Advertisement

ವದಂತಿ ನಂಬಿ ಬ್ಯಾಂಕ್‌ಗೆ ಬಂದ್ರು ಜನ

04:39 PM Apr 18, 2020 | Naveen |

ನಾಯಕನಹಟ್ಟಿ : ವದಂತಿ ನಂಬಿಕೊಂಡು ಪಟ್ಟಣದ ಕೆನರಾ ಬ್ಯಾಂಕ್‌ ಮುಂದೆ ಗುರುವಾರ ಭಾರೀ ಪ್ರಮಾಣದಲ್ಲಿ ಜನರು ಜಮಾಯಿಸಿದ್ದರು. ಸಾಮಾಜಿಕ ಅಂತರ ಕಾಪಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ನಾನಾ ಜನರ ಖಾತೆಗೆ ನಗದು ವರ್ಗಾಯಿಸಿದೆ. ಈ ನಡುವೆ ಹಲವಾರು ವದಂತಿಗಳು ಜನರ ನಡುವೆ ಹರಿದಾಡುತ್ತಿವೆ.

Advertisement

ಸಾಮಾಜಿಕ ಭದ್ರತಾ ಯೋಜನೆಯಡಿ ಸರ್ಕಾರ ಜನರ ಖಾತೆಗೆ ಹಾಕಿರುವ ಹಣವನ್ನು ಬಿಡಿಸದೇ ಇದ್ದಲ್ಲಿ ಹಣ ವಾಪಸ್‌ ಹೋಗುತ್ತದೆ, ಗ್ರಾಹಕರು ಹಣ ಬಿಡಿಸಿಕೊಳ್ಳದೇ ಇದ್ದಲ್ಲಿ ಗ್ರಾಹಕರ ಸಾಲದ ಖಾತೆಗೆ ಸರ್ಕಾರ ನೀಡಿದ ಹಣ ಜಮಾ ಆಗುತ್ತದೆ. ತಕ್ಷಣ ಈ ಹಣವನ್ನು ಪಡೆಯದೇ ಇದ್ದಲ್ಲಿ ಬ್ಯಾಂಕ್‌ನವರು ಹಣ ನೀಡುವುದಿಲ್ಲ ಎಂಬ ಸುಳ್ಳು ಸುದ್ದಿ ಹರಿದಾಡಿದ್ದರಿಂದ ಮಹಿಳೆಯರು, ವೃದ್ಧರು ಸೇರಿದಂತೆ ಹಲವಾರು ಜನರು ಬ್ಯಾಂಕ್‌ಗೆ ದೌಡಾಯಿಸಿದ್ದರು. ಜನಧನ್‌ ಖಾತೆ, ವಿಧವಾ ವೇತನ, ಕಾರ್ಮಿಕರು ಸೇರಿದಂತೆ ನಾನಾ ಜನರು ಬ್ಯಾಂಕ್‌ಗೆ ಬಂದಿದ್ದರು.

300ಕ್ಕೂ ಹೆಚ್ಚು ಜನರು ಒಮ್ಮೆಲೆ ಜಮಾಯಿಸಿದ್ದರಿಂದ ಜನರನ್ನು ನಿಯಂತ್ರಿಸುವುದು ಬ್ಯಾಂಕ್‌ ಸಿಬ್ಬಂದಿಗೆ ಕಷ್ಟವಾಯಿತು. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ಐ ರಘುನಾಥ್‌ ಮಾತನಾಡಿ, ಜನರು ವೈಜ್ಞಾನಿಕವಾಗಿ ಅಂತರ ಕಾಪಾಡಿಕೊಳ್ಳಬೇಕು. ಬಿಸಿಲಿನಿಂದಾಗಿ ಗ್ರಾಹಕರಿಗೆ ಶಾಮಿಯಾನ ಹಾಕುವಂತೆ ಸಲಹೆ ನೀಡಿದರು. ಪೊಲೀಸ್‌ ಸಿಬ್ಬಂದಿ ಗ್ರಾಹಕರನ್ನು ಸಾಮಾಜಿಕ ಅಂತರದಲ್ಲಿ ಸರದಿ ಸಾಲಿನಲ್ಲಿ ನಿಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next