ನಾಯಕನಹಟ್ಟಿ: ತಾಜಾ ಹಣ್ಣುಗಳಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ವಿದ್ಯಾವಿಕಾಸ ಶಾಲೆ ಮುಖ್ಯಶಿಕ್ಷಕಿ ಟಿ. ರೂಪಾ ಹೇಳಿದರು.
ಪಟ್ಟಣದ ವಿದ್ಯಾವಿಕಾಸ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಹಣ್ಣುಗಳ ಪ್ರಾಮಾಖ್ಯತೆ ವಿವರಿಸುವ ಪ್ರೂಟ್ಸ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಚೀನ ಕಾಲದಿಂದ ಹಣ್ಣು ನಮ್ಮ ಪ್ರಮುಖ ಆಹಾರವಾಗಿದೆ. ಕಾಯಿಲೆ ಬಂದಾಗ ಹಣ್ಣುಗಳನ್ನು ಸೇವಿಸುವ ಪದ್ಧತಿ ನಮ್ಮಲ್ಲಿದೆ. ರೋಗ ಬರದಂತೆ ತಡೆಯಲು ನಿರಂತರವಾಗಿ ಹಣ್ಣುಗಳನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರು.
ತಾಜಾ ಹಣ್ಣುಗಳು ಹಾಗೂ ಒಣ ಹಣ್ಣುಗಳು ಅತ್ಯಂತ ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿವೆ. ಕೇವಲ ಸೇಬು ಮಾತ್ರ ಉತ್ತಮ ಗುಣಮಟ್ಟದ ಹಣ್ಣು ಎನ್ನುವುದು ತಪ್ಪ ಕಲ್ಪನೆ. ಆಯಾ ಕಾಲಗಳಿಗೆ ತಕ್ಕಂತೆ ಲಭ್ಯವಿರುವ ಹಣ್ಣುಗಳನ್ನು ತಿನ್ನುವುದು ಉತ್ತಮ ಅಭ್ಯಾಸ. ಸ್ಥಳೀಯವಾಗಿ ಲಭ್ಯವಿರುವ ಸೀಬೆ, ಸಪೋಟಾ, ಪರಂಗಿ, ಪಪ್ಪಾಯಿ, ದಾಳಿಂಬೆ ಹಣ್ಣುಗಳು ಹೆಚ್ಚಿನ ವಿಟಮಿನ್ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿರುತ್ತವೆ. ಹಾಗಾಗಿ ಊಟದಲ್ಲಿ ಪ್ರತಿ ದಿನ ಒಂದು ಹಣ್ಣು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು. ಸೀಬೆ, ಸೇಬು ಸೇರಿದಂತೆ ಕೆಲವು ಹಣ್ಣುಗಳನ್ನು ಸಿಪ್ಪೆ ಸಹಿತವಾಗಿ ತಿನ್ನಬೇಕು. ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಮಾಗಿದಾಗ ತಿನ್ನುವುದಕ್ಕೆ ಅಷ್ಟೊಂದು ಯೋಗ್ಯವಲ್ಲ. ತಾಜಾ ಹಣ್ಣಿನಲ್ಲಿ ಹೆಚ್ಚಿನ ವಿಟಮಿನ್‌ಗಳಿರುತ್ತವೆ. ದ್ರಾಕ್ಷಿ, ಉತ್ತತ್ತಿ, ಖರ್ಜೂರದಂತ ಒಣಗಿದ ಹಣ್ಣುಗಳು ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಹಣ್ಣುಗಳನ್ನು ಬಳಸುವ ಮೊದಲು ಅಡುಗೆ ಸೋಡಾದಿಂದ ತೊಳೆಯುವುದರಿಂದ ರಾಸಾಯನಿಕಗಳ ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿದೆ. ಬೇಕರಿ ತಿಂಡಿಗಳನ್ನು ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ನಾನಾ ಬಗೆಯ ಹಣ್ಣುಗಳ ಪ್ರದರ್ಶನ, ಅವುಗಳ ಉಪಯೋಗಗಳ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ನಾನಾ ರೀತಿಯ ಹಣ್ಣುಗಳು ಹಾಗೂ ಅವುಗಳ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿಯರಾದ ತ್ರಿಪೂರ್ಣ, ಕಾವೇರಿ, ಜ್ಯೋತಿ, ಲಕ್ಷ್ಮೀ, ರಶ್ಮಿ ಮತ್ತಿತರರು ಇದ್ದರು.