ನಾಯಕನಹಟ್ಟಿ: ನಿಷ್ಠೆಯಿಂದ ಪಕ್ಷ ಸಂಘಟನೆ ಮಾಡುವವರಿಗಷ್ಟೇ ರಾಜಕೀಯ ಸ್ಥಾನಗಳನ್ನು ನೀಡಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್ ಹೇಳಿದರು.
ಪಟ್ಟಣದ ಹೊರಮಠದ ಯಾತ್ರಿ ನಿವಾಸ್‌ದಲ್ಲಿ ಗುರುವಾರ ನಡೆದ ಸದಸ್ಯತ್ಯ ನೋಂದಣಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜು. 6 ರಂದು ದೇಶವ್ಯಾಪಿ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭವಾಗಲಿದೆ. ಪಕ್ಷದ ಸಂಸ್ಥಾಪಕ ಶ್ಯಾಂಪ್ರಸಾದ್ ಮುಖರ್ಜಿಯವರ ಜನ್ಮದಿನದ ಅಂಗವಾಗಿ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಹಣ, ಜಾತಿ ಬಲಗಳಿಂದ ಪಕ್ಷದಲ್ಲಿ ಸ್ಥಾನಮಾನ ದೊರೆಯುವುದಿಲ್ಲ. ಅದಕ್ಕೆ ಬದಲಾಗಿ ಜನಸಂಪರ್ಕ, ಪಕ್ಷದ ತತ್ವ ಹಾಗೂ ನಿಷ್ಠೆಗಳ ಆಧಾರದ ಮೇಲೆ ಪಕ್ಷದಲ್ಲಿ ಸ್ಥಾನಮಾನ ನೀಡಲಾಗುವುದು. ಮುಂಬರುವ ಚುನಾವಣೆಗಳಲ್ಲಿ ಸದಸ್ಯತ್ವ ನೋಂದಣಿಯೇ ಮಾನದಂಡವಾಗಲಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಬಿಜೆಪಿ ಉತ್ತಮ ಸಾಧನೆಯನ್ನು ತೋರಿದೆ. ಆದರೆ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕುಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ 284 ಬೂತ್‌ಗಳಲ್ಲಿ 170ರಲ್ಲಿ ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆದಿದೆ. ಬಿಜೆಪಿ 114 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿತ್ತು ಎದು ತಿಳಿಸಿದರು.
ಚುನಾವಣೆಗಳಲ್ಲಿ ಪ್ರತಿಯೊಬ್ಬ ಕಾರ್ಯಕರ್ತ ಇದು ನನ್ನ ಚುನಾವಣೆ ಎಂದು ಭಾವಿಸಿದರೆ ಮಾತ್ರ ಪಕ್ಷದ ಮುನ್ನಡೆ ಸಾಧ್ಯ. ಲೋಕಸಭಾ ಚುನಾವಣೆಗಳಲ್ಲಿ ಕಾರ್ಯಕರ್ತರು ಇನ್ನಷ್ಟು ಸಕ್ರಿಯವಾಗಬೇಕಾಗಿದೆ. ಶಾಸಕ ಬಿ. ಶ್ರೀರಾಮುಲು ರಾಜ್ಯದ ಪ್ರಭಾವಿ ಮುಖಂಡರಾಗಿದ್ದಾರೆ. ಹೀಗಾಗಿ ಅವರಿಗೆ ಹಿನ್ನಡೆಯಾಗದಂತೆ ಪಕ್ಷ ಸಂಘಟನೆ ಮಾಡಬೇಕು. ಚಳ್ಳಕೆರೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ಎಲ್ಲ ಮುಖಂಡರೂ ಬಿಜೆಪಿ ವಿರುದ್ಧ ಕಾರ್ಯ ನಿರ್ವಹಿಸಿದ್ದರು. ಹೀಗಿದ್ದರೂ ಕಾಂಗ್ರೆಸ್ ಕಡಿಮೆ ಲೀಡ್ ಪಡೆದಿದೆ. ಅಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಅತ್ಯಂತ ಕಡಿಮೆ ಲೀಡ್ ಪಡೆಯಲಾಗಿದೆ. ಮುಂದಿನ ಚುನಾವಣೆಯ ವೇಳೆಗೆ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಉತ್ತಮ ಸಾಧನೆ ತೋರುವಂತೆ ಮಾಡಬೇಕು ಎಂದು ಕರೆ ನೀಡಿದರು.
ಬಿಜೆಪಿ ಮಂಡಲಾಧ್ಯಕ್ಷ ಎಂ.ವೈ.ಟಿ ಸ್ವಾಮಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ವಿರುದ್ಧ ಸಮರ ಸಾರಿದ್ದರು. ಜಾತಿ ವಿಷಯವನ್ನು ಪ್ರಮುಖವಾಗಿಸಿ ಶ್ರೀರಾಮುಲು ವಿರುದ್ಧ ಅಪ ಪ್ರಚಾರ ಮಾಡಲಾಯಿತು. ಹೀಗಾಗಿ ಬಿಜೆಪಿ ಗೆ ಅಲ್ಪ ಪ್ರಮಾಣದ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೂ ಅದಕ್ಕೆ ಕಾರ್ಯಕರ್ತರು ಸಿದ್ಧರಾಗಿರಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ ಮಾತನಾಡಿ, ಮೊಳಕಾಲ್ಮೂರು ಕ್ಷೇತ್ರದ 151 ಬೂತ್‌ಗಳಲ್ಲಿ ಸದಸ್ಯತ್ವ ಅಭಿಯಾನ ಆರಂಭವಾಗಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ದೇಶವ್ಯಾಪಿ ಜರುಗುತ್ತಿರುವ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಸದಸ್ಯತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜಿಪಂ ಸದಸ್ಯ ಓ. ಮಂಜುನಾಥ್, ಪಪಂ ಸದಸ್ಯ ಮಹಾಂತಣ್ಣ ಮಾತನಾಡಿದರು. ಮುಖಂಡರಾದ ಸಿ.ಬಿ. ಮೋಹನ್, ಪಿ.ಬಿ. ತಿಪ್ಪೇಸ್ವಾಮಿ, ಪರಮೇಶ್, ಪಪಂ ಸದಸ್ಯ ನಾಗರಾಜ್, ಗೋವಿಂದಪ್ಪ, ತ್ರಿಶೂಲ್, ರಾಮರೆಡ್ಡಿ ಇತರರು ಇದ್ದರು.