Advertisement

BJP; ಹರ್ಯಾಣದಲ್ಲಿ ಸಿಎಂ ಬದಲಾವಣೆ; ನಯಾಬ್ ಸಿಂಗ್ ಸೈನಿಗೆ ಪಟ್ಟಕಟ್ಟಿದ ಬಿಜೆಪಿ

02:36 PM Mar 12, 2024 | Team Udayavani |

ಚಂಢೀಗಢ: ಕ್ಷಿಪ್ರ ಬೆಳವಣಿಗೆಯಲ್ಲಿ ಹರ್ಯಾಣ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಿದೆ. ಬಿಜೆಪಿ- ಜೆಜೆಪಿ ಮೈತ್ರಿ ಮುರಿದು ಬಿದ್ದ ಬಳಿಕ ಮನೋಹರ್ ಲಾಲ್ ಖಟ್ಟರ್ ಅವರು ಮಂಗಳವಾರ ರಾಜೀನಾಮೆ ನೀಡಿದ್ದು, ಇದೀಗ ನೂತನ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಅವರನ್ನು ನೇಮಿಸಲಾಗಿದೆ.

Advertisement

ಮಂಗಳವಾರ ಸಂಜೆ 5 ಗಂಟೆಗೆ ನಯಾಬ್ ಸಿಂಗ್ ಸೈನಿ ಅವರು ಹರ್ಯಾಣದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿ ಹೇಳಿದೆ.

ಮನೋಹರ್ ಲಾಲ್ ಖಟ್ಟರ್ ಮತ್ತು ಅವರ ಇಡೀ ಕ್ಯಾಬಿನೆಟ್ ಹರ್ಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ರಾಜೀನಾಮೆ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಈ ನೇಮಕ ನಡೆದಿದೆ.

ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ನಡೆಸಲಿದ್ದಾರೆ ಎನ್ನಲಾಗಿದೆ.

ಯಾರು ಈ ಸೈನಿ: ಕುರುಕ್ಷೇತ್ರ ಸಂಸದ ಮತ್ತು ಒಬಿಸಿ ಸಮುದಾಯದ ನಾಯಕ ನಯಾಬ್ ಸಿಂಗ್ ಸೈನಿ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹರಿಯಾಣ ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

Advertisement

1996 ರಲ್ಲಿ ಬಿಜೆಪಿಯೊಂದಿಗೆ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, ಹರಿಯಾಣ ಬಿಜೆಪಿಯ ಸಾಂಸ್ಥಿಕ ರಚನೆಯಲ್ಲಿ ಪ್ರಾರಂಭಿಸಿ ಕ್ರಮೇಣ ಮೇಲೇರಿದವರು. ಸೈನಿ ಅವರು 2002 ರಲ್ಲಿ ಅಂಬಾಲಾದಲ್ಲಿ ಬಿಜೆಪಿ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ನಂತರ 2005 ರಲ್ಲಿ ಅಂಬಾಲಾದಲ್ಲಿ ಜಿಲ್ಲಾ ಅಧ್ಯಕ್ಷರಾದರು.

ಅವರು 2014 ರಲ್ಲಿ ನಾರಾಯಣಗಢ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು ಮತ್ತು ನಂತರ 2016 ರಲ್ಲಿ ಹರಿಯಾಣ ಸರ್ಕಾರದಲ್ಲಿ ಸಚಿವರಾಗಿ ನೇಮಕಗೊಂಡರು. 2019 ರ ಲೋಕಸಭಾ ಚುನಾವಣೆಯಲ್ಲಿ, ಸೈನಿ ಕುರುಕ್ಷೇತ್ರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಏನು ಈ ಬೆಳವಣಿಗೆ: 2019ರ ವಿಧಾನಸಭೆ ಚುನಾವಣೆಯಲ್ಲಿ 90 ಸ್ಥಾನಗಳ ಪೈಕಿ ಬಿಜೆಪಿ 40ರಲ್ಲಿ ಗೆಲುವು ಸಾಧಿಸಿತ್ತು. ಮ್ಯಾಜಿಕ್ ಸಂಖ್ಯೆ 46 ಆಗಿರುವ ಕಾರಣ ಹತ್ತು ಸದಸ್ಯರನ್ನು ಹೊಂದಿರುವ ಜೆಜೆಪಿ ಮತ್ತು ಏಳು ಪಕ್ಷೇತರರೊಂದಿಗೆ ಮೈತ್ರಿ ಮಾಡಿ ಸರ್ಕಾರ ರಚನೆ ಮಾಡಲಾಗಿತ್ತು.

ಇದೀಗ ಲೋಕಸಭೆ ಚುನಾವಣೆಗೆ ಮುನ್ನ ಸೀಟು ಹಂಚಿಕೆ ವಿಚಾರದಲ್ಲಿ ಎರಡು ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಹೀಗಾಗಿ ಜೆಜೆಪಿ ತನ್ನ ಬೆಂಬಲ ಹಿಂಪಡೆದಿದೆ. ಇದೀಗ ಬಿಜೆಪಿ ಪಕ್ಷೇತರ ಶಾಸಕರೊಂದಿಗೆ ಸೇರಿ ಸರ್ಕಾರ ರಚಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next