Advertisement

ನಾಯ್ಕಪು ಮದ್ಯದಂಗಡಿ ವಿರುದ್ಧ ಒಮ್ಮತದ ನಿರ್ಧಾರ

02:40 AM Jul 14, 2017 | Harsha Rao |

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನ 11ನೇ ವಾರ್ಡ್‌ ಗ್ರಾಮಸಭೆಯು ನಡೆಯಿತು. ಈ ಸಭೆಯಲ್ಲಿ  ನಾಯ್ಕಪಿನಲ್ಲಿ ಸರಕಾರಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದೆಂದು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್‌ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಬೇಕೆಂದು ನ್ಯಾಯಾಲಯವು ನೀಡಿದ ಆದೇಶದಂತೆ ಕುಂಬಳೆ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಕೇರಳ ಬೀವರೇಜಸ್‌ ಕಾರ್ಪೋರೇಶನ್‌ನ ಮದ್ಯ ದಂಗಡಿಯನ್ನು ರಹಸ್ಯವಾಗಿ ನಾಯ್ಕಪಿಗೆ ಸ್ಥಳಾಂತರಿಸಲು ನಡೆಸಿದ ಯತ್ನವನ್ನು ವಿರೋಧಿಸಿ ಸ್ಥಳೀಯರು ಕಳೆದ 10 ದಿನಗಳಿಂದ ಕ್ರಿಯಾ ಸಮಿತಿಯ ನೇತೃತ್ವದಲ್ಲಿ  ಆಹೋರಾತ್ರಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

Advertisement

ಮದ್ಯದಂಗಡಿ ಆರಂಭಿಸಲು ಉದ್ದೇಶಿಸಿರುವ ಕಟ್ಟಡವು ಒಂದು ಕಾಂಪ್ಲೆಕ್ಸ್‌ ಆಗಿ ಕಾರ್ಯವೆಸಗುತ್ತಿದ್ದು, ಇದರಲ್ಲಿ  15 ಕುಟುಂಬಗಳು ವಾಸಿಸುತ್ತಿವೆ. ಅಲ್ಲದೆ ಇಲ್ಲಿಂದ ಸುಮಾರು 160 ಮೀಟರ್‌ ದೂರದಲ್ಲಿ  ನಾಯ್ಕಪು ಶ್ರೀ ಶಾಸ್ತಾರ ಬನವಿರುವ ಈ ಪರಿಸರದಲ್ಲಿ  ಅಯ್ಯಪ್ಪ  ವ್ರತಧಾರಿಗಳು ವಾಸಿಸುವ ಸ್ಥಳವೂ ಆಗಿದೆ. ಇನ್ನೊಂದೆಡೆ 250 ಮೀಟರ್‌ ವ್ಯಾಪ್ತಿಯಲ್ಲಿ  ಶ್ರದ್ಧಾ ಕೇಂದ್ರವಾದ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರವೂ ನೆಲೆಗೊಂಡಿದೆ.

ಶಾಂತಿ, ನೆಮ್ಮದಿ, ಸಹಬಾಳ್ವೆಯಿಂದ ಬದುಕುತ್ತಿರುವ ಇಲ್ಲಿನವರು ಅನ್ಯೋನ್ಯದಿಂದ ಜೀವಿಸುತ್ತಿದ್ದು, ಮದ್ಯದಂಗಡಿ ಆರಂಭಗೊಂಡರೆ ಪರಿಸರ ನಿವಾಸಿಗಳ ಜೀವನ ಅಸ್ತವ್ಯಸ್ತ ಗೊಳ್ಳಲಿದೆ. ಪರಿಸರ ಮಲಿನೀಕರಣ ಸಹಿತ ಹಲವು ಸಮಸ್ಯೆಗಳು ಇಲ್ಲಿ  ಉದ್ಭವಿಸಲಿವೆ. ಇತರೆಡೆಗಳಿಂದ ಮದ್ಯಪಾನಿಗಳು ಇಲ್ಲಿಗೆ ಬಂದು ರಂಪಾಟ ನಡೆಸುವ ಸಂಭವವಿದೆ.

ಈ ಹಿನ್ನೆಲೆಯಲ್ಲಿ  ನಾಯ್ಕಪು ಪ್ರದೇಶದಲ್ಲಿ  ಮದ್ಯದಂಗಡಿ ಆರಂಭಿಸಬಾರದೆಂದು ಕ್ರಿಯಾ ಸಮಿತಿ ರೂಪಿಸಿ ನಡೆಸುವ ಹೋರಾಟಕ್ಕೆ ಗ್ರಾಮಸಭೆಯಲ್ಲೂ  ಸಂಪೂರ್ಣ ಬೆಂಬಲ ವ್ಯಕ್ತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next