ಛತ್ತೀಸಗಡ: ಕೆಂಪು ಉಗ್ರರು ಮತ್ತೊಮ್ಮೆ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಪಡಿಸಿದ್ದಾರೆ. ನೀರು ಶುದ್ಧೀಕರಣ ಘಟಕದ ಕಾಮಗಾರಿಯಲ್ಲಿ ತೊಡಗಿದ್ದ ಐದು ವಾಹನಗಳಿಗೆ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದಾರೆ.
ಈ ದುರ್ಘಟನೆ ಭಾನುವಾರ ಸಂಜೆ (ಏಪ್ರಿಲ್ 11) ಛತ್ತೀಸಗರ್ ರಾಜ್ಯದ ಬಿಜಾಪುರ ಜಿಲ್ಲೆ ನೈಮಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಐದು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮಾವೋವಾದಿಗಳ ದುಷ್ಕೃತ್ಯಕ್ಕೆ ಎಲ್ಲ ವಾಹನಗಳು ಸುಟ್ಟು ಭಸ್ಮವಾಗಿವೆ.
ಕೆಲ ದಿನಗಳ ಹಿಂದೆಯಷ್ಟೇ ಬಿಜಾಪುರ ಹಾಗೂ ಸೂಕ್ಮಾ ಜಿಲ್ಲೆಯ ಗಡಿಭಾಗದ ಅರಣ್ಯದಲ್ಲಿ ಸಿಆರ್ ಪಿಎಫ್ ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಕಾಳಗದಲ್ಲಿ 22 ಜನ ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ನಕ್ಸಲೀಯರ ಕರಾಳಮುಖ ಅನಾವರಣಗೊಂಡಿದೆ.
ಇನ್ನು ನಕ್ಸಲೀಯರು ಈ ರೀತಿ ವಾಹನಗಳಿಗೆ ಬೆಂಕಿ ಹಚ್ಚುವ ಕೃತ್ಯ ನಡೆದಿರುವುದು ಇದೇ ಮೊದಲೆನಲ್ಲ.2018 ರಲ್ಲಿಯೂ ಛತ್ತೀಸ್‍ಗಡ್‍ನ ದಾಂತೇವಾಡ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದ ಕೆಲವು ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.