Advertisement

Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ

09:31 PM Nov 12, 2024 | Team Udayavani |

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮತ್ತೆ ನಕ್ಸಲ್‌ ಚಟುವಟಿಕೆ ಸದ್ದು ಮಾಡಿದೆ. ನಕ್ಸಲೀಯರಾದ ಮುಂಡಗಾರು ಲತಾ, ಜಯಣ್ಣ ಹಾಗೂ ಇತರರಿದ್ದ ತಂಡ ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಅರಣ್ಯ ವ್ಯಾಪ್ತಿಯ ಸುಬ್ಬಗೌಡ ಎಂಬವರ ಒಂಟಿ ಮನೆಗೆ ಭೇಟಿ ನೀಡಿರುವುದು ಖಚಿತವಾಗಿದ್ದು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಉಡುಪಿ ಜಿಲ್ಲೆಯ ಕಾರ್ಕಳ ಗಡಿಯಲ್ಲಿ ನಕ್ಸಲರ ಚಲನವಲನದ ಜಾಡು ಹೊರಬೀಳುತ್ತಿದ್ದಂತೆ ಮಲೆನಾಡು ಭಾಗದಲ್ಲಿ ನಕ್ಸಲರು ಕಾರ್ಯ ಚಟುವಟಿಕೆ ಆರಂಭಿಸಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ನಕ್ಸಲ್‌ ನಿಗ್ರಹ ಪಡೆ ಮತ್ತು ಪೊಲೀಸ್‌ ಇಲಾಖೆಯವರು ಇಬ್ಬರು ನಕ್ಸಲ್‌ ಸಹಾನುಭೂತಿಯುಳ್ಳವರನ್ನು ಶೃಂಗೇರಿ ಪೊಲೀಸ್‌ ಠಾಣೆಗೆ ನ.11ರ ಸೋಮವಾರ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಕಡೇಗುಂಡಿಯ ಸುಬ್ಬಗೌಡ ಅವರ ಮನೆಗೆ ನಕ್ಸಲರು ಬಂದು ಹೋದ ಬೆನ್ನಲ್ಲೇ ಅವರು ಬಿಟ್ಟು ಹೋದ ಮೂರು ಎಸ್‌ಬಿಎಂಎಲ್‌ ಬಂದೂಕು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಪರಾರಿಯಾಗಿರುವ ನಕ್ಸಲ್‌ ಮುಖಂಡರಾದ ಮುಂಡಗಾರು ಲತಾ ಮತ್ತು ಜಯಣ್ಣ ಹಾಗೂ ಇತರರ ಬಂಧನಕ್ಕೆ ನಕ್ಸಲ್‌ ನಿಗ್ರಹ ದಳದ ವಿಶೇಷ ತಂಡವನ್ನು ರಚಿಸಿದ್ದು, ತೀವ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಸ್ಥಳೀಯ ಪೊಲೀಸರು ಸಾಥ್‌ ನೀಡುತ್ತಿದ್ದಾರೆ. ನಕ್ಸಲ್‌ ನಿಗ್ರಹ ದಳ ಅಧಿಕಾರಿ ದೂರಿನಂತೆ ಜಯಪುರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದ್ದು, ಕೊಪ್ಪ ವಿಭಾಗದ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆದಿದೆ.

ನಕ್ಸಲರ ತಂಡ ಮಲೆನಾಡು ಭಾಗದಲ್ಲಿ ಓಡಾಡಿರುವ ಮಾಹಿತಿ ಸಿಗುತ್ತಿದ್ದಂತೆ ನಕ್ಸಲ್‌ ನಿಗ್ರಹ ದಳ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ನಕ್ಸಲರು ಕೊಪ್ಪ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿಯೂ ಅಲರ್ಟ್‌ ಆಗಿದ್ದರು. ನಕ್ಸಲ್‌ ಪ್ರಭಾವಿತ ಪ್ರದೇಶಗಳಲ್ಲಿ ತೀವ್ರ ಕೂಂಬಿಂಗ್‌ ಪ್ರಾರಂಭಿಸಿದ್ದರು. ಚೆಕ್‌ಪೋಸ್ಟ್‌ಗಳಲ್ಲಿ ನಾಕಾಬಂದಿ ಹಾಕಿ ತೀವ್ರ ತಪಾಸಣೆ ನಡೆಸಿದ್ದರು. ನಕ್ಸಲ್‌ ನಿಗ್ರಹ ಪಡೆಯ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್‌ ದಯಾಮ ಹಾಗೂ ಎಸ್ಪಿ ವಿಕ್ರಮ ಅಮಟೆ ಎರಡು ದಿನಗಳಿಂದ ಶೃಂಗೇರಿಯಲ್ಲೇ ಮೊಕ್ಕಾಂ ಹೂಡಿದ್ದರೆ. ಪಶ್ಚಿಮ ವಲಯ ಐಜಿಪಿ ಅಮಿತ್‌ ಸಿಂಗ್‌ ನ.12ರ ಮಂಗಳವಾರ ಭೇಟಿ ನೀಡಿದ್ದರು.

ನಕ್ಸಲ್‌ ಮುಂಡಗಾರು ಲತಾ ಅವರ ಶೃಂಗೇರಿ ತಾಲೂಕು ಬುಕಡಿಬೈಲಿನಲ್ಲಿರುವ ಮನೆಯ ಮುಂದೆಯೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಎಎನ್‌ಎಫ್‌ ತಂಡ ಹಲವು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next