Advertisement
ನಾಲ್ಕೈದು ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿ ಹೊಸ ರೂಪ ಪಡೆದುಕೊಂಡಿದ್ದ ಅಜ್ಜರಕಾಡು ಬ್ರಹ್ಮಗಿರಿಯ ಐತಿಹಾಸಿಕ ನಾಯರ್‌ಕೆರೆ ಇದೀಗ ಮತ್ತದೇ ಹಿಂದಿನ ಶೋಚನೀಯ ಸ್ಥಿತಿಗೆ ತಲುಪುತ್ತಿದೆ. ನಿರ್ವಹಣೆ ಕಾಣದೆ ವಾಕ್ ಟ್ರ್ಯಾಕ್ ಇಂಟರ್ ಲಾಕ್ ಕಿತ್ತು ಹೋಗಿದೆ. ಜತೆಗೆ ಸಾರ್ವಜನಿಕರು ಓಡಾಡುವ ಈ ಟ್ರ್ಯಾಕ್ ಸಂಪೂರ್ಣವಾಗಿ ಗಿಡಗಂಟಿಗಳಿಂದ ಆವೃತ್ತಗೊಂಡಿದೆ. ಇಲ್ಲೇನಾದರೂ ನಡೆದರೆ ಅಪಾಯವಾಗುವ ಸಾಧ್ಯತೆ ಇದೆ.
Related Articles
Advertisement
ಈ ಹಿಂದೆ ದುಃಸ್ಥಿತಿಯಲ್ಲಿದ್ದ ಕೆರೆಯನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ರಾಜ್ಯಸಭಾ ನಿಧಿಯಿಂದ ಕೆರೆ ಅಭಿವೃದ್ಧಿಗೆ 5 ಲ.ರೂ., ನೀಡಿದ್ದರು. ಅಲ್ಲದೆ ಲೋಕೋಪಯೋಗಿ ಇಲಾಖೆಯಿಂದ 4.90 ಲ.ರೂ. ವೆಚ್ಚ ಸೇರಿದಂತೆ ಒಟ್ಟು 9.90 ಲ.ರೂ. ವೆಚ್ಚದಲ್ಲಿ ಅಭಿವೃದ್ಧಿ ನಡೆಸಲಾಗಿತ್ತು. 2008ರಲ್ಲಿ ಇಬ್ಬರು ವಿದ್ಯಾರ್ಥಿಗಳು ಈ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಗರಸಭೆ ಕೆರೆಯಲ್ಲಿ ಈಜಾಡುವುದನ್ನು ನಿಷೇಧಿಸಿದೆ. ಇದರಿಂದಾಗಿ ಕೆರೆಗೆ ಇಳಿಯುವ ಗೇಟ್ ಮುಚ್ಚ ಲಾ ಗಿದೆ.
ಅಂತರ್ಜಲ ವೃದ್ಧಿ :
ಮಳೆಗಾಲದಲ್ಲಿ ಉತ್ತಮ ರೀತಿಯಲ್ಲಿ ನೀರು ಶೇಖರಣೆಗೊಂಡು ಪರಿಸರದಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತಿದೆ. ನಾಯರ್‌ಕೆರೆಯಲ್ಲಿ ಮೇಲ್ಮಟ್ಟದಲ್ಲಿ ನೀರಿದ್ದು, ಸುತ್ತಮುತ್ತಲಿನ ಪರಿಸರದಲ್ಲಿನ ಅಂತರ್ಜಲ ಹೆಚ್ಚಳಕ್ಕೆ ಸಹಾಯಕವಾಗಿದೆ. ಇಂಥ ಕೆರೆಯನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡುತ್ತ, ಅಭಿವೃದ್ಧಿಪಡಿಸಿದರೆ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಉತ್ತಮ ರೀತಿಯಲ್ಲಿ ಸಂಗ್ರಹಗೊಳ್ಳುತ್ತದೆ. ಕೆರೆ ನಿರ್ವಹಣೆಗೆ ನಗರಸಭೆ ಮುಂದಾಗಬೇಕೆಂಬುದು ಸಾರ್ವಜನಿಕರ ಆಶಯ.
