Advertisement

ನಾಯಕನಹಟ್ಟಿ ಜಾತ್ರೆಗೆ ಸೂಕ್ತ ಬಂದೋಬಸ್ತ್

05:25 PM Feb 12, 2020 | Naveen |

ನಾಯಕನಹಟ್ಟಿ: ಪಟ್ಟಣದಲ್ಲಿ ನಡೆಯುವ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಅಗತ್ಯವಿರುವ ಎಲ್ಲ ರಕ್ಷಣಾ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ ಹೇಳಿದರು.

Advertisement

ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಹಾಗೂ ತೇರು ಬೀದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇಲ್ಲಿನ ಜಾತ್ರೆ ಮಧ್ಯ ಕರ್ನಾಟಕದಲ್ಲಿ ಹೆಚ್ಚಿನ ಜನದಟ್ಟಣೆಯ ಉತ್ಸವವಾಗಿದೆ. ಮಾ. 12 ರಂದು ಜರುಗುವ ಜಾತ್ರೆಗೆ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಲಾಗಿದೆ.

ಜಾತ್ರೆಗೆ ಸುಮಾರು ಮೂರು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ವಾಹನಗಳ ಪಾರ್ಕಿಂಗ್‌, ಬ್ಯಾರಿಕೇಡ್‌, ಮೂಲ ಸೌಲಭ್ಯಗಳು ಸೇರಿದಂತೆ ನಾನಾ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಇತರೆ ಇಲಾಖೆಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.

ಪಟ್ಟಣಕ್ಕೆ ಬರುವ ಮಾರ್ಗಗಳು, ಚೆಕ್‌ಪೋಸ್ಟ್ ಗಳು ಸೇರಿದಂತೆ ರಕ್ಷಣಾ ವ್ಯವಸ್ಥೆ ಮಾಡಲಾಗುವುದು. ಜಾತ್ರೆಯಲ್ಲಿ ಸರಗಳ್ಳತನ, ಕಿಸೆಗಳ್ಳತನ ಸೇರಿದಂತೆ ನಡೆಯಬಹುದಾದ ಅಪರಾಧಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ನೆರೆ ಜಿಲ್ಲೆಗಳ ಪೊಲೀಸರು ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುವುದು.

ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಒದಗಿಸಬೇಕು ಎಂದು ಆಟೋ ಚಾಲಕರಿಗೆ ಸೂಚಿಸಲಾಗಿದೆ. ಬಸ್‌ ಗಳು ಪಟ್ಟಣದ ಪರಿಮಿತಿಯಲ್ಲಿ ಪ್ರವೇಶ ನೀಡಿದರೆ ಸಂಚಾರ ವ್ಯವಸ್ಥೆ ಹದಗೆಡುತ್ತದೆ. ಹೀಗಾಗಿ ಪಟ್ಟಣದಿಂದ ಹೊರಭಾಗದಲ್ಲಿ ನಿಲುಗಡೆ ಮಾಡಲಾಗುವುದು ಎಂದು ತಿಳಿಸಿದರು.

Advertisement

ನನಗೆ ಹೊಸ ಜಿಲ್ಲೆಯಾಗಿರುವುದರಿಂದ ಅಧಿಕಾರ ಸ್ವೀಕರಿಸಿದ ತಕ್ಷಣ ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿರುವ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದೇನೆ. ಜಿಲ್ಲೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗ್ರಾಮಕ್ಕೊಬ್ಬ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿ ತಳ ಮಟ್ಟದಿಂದ ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು. ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಹೊರಮಠ, ಒಳಮಠ ಹಾಗೂ ತೇರು ಬೀದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಡಿವೈಎಸ್‌ಪಿ ಎಸ್‌. ರೋಷನ್‌ ಜಮೀರ್‌, ವೃತ್ತ ನಿರೀಕ್ಷಕ ಆನಂದ, ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಸ್‌.ವಿ. ತಿಪ್ಪೇಸ್ವಾಮಿ ರೆಡ್ಡಿ, ಟಿ. ರುದ್ರಮುನಿ, ಸಿಬ್ಬಂದಿ ಸತೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next