Advertisement

ಶೋಷಣೆಮುಕ್ತ ಸಮಾಜಕ್ಕೆ ಕಾನೂನು ಅಗತ್ಯ

03:03 PM Sep 09, 2019 | Naveen |

ನಾಯಕನಹಟ್ಟಿ: ಶೋಷಣೆಮುಕ್ತ ಸಮಾಜಕ್ಕೆ ಸಾಮಾನ್ಯ ಕಾನೂನುಗಳು ಅಗತ್ಯ ಎಂದು ಚಳ್ಳಕೆರೆ ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್‌ ಹೇಳಿದರು.

Advertisement

ಮಲ್ಲೂರಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ರಥ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ಜನರು ಸಾಮಾನ್ಯ ಕಾನೂನುಗಳ ಬಗ್ಗೆ ಅರಿವು ಹೊಂದಿರಬೇಕು. ಸಂವಿಧಾನದಲ್ಲಿ ಹಕ್ಕುಗಳ ಜತೆ ಕರ್ತವ್ಯಗಳನ್ನು ನೀಡಲಾಗಿದೆ. ಎಲ್ಲರಿಗೂ ಕಾನೂನು ರೀತಿಯ ಹಕ್ಕುಗಳನ್ನು ನೀಡಲಾಗಿದೆ. ಆದರೆ ಇವುಗಳನ್ನು ಪಾಲಿಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ. ವ್ಯಕ್ತಿಗಳಲ್ಲಿರುವ ಅಮಾಯಕತೆ, ಅನಕ್ಷರತೆ ಕಂಡುಕೊಂಡ ವ್ಯಕ್ತಿಗಳು ಮೋಸ ಮಾಡುವ ಸಾಧ್ಯತೆ ಹೆಚ್ಚು. ದೈನಂದಿನ ಜೀವನದಲ್ಲಿ ಸಣ್ಣಪುಟ್ಟ ಕಾನೂನುಗಳ ಅರಿವು ಅಗತ್ಯವಾಗಿದೆ. ಬಾಲ್ಯ ವಿವಾಹದ ವಯಸ್ಸು, ರಸ್ತೆ ಸಂಚಾರ ನಿಯಮಗಳು, ವರದಕ್ಷಿಣೆ ಕಾನೂನುಗಳು, ಆಸ್ತಿ ಸ್ವತ್ತಿನ ಹಕ್ಕುಗಳು ಸೇರಿದಂತೆ ಹಲವು ವಿಷಯಗಳಿಗೆ ಕಠಿಣ ಕಾನೂನುಗಳಿವೆ. ಇವುಗಳನ್ನು ಬಗ್ಗೆ ಸ್ಪಷ್ಟ ಅರಿವನ್ನು ಹೊಂದಿರಬೇಕು. ಪ್ರಾಥಮಿಕ ಹಂತದ ಕಾನೂನುಗಳ ಮಾಹಿತಿ ಹೊಂದಿದ್ದರೆ ಶೋಷಣೆ ಕಡಿಮೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.

ವಕೀಲ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ನಾಗರಾಜ್‌ ಮಾತನಾಡಿ, ಸುವ್ಯವಸ್ಥಿತ ಸಮಾಜ ನಿರ್ಮಾಣಕ್ಕೆ ಕಾನೂನು ಬದ್ಧ ವ್ಯವಸ್ಥೆ ಅಗತ್ಯವಾಗಿದೆ. ಎಲ್ಲ ಜನರು ಎಲ್ಲ ಕಾನೂನುಗಳನ್ನು ಅರಿಯಬೇಕಾಗಿಲ್ಲ. ಆದರೆ ಸಾಮಾನ್ಯವಾದ ಹಾಗೂ ಕನಿಷ್ಟ ನಿಯಮಗಳ ಅರಿವು ಅಗತ್ಯ. ಕಾನೂನು ದೊಡ್ಡ ರೀತಿಯ ಪುಸ್ತಕವಲ್ಲ. ಇದು ಸಾಮಾನ್ಯ ಜ್ಞಾನವಾಗಿದೆ. ಇನ್ನೊಬ್ಬರಿಗೆ ತೊಂದರೆಯಾಗದಂತೆ ನಮ್ಮ ಬದುಕು ಸಾಗಿಸಬೇಕು. ಸಾಮಾನ್ಯ ಜ್ಞಾನದ ಅಂಶಗಳನ್ನು ಸೇರಿಸಿ ಕಾನೂನು ಚೌಕಟ್ಟು ನೀಡಲಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮನಾದ ಹಕ್ಕುಗಳಿವೆ. ಇನ್ನೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಶಾಂತಿ, ಸಮಾಧಾನದ ಜೀವನಕ್ಕೆ ಕಾನೂನುಗಳು ಅಗತ್ಯ. ಅವುಗಳನ್ನು ಗೌರವಿಸುವ ಜವಾಬ್ದಾರಿಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ವಕೀಲ ಟಿ.ಎಸ್‌.ನಾಗರಾಜ್‌ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಮಾತನಾಡಿ, ಬಾಲ್ಯವಿವಾಹ ಅಪರಾಧವಾಗಿದೆ. ಇದಕ್ಕೆ ಮದುವೆ ಮಾಡಿದ ಪುರೋಹಿತ, ಪೋಷಕರು ಹೊಣೆಯಾಗುತ್ತಾರೆ. ಬಾಲ್ಯವಿವಾಹ ಸಮಾಜದಲ್ಲಿ ಕೆಟ್ಟ ಸಂಪ್ರದಾಯವಾಗಿದೆ. 1940ರಿಂದಲೇ ಇಂತಹ ವಿವಾಹವನ್ನು ತಡೆಗಟ್ಟಲು ಕಾಯ್ದೆ ರೂಪಿಸಲಾಗಿದೆ. ಇತ್ತೀಚೆಗೆ ಈ ಕಾನೂನನ್ನು ಬಿಗಿಗೊಳಿಸಲಾಗಿದೆ. 18 ವರ್ಷಕ್ಕಿಂತ ಕಡಿಮೆ ಇರುವ ಯುವತಿ, 21ವರ್ಷಕ್ಕಿಂತ ಕಡಿಮೆ ಇರುವ ಯುವಕನ ನಡುವೆ ನಡೆಯುವ ವಿವಾಹ ಬಾಲ್ಯವಿವಾಹವಾಗಿದೆ. ಗ್ರಾಪಂ ಅಧ್ಯಕ್ಷ ಎಂ.ಸಿ.ರಾಜಣ್ಣ, ಉಪಾಧ್ಯಕ್ಷೆ ಮಾರಕ್ಕ, ಸರಕಾರಿ ಅಭಿಯೋಜಕ ಜೆ.ಲಿಂಗೇಶ್ವರ, ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ.ಬೋರಯ್ಯ, ಪಿಡಿಒ ಎಚ್.ಯರ್ರಿಸ್ವಾಮಿ, ಮುಖಂಡರಾದ ಕಾಟಯ್ಯ, ಬೋಸಯ್ಯ, ರಾಜಣ್ಣ, ತಮ್ಮಣ್ಣ ನಾಗೇಶ್‌, ಬೊಮ್ಮಯ್ಯ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next