ನಾಯಕನಹಟ್ಟಿ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಬಿ. ಶ್ರೀರಾಮುಲು ಮೂಲಕ ಸಚಿವ ಸ್ಥಾನ ದೊರೆತಿದ್ದು, ಜನರ ನಿರೀಕ್ಷೆಗಳು ಗರಿಗೆದರಿವೆ.
ಶಾಶ್ವತ ಬರಗಾಲಕ್ಕೀಡಾಗುತ್ತಿರುವ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ಇವುಗಳನ್ನು ಈಡೇರಿಸಲು ರಾಜಕೀಯ ಇಚ್ಛಾಶಕ್ತಿ ಹಾಗೂ ಅಧಿಕಾರದ ಕೊರತೆ ಇತ್ತು. ಇದರಿಂದ ಕ್ಷೇತ್ರ ನಿರಂತರ ನಿರ್ಲಕ್ಷಕ್ಕೆ ಒಳಗಾಗುತ್ತಿದೆ. ಕ್ಷೇತ್ರದಲ್ಲಿ ಮೊದಲ ಬಾರಿ ಬಿಜೆಪಿ ಪಕ್ಷದ ಶಾಸಕರು ಆಯ್ಕೆಯಾಗಿದ್ದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪಪಂ, ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಪ್ರಗತಿಯ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
1957 ರಲ್ಲಿ ಎಸ್. ನಿಜಲಿಂಗಪ್ಪ ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಮುಖ್ಯಮಂತ್ರಿಯಾದರೂ ಕ್ಷೇತ್ರ ದೊಡ್ಡ ಪ್ರಮಾಣದ ಪ್ರಗತಿ ಕಂಡಿರಲಿಲ್ಲ. 2018ರ ಚುನಾವಣೆಯಲ್ಲಿ ಬಿ. ಶ್ರೀರಾಮುಲು ಬಾದಾಮಿ ಹಾಗೂ ಮೊಳಕಾಲ್ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಬಾದಾಮಿ ಕ್ಷೇತ್ರದ ಜನರು ಶ್ರೀರಾಮುಲು ಅವರನ್ನು ಕೈಬಿಟ್ಟರೂ ಮೊಳಕಾಲ್ಮೂರು ಕ್ಷೇತ್ರದ ಜನರು 42,866 ಮತಗಳ ಅಂತರದಿಂದ ಗೆಲ್ಲಿಸಿದ್ದರು.
ಮೊಳಕಾಲ್ಮೂರು ಕ್ಷೇತ್ರದಿಂದ ಗೆದ್ದ ವ್ಯಕ್ತಿಗಳಿಗೆ ಸಚಿವ ಸ್ಥಾನ ದೊರೆಯುವುದಿಲ್ಲ ಎನ್ನುವುದು ಕ್ಷೇತ್ರಕ್ಕೆ ನಿರಂತರ ಶಾಪವಾಗಿ ಪರಿಣಿಮಿಸಿತ್ತು. ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಎನ್.ವೈ. ಗೋಪಾಲಕೃಷ್ಣ ಸಚಿವ ಸ್ಥಾನದಿಂದ ವಂಚಿತರಾಗಿದ್ದರು. ವಿದ್ಯಾರ್ಹತೆ, ಸಾಮರ್ಥ್ಯ ಇದ್ದರೂ ಅವರಿಗೆ ಸಚಿವ ಸ್ಥಾನ ದೊರೆಯಲಿಲ್ಲ. ನಿಗಮ, ಮಂಡಳಿಗಳಿಗೆ ಮಾತ್ರ ಸೀಮಿತವಾಗಬೇಕಾಯಿತು.
ಒಂದು ಬಾರಿ ರೇಷ್ಮೆ ಮಂಡಳಿ ಅಧ್ಯಕ್ಷರಾಗಿದ್ದ ಗೋಪಾಲಕೃಷ್ಣ, ನಂತರ ವಿಧಾನಸಭೆ ಉಪಾಧ್ಯಕ್ಷ ಹಾಗೂ ಒಂದು ಬಾರಿ ಡಿ.ಎಂ. ನಂಜುಂಡಪ್ಪ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಕಾಂಗ್ರೆಸ್ ಪಕ್ಷ ಎನ್‌ವೈಜಿ ಅವರನ್ನು ಕೇವಲ ನಿಗಮ ಹಾಗೂ ಮಂಡಳಿಗಳಿಗೆ ಮಾತ್ರ ಸೀಮಿತವಾಗಿಸಿತು. ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಕೂಡ್ಲಗಿ ಕ್ಷೇತ್ರದಿಂದ ಸ್ಪರ್ಧಿಸಿ ರಾಜಕೀಯ ಮರುಜನ್ಮ ಪಡೆದಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರದಿಂದ ಪುರ್ನ ಮತ್ತಪ್ಪ, ಪಟೇಲ್ ಪಾಪನಾಯಕ, ಎಸ್. ಎಚ್. ಬಸಣ್ಣ ತಲಾ ಎರೆಡೆರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಸಚಿವ ಸ್ಥಾನ ದೊರೆತಿರಲಿಲ್ಲ. ಕ್ಷೇತ್ರಕ್ಕೆ ಮೊದಲ ಬಾರಿ ಒಲಿದು ಬಂದಿರುವ ಸಚಿವ ಸ್ಥಾನದಿಂದ ಕ್ಷೇತ್ರದ ಅಭಿವೃದ್ಧಿಯನ್ನು ಮತದಾರರು ನಿರೀಕ್ಷಿಸುತ್ತಿದ್ದಾರೆ.