ವ್ಯವಸ್ಥೆ ಸರಿ ಇದೆ- ನಿರ್ವಹಣೆ ಇಲ್ಲ:
ಐದು ವರ್ಷಗಳ ಹಿಂದೆ ಕೆರೆಯ ಹೂಳು ತೆಗೆದು, ಚರಂಡಿ ನಿರ್ಮಾಣ, ಮೆಟ್ಟಿಲುಗಳ ಪುನರ್ ನಿರ್ಮಾಣ ಮಾಡಲಾಗಿತ್ತು. ಎರಡನೇ ಹಂತದಲ್ಲಿ ಕೆರೆ ಸುತ್ತ ಇಂಟರ್‌ಲಾಕ್ ಅಳವಡಿಸಿ, ವಾಕಿಂಗ್ ಟ್ರ್ಯಾಕ್ ನಿರ್ಮಿಸಿ, ಕೆರೆ ಸುತ್ತಲಿನ ಕಬ್ಬಿಣದ ಬೇಲಿಗಳನ್ನು ಸರಿ ಮಾಡಲಾಗಿದ್ದು, ಬಣ್ಣ ಬಳಿಯಲಾಗಿದೆ. ಅಲ್ಲದೆ ಕೆರೆಗೆ ಇಳಿಯದಂತೆ ತಡೆಯಲು ಗೇಟ್ ಅನ್ನು ಅಳವಡಿಸಲಾಗಿದೆ. ಆದರೆ ಪ್ರಸ್ತುತ ನಿರ್ವಹಣೆ ಇಲ್ಲವಾಗಿದೆ.
ಕೆರೆಯಲ್ಲಿ ಈಜಾಡುತಿದ್ದ ಆಸ್ಕರ್ :
ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ನಾಯರ್ ಕೆರೆ ಪರಿಸರದಲ್ಲಿ ಬೆಳೆದು ಬಂದವರು. ಬಾಲಕನಾಗಿದ್ದಾಗ ಇದೇ ಕೆರೆಯಲ್ಲಿ ಈಜಾಡುತ್ತಿದ್ದರು. ತಾವು ಈಜಾಡುತ್ತಿದ್ದ ಕೆರೆ ನಿರ್ಲಕ್ಷ್ಯಕೊಳಗಾಗಿ ರುವುದನ್ನು ಕಂಡ ಅವರು ಕೆರೆ ಅಭಿವೃದ್ಧಿಗೆ ಮನಸ್ಸು ಮಾಡಿ ಅಭಿವೃದ್ಧಿ ಮಾಡಿಸಿದ್ದರು. ಆದರೆ ಮತ್ತೆ ಕೆರೆ ಹಿಂದಿನ ದುಸ್ಥಿಗೆ ಮರಳುತ್ತಿದೆ, ಸಂಬಂಧಪಟ್ಟ ಅಧಿಕಾರಿಗಳು ಮಳೆಗಾಲದ ಒಳಗೆ ಕೆರೆಯನ್ನು ಹೂಳು ತೆಗೆದು ಸ್ವತ್ಛವಾಗಿಸಲು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರ ಹಿಸಿದ್ದಾರೆ.
ಟ್ರ್ಯಾಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಗಂಟಿಗಳು ಬೆಳೆದು ನಿಂತಿರುವುದು ಗಮನಕ್ಕೆ ಬಂದಿಲ್ಲ. ಶೀಘ್ರದಲ್ಲಿ ಹುಲ್ಲು ಹಾಗೂ ಪೊದೆಯನ್ನು ಸ್ವತ್ಛಗೊಳಿಸಲಾಗುತ್ತದೆ.–ಹರೀಶ್ ಶೆಟ್ಟಿ, ಅಂಬಲಪಾಡಿ ವಾರ್ಡ್ ಸದಸ್ಯ