಜಿ ಉಪ ಕುಲಪತಿ ವಸಂತ್ ಶಿಂಧೆ, ಹರಿಯಾಣ ಸರಕಾರಿ ಶಾಲೆಯ ಸಮಾಜಶಾಸ್ತ್ರ ಶಿಕ್ಷಕಿ ಮಮತಾ ಯಾದವ್ ಸಮಿತಿಯಲ್ಲಿದ್ದಾರೆ.