Advertisement

ಡ್ರಗ್ಸ್‌ ಪ್ರಕರಣ: ಕಳೆದ 2 ತಿಂಗಳಲ್ಲಿ 27 ಮಂದಿ ಎನ್‌ಸಿಬಿ ಬಲೆಗೆ

11:30 AM Dec 03, 2022 | Team Udayavani |

ಬೆಂಗಳೂರು: ಎಲ್‌ಎಸ್‌ಡಿ, ಹೈಡ್ರೋಗಾಂಜಾ, ಹ್ಯಾಶಿಷ್‌, ಕೊಕೇನ್‌ ಸೇರಿದಂತೆ ವಿವಿಧ ಮಾದರಿಯ ಮಾದಕ ವಸ್ತು ಮಾರಾಟ, ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಭಾಗದ ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಕಳೆದ 2 ತಿಂಗಳಿನಲ್ಲಿ 27 ಮಂದಿಯನ್ನು ಬಂಧಿಸಿದ್ದಾರೆ.

Advertisement

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಎನ್‌ಸಿಬಿ, ಹೈಡ್ರೋ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ 9 ಪ್ರಕರಣ ದಾಖಲಿಸಿಕೊಂಡು 15 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ಎಲ್‌ಎಸ್‌ಡಿ, ಹೈಡ್ರೋಗಾಂಜಾ, ಹ್ಯಾಶಿಷ್‌, ಕೊಕೇನ್‌ ಸೇರಿದಂತೆ ಬೇರೆ ಮಾದರಿಯ ಡ್ರಗ್ಸ್‌ ಡೀಲ್‌ನಲ್ಲಿ 27 ಮಂದಿಯನ್ನು ಸೆರೆ ಹಿಡಿಯಲಾಗಿದೆ. ಎನ್‌ಸಿಬಿಯು ಡ್ರಗ್ಸ್‌ ಪೂರೈಕೆ ಹಾಗೂ ಮಾರಾಟ ಮಾಡುವವರನ್ನು ಮಾತ್ರವಲ್ಲದೇ, ಇದನ್ನು ಪೂರೈಸಲು ಸಹಾಯ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ಕೊಟ್ಟಿದೆ.

ಬಂಧಿತರ ಪೈಕಿ ಬಹುತೇಕ ಮಂದಿ ಡಾರ್ಕ್‌ನೆಟ್‌ ವೆಬ್‌ ಸೈಟ್‌, ಟೆಲಿಗ್ರಾಮ್‌, ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲೇ ಡೀಲ್‌ ಕುದುರಿಸುತ್ತಿದ್ದ ಸಂಗತಿ ಬಯಲಾಗಿದೆ. ಬಂಧಿತರ ಪೈಕಿ ಬಹುತೇಕ ಮಂದಿ 20 ರಿಂದ 25 ವರ್ಷದ ಸಾಫ್ಟ್ವೇರ್‌, ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಾಗಿದ್ದು, ಕೋಲ್ಕತಾ, ಚೆನ್ನೈ, ದೆಹಲಿ ಸೇರಿ ದೇಶದ ಪ್ರಮುಖ ನಗರದ ಮೂಲದವರಾಗಿದ್ದಾರೆ. ಶಿಕ್ಷಣ, ಕೆಲಸಕ್ಕಾಗಿ ತಮ್ಮ ಊರಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ ಎಂದು ಎನ್‌ಸಿಬಿ ಹೇಳಿದೆ.

ಕೊರಿಯರ್‌ ಮೂಲಕ ಡ್ರಗ್ಸ್‌ ಪೂರೈಕೆ: ಒಂದು ಪ್ರತ್ಯೇಕ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿ ಮೂಲದ ಓರ್ವ ಪೆಡ್ಲರ್‌ ಸ್ಥಳೀಯ ಕೊರಿಯರ್‌ ಸಂಸ್ಥೆಯೊಂದರ ಸಹಕಾರದಿಂದ ದೇಶಾದ್ಯಂತ ಇರುವ ತನ್ನ ಗ್ರಾಹಕರಿಗೆ ಡ್ರಗ್ಸ್‌ ಪೂರೈಸುತ್ತಿದ್ದ. ವಾಟ್ಸ್‌ಆ್ಯಪ್‌ನಲ್ಲಿ ಡೀಲ್‌ ಕುದುರಿಸಿ, ಆನ್‌ ಲೈನ್‌ನ ಮೂಲಕ ತನ್ನ ಬ್ಯಾಂಕ್‌ ಖಾತೆಗೆ ಗ್ರಾಹಕರಿಂದ ಹಣ ಹಾಕಿಸುತ್ತಿದ್ದ ಎಂದು ಎನ್‌ಸಿಬಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next