Advertisement

ಶುದ್ಧ ನೀರು-ರಸ್ತೆ ನಿರ್ಮಾಣಕ್ಕೆ ಆದ್ಯತೆ

10:50 AM Jul 24, 2019 | Naveen |

ನಾಯಕನಹಟ್ಟಿ: ಐಐಎಸ್ಸಿ ಕ್ಯಾಂಪಸ್‌ನಲ್ಲಿರುವ ಜನರಿಗೆ ಶುದ್ಧ ಕುಡಿಯುವ ನೀರು ಹಾಗೂ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕುದಾಪುರ ಶಾಖೆಯ ಮುಖ್ಯಸ್ಥ ಪ್ರೊ| ಬಿ.ಎನ್‌. ರಘುನಂದನ್‌ ಹೇಳಿದರು.

Advertisement

ಮಂಗಳವಾರ ಐಐಎಸ್ಸಿ ಕ್ಯಾಂಪಸ್‌ನಲ್ಲಿ ನಡೆದ 12 ಕೋಟಿ ರೂ. ವೆಚ್ಚದ ದ್ವಿಪಥ ರಸ್ತೆ, ವಿದ್ಯುದೀಕರಣ ಹಾಗೂ 15 ಲಕ್ಷ ರೂ. ವೆಚ್ಚದ ಕುಡಿಯುವ ನೀರು ಶುದ್ಧೀಕರಣ ಸ್ಥಾವರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1500 ಎಕರೆ ಪ್ರದೇಶದಲ್ಲಿರುವ ಸಂಸ್ಥೆಯ ಕ್ಯಾಂಪಸ್‌ ಸುತ್ತಲೂ ಕಾಂಪೌಂಡ್‌ ನಿರ್ಮಿಸಲಾಗಿದೆ. ಇದರ ಜತೆಗೆ ಕಾಂಪೌಂಡ್‌ನ‌ ಒಳ ಬದಿಯಲ್ಲಿ ಪೆರಿಫೆರಲ್ ರಸ್ತೆ ನಿರ್ಮಾಣಗೊಂಡಿದೆ. ಇದಕ್ಕೆ ಶೀಘ್ರದಲ್ಲಿ ಡಾಂಬರೀಕರಣ ಮಾಡಲಾಗುವುದು. ಐಐಎಸ್ಸಿ ಕ್ಯಾಂಪಸ್‌ಗೆ ವಿವಿ ಸಾಗರದಿಂದ ನೀರು ಪೂರೈಕೆಯಾಗುತ್ತಿದೆ. ಇದು ಕಚ್ಚಾ ನೀರು ಆಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಕ್ಯಾಂಪಸ್‌ನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. 5 ಲಕ್ಷ ಲೀಟರ್‌ ಸಾಮರ್ಥ್ಯದ ಎರಡು ಹಾಗೂ 10 ಲಕ್ಷ ಲೀಟರ್‌ ಸಾಮರ್ಥ್ಯದ ಒಂದು ಭೂ ಅಂತರ್ಗತ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಕುಡಿಯುವ ನೀರು ಘಟಕದಿಂದ ಶುದ್ಧೀಕರಣಗೊಂಡ ನೀರನ್ನು ಒಂದು ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ನಲ್ಲಿ ಸಂಗ್ರಹಿಸಲಾಗುವುದು. ಟ್ಯಾಂಕ್‌ ನಿರ್ಮಾಣದಿಂದ ಎರಡು ಹಾಸ್ಟೆಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ, ಸೌರ ಸಂಶೋಧನಾ ಕೇಂದ್ರ ಹಾಗೂ ಹವಾಮಾನ ಪ್ರಯೋಗಾಲಯಗಳಿಗೆ ನೀರು ಸರಬರಾಜು ಮಾಡಲಾಗುವುದು. ಇದರಿಂದ ಇಡೀ ಕ್ಯಾಂಪಸ್‌ನ ಎಲ್ಲರಿಗೂ ಶುದ್ಧ ಕುಡಿಯುವ ನೀರು ದೊರೆಯಲಿದೆ ಎಂದರು.

