Advertisement

ಚಿಕ್ಕಕೆರೆಯಲ್ಲಿ ನೀರೂ ಇಲ್ಲ ನಿರ್ವಹಣೆಯೂ ಇಲ್ಲ!

05:34 PM May 18, 2019 | Naveen |

ನಾಯಕನಹಟ್ಟಿ: ಇತಿಹಾಸ ಪ್ರಸಿದ್ಧ ಹಾಗೂ ಪವಾಡ ಪುರುಷ ತಿಪ್ಪೇರುದ್ರಸ್ವಾಮಿಯವರು ನಿರ್ಮಿಸಿದ್ದ ಚಿಕ್ಕಕೆರೆ ನಿರ್ವಹಣೆಯಿಲ್ಲದೆ ಹಾಳಾಗುತ್ತಿದೆ.

Advertisement

2009ರಲ್ಲಿ ತುಂಬಿದ್ದ ಚಿಕ್ಕಕೆರೆ ಹತ್ತು ವರ್ಷಗಳಿಂದ ಖಾಲಿಯಾಗಿದೆ. 17 ನೇ ಶತಮಾನದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ಐದು ಕೆರೆಗಳು ಹಾಗೂ ಗ್ರಾಮಗಳನ್ನು ನಿರ್ಮಿಸಿದ್ದರು. ಗ್ರಾಮದ ಜನರು ನೀರಿನ ಸಮಸ್ಯೆಯನ್ನು ಈಡೇರಿಸುವುದಕ್ಕಾಗಿ ಪ್ರತಿ ಗ್ರಾಮಕ್ಕೊಂದು ಕೆರೆ ನಿರ್ಮಿಸಿದರು. ಕೆರೆಗಳಿಂದ ಜನ, ಜಾನುವಾರುಗಳು ಆಶ್ರಯ ಪಡೆಯಲಿ ಎನ್ನುವ ಉದ್ದೇಶವನ್ನು ಅವರು ಹೊಂದಿದ್ದರು.

ನೀರಾವರಿಗೆ ಬಳಕೆ ಮಾಡದಂತೆ ಆದೇಶ: 350 ಎಕರೆ ಪ್ರದೇಶದಲ್ಲಿ ನೀರು ನಿಲ್ಲುವ ಈ ಕೆರೆ 800 ಎಕರೆ ಪ್ರದೇಶಕ್ಕೆ ನೀರುಣಿಸುತ್ತಿತ್ತು. 20 ವರ್ಷಗಳ ಹಿಂದೆ ತಹಶೀಲ್ದಾರ್‌ ಈ ಕೆರೆಯ ನೀರನ್ನು ನೀರಾವರಿಗೆ ಬಳಕೆ ಮಾಡದಂತೆ ಆದೇಶ ಹೊರಡಿಸಿದ್ದಾರೆ. ಕೆರೆಯನ್ನು ಅಂತರ್ಜಲ ಹೆಚ್ಚಿಸುವ ಉದ್ದೇಶಕ್ಕೆ ಮಾತ್ರ ಬಳಸುವಂತೆ ಸೂಚನೆ ನೀಡಿದ್ದಾರೆ. ಆದರೆ ಹತ್ತು ವರ್ಷಗಳಲ್ಲಿ ಅಂತರ್ಜಲದ ಅತಿಯಾದ ಬಳಕೆ ಹಾಗೂ ಕಡಿಮೆಯಾದ ಮಳೆಯ ಪ್ರಮಾಣದಿಂದ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ.

ಕಾಣದಾದ ಅಭಿವೃದ್ಧಿ ಕಾರ್ಯ: ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವ ಈ ಕೆರೆಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ನೀರಿಲ್ಲದ ಕೆರೆ ನಿರ್ಲಕ್ಷಕ್ಕೆ ಒಳಗಾಗಿದೆ. ಪ್ರತಿ ವರ್ಷ ಕೆರೆಯಲ್ಲಿರುವ ಹಾಗೂ ಕೆರೆಗೆ ನೀರು ಹರಿಯುವ ಹಳ್ಳಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿಲ್ಲ. ಕೆರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಾಲಿಗಿಡಗಳು ಬೆಳೆದಿವೆ. ದಟ್ಟವಾದ ಜಾಲಿ ಗಿಡಗಳ ನಡುವೆ ಕೆರೆಯೇ ಕಾಣದಾಗಿದೆ.

