Advertisement

Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?

11:12 PM Nov 13, 2024 | Team Udayavani |

ಚಿಕ್ಕಮಗಳೂರು: ಕೇರಳದಲ್ಲಿ ನಕ್ಸಲರನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ತೀವ್ರವಾಗುತ್ತಲೇ ಅಲ್ಲಿರುವುದು ಸುರಕ್ಷಿತವಲ್ಲ ಎಂಬ ಕಾರಣಕ್ಕೆ ನಕ್ಸಲೀಯರು ಕರ್ನಾಟಕದ ಮಲೆನಾಡು ಮತ್ತು ಪಶ್ಚಿಮಘಟ್ಟ ಪ್ರದೇಶವನ್ನು ಅಡಗುತಾಣ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಕೊಪ್ಪ ತಾಲೂಕು ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಸುಬ್ಬಗೌಡ ಅವರ ಒಂಟಿಮನೆಗೆ ನಕ್ಸಲರಾದ ಮುಂಡಗಾರು ಲತಾ ಹಾಗೂ ಜಯಣ್ಣ ಇದ್ದ ನಾಲ್ವರ ತಂಡ ಭೇಟಿ ನೀಡಿ ಅಲ್ಲಿಂದ ಪರಾರಿಯಾಗಿರುವ ಘಟನೆ ಮಲೆನಾಡು ಭಾಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 1999-2000ರ ವೇಳೆಗೆ ತೀವ್ರಗೊಂಡಿದ್ದ ನಕ್ಸಲ್‌ ಚಟುವಟಿಕೆ ನಕ್ಸಲ್‌ ನಾಯಕ ಸಾಕೇತ್‌ ರಾಜನ್‌ ಹತ್ಯೆ ಹಾಗೂ 2005ರಲ್ಲಿ ಅಂದಿನ ಸರಕಾರ ನಕ್ಸಲ್‌ ಶರಣಾಗತಿ ಪ್ಯಾಕೇಜ್‌ ಘೋಷಣೆ ಬಳಿಕ ತಗ್ಗಿತ್ತು. ಕೆಲವು ನಕ್ಸಲರು ಶರಣಾಗತರಾಗಿ ನಾಗರಿಕ ಸಮಾಜಕ್ಕೆ ಮರಳಿದರೆ, ಉಳಿದವರು ಕೇರಳದತ್ತ ಮುಖ ಮಾಡಿ ಅಲ್ಲೇ ಅಡಗುತಾಣ ಮಾಡಿಕೊಂಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ಕೇರಳ ಸರಕಾರ ಕೈಗೊಂಡ ದಿಟ್ಟ ಕ್ರಮಗಳಿಂದ ಅನೇಕ ನಕ್ಸಲರನ್ನು ಬಂಧಿ ಸಲಾಗಿತ್ತು. ಇನ್ನೂ ಕೆಲವು ನಕ್ಸಲರು ಮೃತಪಟ್ಟ ಬಳಿಕ ಆ ರಾಜ್ಯವೂ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಮಲೆನಾಡು, ಪಶ್ಚಿಮಘಟ್ಟ ಪ್ರದೇಶದತ್ತ ಮುಖಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಲೆನಾಡು ಭಾಗದಲ್ಲಿ ಸರಕಾರ ವಿ ಧಿಸುತ್ತಿರುವ ಅರಣ್ಯ ಕಾಯ್ದೆಗಳನ್ನೇ ನೆಪವಾಗಿಸಿ ಹೋರಾಟ ರೂಪಿಸಿ ತಮ್ಮ ಆಸ್ತಿತ್ವವನ್ನು ಸಾಬೀತುಪಡಿಸುವ ಜತೆಗೆ ವಯಸ್ಸು ಕುಂದುತ್ತಿರುವ ಹಿನ್ನೆಲೆಯಲ್ಲಿ ಸಮಯ ಸಂದರ್ಭ ನೋಡಿ ಶರಣಾಗಲು ನಕ್ಸಲರು ಮಲೆನಾಡನ್ನು ಅಡಗುತಾಣವಾಗಿ ಮಾಡಿಕೊಂಡಿರಬಹುದು ಎನ್ನುವ ಚರ್ಚೆಗಳೂ ನಡೆಯುತ್ತಿವೆ. ಅರಣ್ಯದಂಚಿನಲ್ಲಿರುವ ಸುಬ್ಬಗೌಡರ ಮನೆಯಲ್ಲಿ ಮುಂಡಗಾರು ಲತಾ, ಜಯಣ್ಣ ಹಾಗೂ ತಂಡ ಅಡುಗೆ ಮಾಡಿ ಊಟ ಮಾಡಿ ತಮ್ಮ ಜತೆಗೆ ತಂದಿದ್ದ ಕೋವಿಗಳನ್ನು ಬಿಟ್ಟು ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ.

Advertisement

ಪತ್ತೆ ಕಾರ್ಯಕ್ಕೆ 4 ತಂಡ
ಮಲೆನಾಡು ಭಾಗದಲ್ಲಿ ನಕ್ಸಲರು ಚಲನವಲನದ ಸುಳಿವು ದೊರೆಯುತ್ತಲೇ ನಕ್ಸಲ್‌ ನಿಗ್ರಹ ದಳ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆ ಹೈಅಲರ್ಟ್‌ ಆಗಿದೆ. ಪರಾರಿಯಾಗಿರುವ ನಕ್ಸಲರ ಪತ್ತೆಗೆ ನಕ್ಸಲ್‌ ನಿಗ್ರಹ ದಳ ಹಾಗೂ ಪೊಲೀಸ್‌ ಇಲಾಖೆಯಿಂದ 4 ತಂಡಗಳನ್ನು ರಚನೆ ಮಾಡಲಾಗಿದ್ದು, ಕೂಂಬಿಂಗ್‌ ಕಾರ್ಯ ಚುರುಕುಗೊಂಡಿದೆ. ಅಂತರ್‌ ಜಿಲ್ಲಾ ಗಡಿಗಳಲ್ಲಿ ವಾಹನ ತಪಾಸಣೆ ಮಾಡಲಾಗುತ್ತಿದೆ. ಶೃಂಗೇರಿ, ಕೆರೆಕಟ್ಟೆ, ಆಗುಂಬೆ ಘಾಟಿ, ಕಳಸ, ಕುದುರೆಮುಖ, ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ಕುದುರೆಮುಖ ಗಡಿ ಭಾಗದಲ್ಲಿಯೂ ಶೋಧಕಾರ್ಯ ತೀವ್ರಗೊಳಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮುಂಡಗಾರು ಲತಾ ಮೇಲೆ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಯಲ್ಲಿ 38 ಹಾಗೆ ಜಯಣ್ಣ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next