ಕ್ಯಾಂಪಸ್‌ನ ಪೆರಿಫೆರಲ್ ರಸ್ತೆಗೆ ವಿದ್ಯುದೀಕರಣ ಮಾಡಲಾಗಿದೆ. ಪ್ರತಿ ಹತ್ತು ಮೀಟರ್‌ಗೆ ಒಂದರಂತೆ 4.2 ಕಿಮೀ ಉದ್ದದ ರಸ್ತೆಗೆ ಬೀದಿದೀಪಗಳನ್ನು ಅಳವಡಿಸಲಾಗಿದೆ. ಸಾಮಾನ್ಯವಾಗಿ ಬೀದಿದೀಪಗಳಿಗೆ ಸೋಡಿಯಂ ದೀಪಗಳನ್ನು ಅಳವಡಿಸಲಾಗುತ್ತದೆ. ಆದರೆ ಇದರಿಂದ ಹೆಚ್ಚಿನ ವಿದ್ಯುತ್‌ ನಷ್ಟವಾಗುತ್ತದೆ. ಇದಕ್ಕೆ ಬದಲಾಗಿ ಕಡಿಮೆ ವಿದ್ಯುತ್‌ ಬಳಸಿ ಹೆಚ್ಚು ಬೆಳಕು ನೀಡುವ ಎಲ್ಇಡಿ ವಿದ್ಯುತ್‌ ದೀಪಗಳನ್ನು ಬೀದಿದೀಪಗಳಿಗೆ ಬಳಸಲಾಗಿದೆ. ಕ್ಯಾಂಪಸ್‌ನಲ್ಲಿ ಶೀಘ್ರದಲ್ಲಿ ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಆದಷ್ಟು ಬೇಗ ಉದ್ಘಾಟಿಸಲಾಗುವುದು. ಅಕ್ಟೋಬರ್‌ ಅಥವಾ ಡಿಸೆಂಬರ್‌ ವೇಳೆಗೆ 45 ಕೋಟಿ ರೂ. ವೆಚ್ಚದ ಬೃಹತ್‌ ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಬೆಂಗಳೂರು ಐಐಎಸ್ಸಿ ನಿರ್ದೇಶಕ ಪ್ರೊ| ಅನುರಾಗ್‌ಕುಮಾರ್‌ ನೀರು ಶುದ್ಧೀಕರಣ ಸ್ಥಾವರ ಹಾಗೂ ವಿದ್ಯುದೀಕರಣ ವ್ಯವಸ್ಥೆಯ ಉದ್ಘಾಟನೆ ನೆರವೇರಿಸಿದರು. ನಂತರ ಕ್ಯಾಂಪಸ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಎಲ್ಲ ಕಾಮಗಾರಿಗಳ ವೀಕ್ಷಣೆ ಮಾಡಿದರು. ಐಐಎಸ್ಸಿ ಉಪ ನಿರ್ದೇಶಕ ಪ್ರೊ| ಮೋದಕ್‌, ಪ್ರೊ| ಡಿ.ಎನ್‌. ರಾವ್‌, ಪ್ರೊ| ಎಂ.ಎಸ್‌. ಹೆಗಡೆ, ಪ್ರೊ| ಎಂ.ಆರ್‌. ಭಟ್, ಪ್ರೊ| ಎಲ್. ಆನಂದ್‌, ಪ್ರೊ| ಪ್ರವೀಣ್‌ ಸಿ. ರಾಮಮೂರ್ತಿ, ಪ್ರೊ| ಉಮರ್ಜಿ, ಡಾ| ಶ್ರೀವಾತ್ಸವ, ಡಾ| ಟಿ.ವಿ. ಪ್ರಭಾಕರ್‌, ಪ್ರೊ| ಎಂ.ಎಸ್‌. ಹೆಗಡೆ, ಡಿ.ಎನ್‌. ರಾವ್‌, ಫ್ಲೋ ಲೈನ್‌ ಕಂಪನಿಯ ಪೂರ್ಣೇಶ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next