ದಾವಣಗೆರೆ: ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮ ಮುಂದುವರಿಸಲು ಆಗ್ರಹಿಸಿ ಕಾರ್ಯಕ್ರಮದ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿ, ಮನವಿ ಸಲ್ಲಿಸಿದರು. 2013-14ನೇ ಸಾಲಿನಲ್ಲಿ ಜಾರಿಗೆ ಬಂದ ಈ ಕಾರ್ಯಕ್ರಮ ಅನೇಕ ಕಾಯಿಲೆ ನಿವಾರಣೆಗೆ ಸಹಾಯಕವಾಗಿದೆ. ಇದನ್ನು ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.
ಹೊರಗುತ್ತಿಗೆ ಆಧಾರದಲ್ಲಿ ಕಳೆದ 3 ವರ್ಷಗಳಿಂದ ನಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ದಾವಣಗೆರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿ ಮಧುಮೇಹ, ರಕ್ತದೊತ್ತಡ, ಗರ್ಭಕೋಶದ ಕ್ಯಾನ್ಸರ್ ಪತ್ತೆಹಚ್ಚಿ, ಅವರಿಗೆ ಚಿಕಿತ್ಸೆಗೆ ನೆರವಾಗುವ ಎಸ್ ಸಿಡಿ ಕಾರ್ಯಕ್ರಮ ಗ್ರಾಮಾಂತರ ಜನರ ಆರೋಗ್ಯ ಸುಧಾರಣೆಗೆ ಬಹಳ ಸಹಕಾರಿಯಾಗಿತ್ತು.
ರೋಗಪೀಡಿತರ ಎಲ್ಲಾ ದಾಖಲೆ, ಮಾಹಿತಿ ಪಡೆದು ಸರ್ಕಾರಕ್ಕೆ ನೀಡುತ್ತಿದ್ದೆವು. ಗುಡ್ಡಗಾಡು ಪ್ರದೇಶದ ಜನರಿಗೆ ಇಂತಹ ಯೋಜನೆ ಅತೀ ಅವಶ್ಯಕವಾಗಿ ಬೇಕಿದೆ. ಆದರೆ, ಇದೀಗ ಸರ್ಕಾರ ಮಾ.15ರಿಂದ ಈ ಸೇವೆಯನ್ನು ಸಂಪೂರ್ಣ ನಿಲ್ಲಿಸಲು ಮುಂದಾಗಿದೆ. ಇದು ಆತುರದ ನಿರ್ಧಾರ ಎಂದು ಪ್ರತಿಭಟನಾಕಾರು ದೂರಿದರು.
ನಮ್ಮಲ್ಲಿ ಬಹುತೇಕರು ಬಡ ಕುಟುಂಬವರಿದ್ದೇವೆ. ಇದೀಗ ಏಕಾಏಕಿ ನಮ್ಮನ್ನು ಸೇವೆಯಿಂದ ವಜಾ ಮಾಡಿರುವುದಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡ ಕಂಪನಿ ತಿಳಿಸಿದೆ. ನಮ್ಮ ಮುಂದಿನ ಜೀವನ ಮತ್ತು ಜನರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.
ಬಿ. ರೂಪಾ, ಇ. ನಿರ್ಮಲ, ಆರ್. ಪಾವನ, ಎನ್.ಬಿ. ರಂಜಿತ, ಡಿ. ರಾಧ, ವೈ. ರೇಖಾ, ಆರ್. ಸುನೀತಾ ಬಾರಿ, ಜೆ.ಎಸ್. ರೇವತಿ, ವಿಜಯಲಕ್ಷ್ಮಿ, ರೋಜಾ ಸೇರಿ ಜಿಲ್ಲೆಯ ವಿವಿಧ ಕಡೆ ಸೇವೆ ಸಲ್ಲಿಸುತ್ತಿದ್ದ ಎಸ್‌ಸಿಡಿ ಸಿಬ್ಬಂದಿ ಧರಣಿಯಲ್ಲಿ ಪಾಲ್ಗೊಂಡಿದ್ದರು.