ನವದೆಹಲಿ: ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ತೃತೀಯಲಿಂಗಿಗಳಿಗೆ ಸಮಾನ ಹಕ್ಕು ಕಲ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಮಿತಿ ಕೆಲವು ಶಿಫಾರಸುಗಳನ್ನು ಮಾಡಿದೆ.
ಎಲ್ಲ ವಿದ್ಯಾರ್ಥಿಗಳಿಗೆ ಲಿಂಗ ತಾರತಮ್ಯವಿಲ್ಲದ ಸಮವಸ್ತ್ರ ನೀತಿ, ಸುರಕ್ಷಿತ ಶೌಚಾಲಯ ಹಾಗೂ ಪಠ್ಯಕ್ರಮಗಳಲ್ಲಿ ತೃತೀಯ ಲಿಂಗಗಳಿಗೆ ಸಂಬಂಧಿತ ವಿಚಾರಗಳನ್ನು ಸೇರ್ಪಡೆಗೊಳಿಸುವುದನ್ನು ಶಿಫಾರಸಿನಲ್ಲಿ ಉಲ್ಲೇಖಿಸಿದೆ.
16 ಸದಸ್ಯರನ್ನೊಳಗೊಂಡ ಸಮಿತಿಯು “ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ತೃತೀಯ ಲಿಂಗಿಗಳ ಕಾಳಜಿ’ ಎನ್ನುವ ಶೀರ್ಷಿಕೆಯೊಂದಿಗೆ ಕರಡು ಶಿಫಾರಸನ್ನು ಬಿಡುಗಡೆಗೊಳಿಸಿದೆ. 6ನೇ ತರಗತಿಯ ಮಕ್ಕಳಿಂದ ಹಿಡಿದು ಮುಂದಿನ ಎಲ್ಲ ಹಂತದ ಮಕ್ಕಳಿಗೂ ಲಿಂಗ ತಟಸ್ಥ ಸಮವಸ್ತ್ರ ವಿನ್ಯಾಸಗೊಳಿಸಬೇಕೆಂದು ಹೇಳಿದೆ.
ಜತೆಗೆ ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲಿ ಎಲ್ಲ ಮಕ್ಕಳಿಗೂ ಸಮಾನ ಹಕ್ಕು ಕಲ್ಪಿಸಬೇಕಿದ್ದು, ಪಠ್ಯಕ್ರಮದಲ್ಲಿ ತೃತೀಯ ಲಿಂಗಿಗಳ ಬಗ್ಗೆ ಅರಿವು ನೀಡವ ವಿಚಾರಗಳನ್ನು ಸೇರ್ಪಡೆಗೊಳಿಸಬೇಕು. ಈ ಕುರಿತು ಶಿಕ್ಷಕರು ಮಕ್ಕಳಿಗೆ ಮುಕ್ತವಾಗಿ ಶಿಕ್ಷಣ ನೀಡಬೇಕು ಎಂದಿದೆ.
ಸುರಕ್ಷಿತ ಶೌಚಾಲಯಗಳನ್ನು ಕಲ್ಪಿಸಿಕೊಡಬೇಕಿರುವುದು ಆದ್ಯತೆಯ ಅಂಶವೆಂದು ಸಮಿತಿ ಹೇಳಿದೆ.