ಮುಂಬೈ: ಎನ್ ಸಿಬಿ(ಮಾದಕ ವಸ್ತು ನಿಯಂತ್ರಣ ಬ್ಯುರೋ)ಯ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಮತ್ತು ಐವರು ಅಧಿಕಾರಿಗಳ ಮೇಲೆ ಡ್ರಗ್ ಪೆಡ್ಲರ್ಸ್ಸ್ ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿ ಹಲ್ಲೆ ನಡೆಸಿರುವ ಘಟನೆ ಸೋಮವಾರ(ನವೆಂಬರ್ 23, 2020) ನಡೆದಿದೆ.
ಮಾಧ್ಯಮದ ವರದಿ ಪ್ರಕಾರ, ವಾಂಖೇಡೆ ಹಾಗೂ ಅವರ ತಂಡದ ಅಧಿಕಾರಿಗಳ ಮೇಲೆ ಸುಮಾರು 60 ಜನರ ಗುಂಪೊಂದು ಹಲ್ಲೆ ನಡೆಸಿರುವುದಾಗಿ ವಿವರಿಸಿದೆ. ಘಟನೆಯಲ್ಲಿ ಎನ್ ಸಿಬಿಯ ಇಬ್ಬರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.
ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದ ಕ್ಯಾರಿ ಮಾಂಡೀಸ್ ಎಂಬಾತನನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಲು ತೆರಳಿದ ವೇಳೆ ಈ ಘಟನೆ ನಡೆದಿದೆ ಎಂದು ವರದಿ ಹೇಳಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಮುಂಬೈ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಹಲ್ಲೆಕೋರರಿಂದ ಎನ್ ಸಿಬಿ ಅಧಿಕಾರಿಗಳನ್ನು ರಕ್ಷಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ರೋಶನ್ ಬೇಗ್ ನಮ್ಮ ಪಕ್ಷದಲ್ಲಿಲ್ಲ, ನಮಗೂ ಅವರಿಗೂ ಸಂಬಂಧವಿಲ್ಲ: ಸಿದ್ದರಾಮಯ್ಯ
ಮುಂಬೈ ಪೊಲೀಸರು ಕ್ಯಾರಿ ಮಾಂಡೀಸ್ ಹಾಗೂ ಇತರ ಮೂವರು ಸಹಚರರನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 353ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.