Advertisement

ನಕ್ಸಲರ ಐನೂರು ಬೆಂಬಲಿಗರ ಬಂಧನ

06:00 AM Sep 04, 2018 | |

ಹೊಸದಿಲ್ಲಿ: ಕಳೆದ ಒಂದು ವರ್ಷದಿಂದ ಛತ್ತೀಸಗಢದಲ್ಲಿ ನಕ್ಸಲರ ಬೆನ್ನು ಹುರಿಯನ್ನು ಒಂದೊಂದಾಗಿ ಸಿಆರ್‌ಪಿಎಫ್ ಮುರಿಯುತ್ತಿದೆ. ನಕ್ಸಲರಿಗೆ ಬೆಂಬಲ ನೀಡುತ್ತಿದ್ದ ಸುಮಾರು 500 ಜನರನ್ನು ಭದ್ರತಾ ಪಡೆಗಳು ಬಂಧಿಸಿವೆ. ಅಷ್ಟೇ ಅಲ್ಲ ದೇಶದ ಇತರ ರಾಜ್ಯಗಳಲ್ಲೂ ಈ ರೀತಿ ನಕ್ಸಲರಿಗೆ ಬೆಂಬಲ, ನೆರವು ಹಾಗೂ ದಾಳಿ ಯೋಜನೆಯಲ್ಲಿ ನೆರವಾಗುತ್ತಿದ್ದವರನ್ನು ಬಂಧಿಸಲಾಗಿದೆ ಎಂದು ಸಿಆರ್‌ಪಿಎಫ್ನ ಪ್ರಧಾನ ನಿರ್ದೇಶಕ ಆರ್‌ ಆರ್‌ ಭಟ್ನಾಗರ್‌ ಪಿಟಿಐ ಸುದ್ದಿಸಂಸ್ಥೆ ಜತೆಗಿನ ಸಂದರ್ಶನದಲ್ಲಿ ತಿಳಿಸಿದ್ದಾರೆ.

Advertisement

ಕ್ರಾಂತಿಕಾರಿ ಲೇಖಕ ಪಿ.ವರವರ ರಾವ್‌ ಸೇರಿದಂತೆ ಐವರನ್ನು ಪುಣೆ ಪೊಲೀಸರು ಬಂಧಿಸಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಛತ್ತೀಸ್‌ಗಡ ಪೊಲೀಸರ ನೆರವಿನಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಸಿಆರ್‌ಪಿಎಫ್ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅಲ್ಲಿ ನಕ್ಸಲರಿಗೆ ನೆರವು ನೀಡುತ್ತಿರುವವರ ಮೇಲೂ ನಿಗಾ ಇರಿಸಲಾಗುತ್ತದೆ ಎಂದು ಭಟ್ನಾಗರ್‌ ಹೇಳಿದ್ದಾರೆ.  ಗ್ರಾಮೀಣ ಭಾಗಗಳಲ್ಲಿ ನಕ್ಸಲರು ಜನ್‌ ಸೇನೆಯನ್ನು ಕಟ್ಟಿಕೊಂಡಿದ್ದು, ಇವರು ನಕ್ಸಲರಿಗೆ ಮಾಹಿತಿ ಹಾಗೂ ಸ್ಥಳೀಯ ನೆರವು ನೀಡುತ್ತಾರೆ. ಇವರನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಗುರುತಿಸಿ ವಶಕ್ಕೆ ಪಡೆಯಲಾಗುತ್ತಿದೆ ಎಂದಿದ್ದಾರೆ.

ನಕ್ಸಲ್‌ ಪ್ರಭಾವ ಕಡಿಮೆ: ಛತ್ತೀಸ್‌ಗಢದ ಬಸ್ತಾರ್‌ನಂಥ ಪ್ರದೇಶದಲ್ಲಿ ಪೊಲೀಸರು ತೆರಳಲು ಸಾಧ್ಯವಿಲ್ಲದೆ ಇರುವ ಸ್ಥಿತಿ ಇತ್ತು. ಈಗ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಠಾಣೆಗಳನ್ನು  ತೆರೆಯಲು ಸಾಧ್ಯವಾಗಿದೆ. ಈ ರೀತಿಯ 15 ಹೊಸ ಕ್ಯಾಂಪ್‌ಗ್ಳನ್ನು ನಾವು ನಿರ್ಮಿಸಿದ್ದೇವೆ. 160 ನಕ್ಸಲರನ್ನು ಈ ವರ್ಷದಲ್ಲಿ ಸದೆಬಡಿಯಲಾಗಿದೆ. ಕಳೆದ ಐದು ವರ್ಷದಲ್ಲಿ ನಕ್ಸಲ್‌ ಹಿಂಸೆಯ ಪ್ರಮಾಣ ಶೇ. 40ರಷ್ಟು ಕಡಿಮೆಯಾಗಿದೆ ಎಂದಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿದ್ದಕ್ಕೆ ಆಕ್ಷೇಪ
ನಕ್ಸಲ್‌ ಜೊತೆಗೆ ನಂಟು ಹಾಗೂ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಆರೋಪದಲ್ಲಿ ವರವರ ರಾವ್‌ ಹಾಗೂ ಇತರ ಹೋರಾಟಗಾರರ ಬಂಧನಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸ ಹೆಚ್ಚುವರಿ ಪ್ರಧಾನ ನಿರ್ದೇಶಕ ಪರಂಬೀರ್‌ ಸಿಂಗ್‌ ನಡೆಸಿದ ಸುದ್ದಿಗೋಷ್ಠಿಗೆ ಬಾಂಬೆ ಹೈಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ. ಹೋರಾಟಗಾರರು ಬರೆದ ಪತ್ರಗಳನ್ನು ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಓದಿದ್ದರು. ಇಂತಹ ಮಹತ್ವದ ದಾಖಲೆ ಸಾಕ್ಷಿಯಾಗಬಹುದಾಗಿದೆ. ಅಷ್ಟೇ ಅಲ್ಲದೆ, ವಿಚಾರ ನ್ಯಾಯವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸುದ್ದಿಗೋಷ್ಠಿ ನಡೆಸಿದ್ದೇಕೆ ಎಂದು ನ್ಯಾಯಮೂರ್ತಿಗಳಾದ ಎಸ್‌.ಎಸ್‌.ಶಿಂಧೆ ಮತ್ತು ಮೃದುಲಾ ಭಾಟ್ಕರ್‌ ಆಕ್ಷೇಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next