ಕೆರೆಯ ಪ್ರದೇಶದಲ್ಲಿ ಬರಿದಾದ ಮರಳು: ಮಿತಿ ಮೀರಿದ ಅಕ್ರಮ ಮರಳು ಸಾಗಾಣಿಕೆಯಿಂದಾಗಿ ಕೆರೆಗೆ ನೀರು ಹರಿಸುವ ಹಳ್ಳಗಳು ಹಾಗೂ ಕೆರೆಯ ಪ್ರದೇಶದಲ್ಲಿ ಮರಳು ಬರಿದಾಗಿದೆ. ದೊಡ್ಡ ಪ್ರಮಾಣದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುತ್ತಿದ್ದ ಮರಳಿನ ಜಾಗದಲ್ಲಿ ಬೃಹತ್‌ ಗುಂಡಿಗಳು ನಿರ್ಮಾಣವಾಗಿವೆ.

Advertisement

ನೀರು ಹರಿಯಲು ಚೆಕ್‌ ಡ್ಯಾಂ ಅಡ್ಡಿ: ಸಣ್ಣ ನೀರಾವರಿ ಇಲಾಖೆ, ಕೃಷಿ ಇಲಾಖೆ ಚೆಕ್‌ ಡ್ಯಾಂಗಳಿಂದ ನೀರು ಹರಿಯಲು ಅಡ್ಡಿಯಾಗಿದೆ. ಚಿಕ್ಕ ಕೆರೆಗೆ ನೀರು ಹರಿಸುವ ಎರಡು ಹಳ್ಳಗಳಿಗೆ ಅಡ್ಡಲಾಗಿ ಎಂಟು ದೊಡ್ಡ ಪ್ರಮಾಣದ ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ಚೆಕ್‌ ಡ್ಯಾಂಗಳು ತುಂಬಿದ ನಂತರ ಕೆರೆಗೆ ನೀರು ಹರಿಯಬೇಕಾಗಿದೆ. ಕಡಿಮೆಯಾಗಿರುವ ಮಳೆಯ ಪ್ರಮಾಣದಿಂದ ಕೆರೆಗೆ ನೀರು ಹರಿಯದಂತಾಗಿದೆ.

ಶಿಥಿಲಾವಸ್ಥೆಗೆ ತಲುಪಿದ ತೂಬು: ಕೆರೆಯ ನೀರು ಹೊರ ಹೋಗುವ ತೂಬು ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ತೂಬಿನ ಮೇಲ್ಭಾಗಲ್ಲಿದ್ದ ಕಲ್ಲುಗಳು ಕೆರೆಗೆ ಜಾರಿವೆ. ಕತ್ತಲಾಗುತ್ತಿದ್ದಂತೆ ತೂಬಿನ ಪಕ್ಕದ ರಸ್ತೆ ಕುಡುಕರ ತಾಣವಾಗುತ್ತದೆ. ಕೆರೆ ಏರಿ ಮೇಲೆ ರಾಜ್ಯ ಹೆದ್ದಾರಿ 45 ಹಾದು ಹೋಗುತ್ತದೆ. ಆದರೆ ಪಿಡಬ್ಲು ್ಯಡಿ ಕೆರೆಯ ಏರಿ ಮೇಲಿರುವ ಜಾಲಿ ಗಿಡಗಳ ತೆರವಿಗೆ ಕ್ರಮ ಕೈಗೊಂಡಿಲ್ಲ. ಜಾಲಿ ಗಿಡಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿ ಏರಿಯ ಮೇಲಿರುವ ಕಲ್ಲುಗಳು ಕೆರೆಯನ್ನು ಸೇರುತ್ತಿವೆ. ಹೆಚ್ಚಿನ ಜಾಲಿಗಿಡಗಳಿಂದ ಕೆರೆ ಏರಿ ದುರ್ಬಲಗೊಳ್ಳುತ್ತಿದೆ.

ಕೆರೆಯ ಏರಿ, ತೂಬು, ಹಳ್ಳಗಳ ಪ್ರದೇಶಗಳು ಜಾಲಿಮಯವಾಗಿವೆ. ಸಣ್ಣ ನೀರಾವರಿ ಇಲಾಖೆ ಈಗಲಾದರೂ ಕೆರೆ ತೂಬನ್ನು ದುರಸ್ತಿಗೊಳಿಸಬೇಕು. ಏರಿಯ ಮೇಲಿರುವ ಹಾಗೂ ಕೆರೆಯಲ್ಲಿರುವ ಜಾಲಿಗಿಡಗಳನ್ನು ತೆರವುಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವುದು ನಿವಾಸಿಗಳ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next