ಮುಂಬೈ:ಮಾದಕ ವಸ್ತು ಜಾಲದ ತನಿಖೆಯನ್ನು ಎದುರಿಸುತ್ತಿರುವ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಲು ನೆರವು ನೀಡಿರುವ ಸಂಶಯದ ಆರೋಪದ ಮೇಲೆ ಎನ್ ಸಿಬಿ(ಮಾದಕ ವಸ್ತು ನಿಯಂತ್ರಣ ಬ್ಯುರೋ)ಯ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಡ್ರಗ್ಸ್ ಪ್ರಕರಣದಲ್ಲಿ ಕಾಮಿಡಿಯನ್ ಭಾರತಿ ಸಿಂಗ್, ಪತಿ ಹರ್ಷ್ ಲಿಂಬಾಚಿಯಾ ಮತ್ತು ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಈ ಇಬ್ಬರು ಅಧಿಕಾರಿಗಳು ನಡೆಸುತ್ತಿದ್ದರು ಎಂದು ವರದಿ ತಿಳಿಸಿದೆ.
ಇಬ್ಬರು ಅಧಿಕಾರಿಗಳ ಶಾಮೀಲು ಹೊಂದಿರುವ ಜತೆಗೆ ಮತ್ತೊಂದೆಡೆ ಎನ್ ಸಿಬಿಯ ಪ್ರಾಸಿಕ್ಯೂಟರ್ ಮೇಲೂ ನಿಗಾ ವಹಿಸಲಾಗಿದೆ ಎಂದು ವರದಿ ಹೇಳಿದೆ. ಮೂಲಗಳ ಪ್ರಕಾರ, ಆರೋಪಿಗಳ ವಿರುದ್ಧದ ಎರಡು ಪ್ರಕರಣಗಳಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುವ ದಿನ ಇಬ್ಬರು ತನಿಖಾಧಿಕಾರಿಗಳು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಗೈರು ಹಾಜರಾಗಿದ್ದರು. ಇದರಿಂದಾಗಿ ಇಬ್ಬರು ಆರೋಪಿಗಳಿಗೂ ಜಾಮೀನು ಮಂಜೂರಾಗಿತ್ತು.
ಇದನ್ನೂ ಓದಿ:ಬದುಕಿಗಾಗಿ ಗುಜರಿ ಆಯುತ್ತಿದ್ದ ಹುಡುಗ, ಅಂತಾರಾಷ್ಟ್ರೀಯ ಮಟ್ಟದ ಫೋಟೋಗ್ರಾಫರ್ ಆಗಿ ಬೆಳೆದ ಕಥೆ
ಅಕ್ಟೋಬರ್ 21ರಂದು ಡ್ರಗ್ ಪೆಡ್ಲರ್ ನೀಡಿರುವ ಮಾಹಿತಿ ಆಧಾರದ ಮೇಲೆ ಎನ್ ಸಿಬಿ ಅಧಿಕಾರಿಗಳು ನಟಿ ಭಾರತಿ ಸಿಂಗ್ ಹಾಗೂ ಪತಿ ಹರ್ಷ್ ಲಿಂಬಾಚಿಯಾ ನಿವಾಸದ ಮೇಲೆ ದಾಳಿ ನಡೆಸಿ 86.5 ಗ್ರಾಮ್ಸ್ ಮರಿಜುವಾನಾ ವಶಪಡಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 22ರಂದು ಇಬ್ಬರಿಗೂ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಅಕ್ಟೋಬರ್ 23ರಂದು ಜಾಮೀನು ಕೋರಿ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಇಬ್ಬರು ತನಿಖಾಧಿಕಾರಿಗಳು ಮತ್ತು ಪ್ರಾಸಿಕ್ಯೂಟರ್ ಜಾಮೀನು ವಿಚಾರಣೆ ವೇಳೆ ಗೈರು ಹಾಜರಾಗಿದ್ದರಿಂದ ಭಾರ್ತಿ ಮತ್ತು ಹರ್ಷ್ ಗೆ ಜಾಮೀನು ಮಂಜೂರಾಗಿತ್ತು ಎಂದು ವರದಿ ವಿವರಿಸಿದೆ.