Advertisement
ಕೇಂದ್ರ ಸರ್ಕಾರ ಒಂದು ಹೆಣ್ಣುಮಗು ಇರುವ ಪೋಷಕರ ಬ್ಯಾಂಕ್ ಖಾತೆಗೆ ನೇರವಾಗಿ ಎರಡು ಲಕ್ಷ ರೂ. ಜಮಾ ಮಾಡಲಿದೆ, 8 ರಿಂದ 32 ವರ್ಷದವರೆಗಿನವರಿಗೆ ಈ ಯೋಜನೆ ಅನ್ವಯವಾಗುತ್ತದೆ ಎನ್ನುವ ಆಧಾರ ರಹಿತ ವದಂತಿ ಚಳ್ಳಕೆರೆ ತಾಲೂಕಿನಲ್ಲಿ ಹರಿದಾಡುತ್ತಿದೆ. ನಾಯಕನಹಟ್ಟಿ, ಚಳ್ಳಕೆರೆ, ತಳಕು ಸೇರಿದಂತೆ ನಾನಾ ಪ್ರದೇಶಗಳಲ್ಲಿ ಪೋಷಕರು ಸಮೂಹ ಸನ್ನಿಯಂತೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದನ್ನು ಪರೀಕ್ಷಿಸುವ ಗೋಜಿಗೆ ಹೋಗದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹೀಗಾಗಿ ಅಂಚೆ ಕಚೇರಿ, ಶಾಲೆ, ಜೆರಾಕ್ಸ್ ಅಂಗಡಿಗಳಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ. ಶಾಲೆಗಳಲ್ಲಿ ಮುಖ್ಯಶಿಕ್ಷಕರ ಮೇಲೆ ಕಾರ್ಯಭಾರದ ಒತ್ತಡ ಬೀಳುತ್ತಿದೆ.
Related Articles
ಒಂದು ಹೆಣ್ಣುಮಗುವನ್ನು ಹೊಂದಿರುವ ಪೋಷಕರು ಶಾಲೆಗಳಿಗೆ ಬಂದು ಅರ್ಜಿ ತುಂಬಿಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಅರ್ಜಿ ನಕಲಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರದ ಯಾವುದೇ ಯೋಜನೆಗಳು ಸಂಬಂಧಿಸಿದ ಇಲಾಖೆಗಳ ಮೂಲಕವೇ ಜಾರಿಯಾಗುತ್ತವೆ. ಶಿಕ್ಷಣ ಇಲಾಖೆಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಂತಹ ಯಾವುದೇ ಯೋಜನೆ ಕೇಂದ್ರ ಅಥವಾ ರಾಜ್ಯದಲ್ಲಿಲ್ಲ. ಈ ಬಗ್ಗೆ ಮುಖ್ಯಶಿಕ್ಷಕರು ಪೋಷಕರಿಗೆ ತಿಳಿ ಹೇಳಬೇಕು. ಈ ಬಗ್ಗೆ ತಾಲೂಕಿನ ಎಲ್ಲ ಮುಖ್ಯಶಿಕ್ಷಕರಿಗೆ ಪ್ರಕಟಣೆ ನೀಡಲಾಗಿದೆ. ಈ ಪ್ರಕಟಣೆಯನ್ನು ಎಲ್ಲ ಶಾಲೆಗಳ ನೋಟಿಸ್ ಬೋರ್ಡ್‌ಗೆ ಹಾಕುವಂತೆ ಸೂಚಿಸಲಾಗಿದೆ. ಇದರಿಂದ ಶಾಲಾ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶಪ್ಪ ತಿಳಿಸಿದ್ದಾರೆ.
Advertisement