Advertisement

ನಕ್ಸಲ್‌ ನಿಗ್ರಹ ಪಡೆ ಸದ್ಯ ಸ್ಥಗಿತ ಇಲ್ಲ: ಗೃಹ ಇಲಾಖೆ

12:30 AM Jun 28, 2022 | Team Udayavani |

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ನಕ್ಸಲ್‌ ಚಟುವಟಿಕೆ ಕ್ಷೀಣಿಸಿದ್ದರೂ ನಕ್ಸಲ್‌ ನಿಗ್ರಹ ಪಡೆಯನ್ನು ಹಿಂಪಡೆಯದಿರಲು ಗೃಹ ಇಲಾಖೆ ತೀರ್ಮಾನಿಸಿದೆ.

Advertisement

ಮಲೆನಾಡಿನ ಅರಣ್ಯದಂಚಿನಲ್ಲಿ ಈ ಹಿಂದೆ ನಕ್ಸಲ್‌ ಚಟುವಟಿಕೆ ಕಾಣಿಸಿಕೊಂಡಿತ್ತು. ನಕ್ಸಲ್‌ ಚಟುವಟಿಕೆ ತೀವ್ರಗೊಳ್ಳುತ್ತಿದ್ದಂತೆ ಸರಕಾರ ಗಂಭೀರವಾಗಿ ಚಿಂತಿಸಿ 2005ರಲ್ಲಿ ನಕ್ಸಲ್‌ ನಿಗ್ರಹ ಪಡೆ ರಚಿಸಿತು. ಸಿವಿಲ್‌ ಪೊಲೀಸ್‌ ಸಿಬಂದಿಯನ್ನು ನಕ್ಸಲ್‌ ನಿಗ್ರಹ ಪಡೆಗೆ ಆಯ್ಕೆ ಮಾಡಿಕೊಂಡು ವಿಶೇಷ ತರಬೇತಿ ನೀಡಲಾಗಿತ್ತು. ಈ ಪಡೆ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ಅರಣ್ಯದಂಚಿನಲ್ಲಿ ಕೂಂಬಿಂಗ್‌ ಕಾರ್ಯಾ ಚರಣೆ ನಡೆಸಿ ನಕ್ಸಲ್‌ ಚಟುವಟಿಕೆಗೆ ಕಡಿವಾಣ ಹಾಕಲು ಮುಂದಾಯಿತು.

ಮಲೆನಾಡಿನಲ್ಲಿ ನಕ್ಸಲ್‌ ಚಟುವಟಿಕೆ ತೀವ್ರಗೊಳ್ಳುತ್ತಿದ್ದಂತೆ ಮೂರು ಜಿಲ್ಲೆಗಳಲ್ಲಿ 10 ಕ್ಯಾಂಪ್‌ಗಳನ್ನು ತೆರೆಯಲಾಯಿತು. ಚಿಕ್ಕಮಗಳೂರು ಜಿಲ್ಲೆಯ ದ್ಯಾವಲಕೊಪ್ಪ, ಕಿಗ್ಗಾ, ಕೆರೆಕಟ್ಟೆ, ಜಯಪುರ, ಶಿವಮೊಗ್ಗ ಜಿಲ್ಲೆಯ ಆಗುಂಬೆ, ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ಮುಂತಾದೆಡೆ ಕ್ಯಾಂಪ್‌ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಕ್ಯಾಂಪ್‌ನಲ್ಲಿ 30ರಿಂದ 35 ಸಿಬಂದಿ ಇದ್ದು, ಎಸ್ಪಿಯನ್ನೂ ನೇಮಿಸಲಾಗಿದೆ.

2005ರಿಂದ 2010ರವರೆಗೂ ಜಿಲ್ಲೆ
ಯಲ್ಲಿ ನಕ್ಸಲ್‌ ಚಟುವಟಿಕೆ ತೀವ್ರತೆ ಪಡೆದಿತ್ತು. ನಕ್ಸಲರು ಮತ್ತು ನಕ್ಸಲ್‌ ನಿಗ್ರಹ ಪಡೆಯ ಸಿಬಂದಿ ಗುಂಡಿನ ಚಕಮಕಿಯಲ್ಲಿ ಪ್ರಾಣವನ್ನೂ ಕಳೆದು ಕೊಂಡರು. 2010ರಿಂದ ಮಲೆನಾಡು ಭಾಗದಲ್ಲಿ ನಕ್ಸಲ್‌ ಚಟುವಟಿಕೆ ಕ್ಷೀಣಿ
ಸಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆಯನ್ನು ಗೃಹ ಇಲಾಖೆ ಹಿಂಪಡೆಯಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ನಕ್ಸಲ್‌ ಚಟುವಟಿಕೆ ಸಂಪೂರ್ಣ ನಿಲ್ಲುವವರೆಗೂ ಪಡೆಯನ್ನು ಹಿಂಪಡೆಯುವುದಿಲ್ಲವೆಂದು ಗೃಹ ಇಲಾಖೆ ಸ್ಪಷ್ಟಪಡಿಸಿದೆ.

ಒಂದು ದಶಕದಿಂದ ಕ್ಷೀಣ
2005ರಿಂದ 2010ರ ವರೆಗೂ ಜಿಲ್ಲೆಯಲ್ಲಿ ಅತ್ಯಂತ ತೀವ್ರವಾಗಿದ್ದ ನಕ್ಸಲ್‌ ಚಟುವಟಿಕೆಗೆ ಮಣಿದಿದ್ದ ಸರಕಾರ ನಕ್ಸಲ್‌ ಶರಣಾಗತಿ ಪ್ಯಾಕೇಜ್‌ ಘೋಷಿಸಿತ್ತು. ನಕ್ಸಲ್‌ ಪ್ಯಾಕೇಜ್‌ನಡಿ ಮಲೆನಾಡಿನ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಯಿತು. ಸಕ್ರಿಯವಾಗಿದ್ದ ನಕ್ಸಲರಲ್ಲಿ ಅನೇಕರು ಶರಣಾದರು. ಪರಿಣಾಮವಾಗಿ 2010ರಿಂದ ನಕ್ಸಲ್‌ ಚಟುವಟಿಕೆ ಜಿಲ್ಲೆಯಲ್ಲಿ ಕ್ಷೀಣಿಸಲಾರಂಭಿಸಿತು.

Advertisement

ನಕ್ಸಲ್‌ ಚಟುವಟಿಕೆ ಸಂಪೂರ್ಣ ಕ್ಷೀಣಿಸಿದೆ ಎಂದು ಖಾತ್ರಿಯಾಗುವವರೆಗೂ ನಕ್ಸಲ್‌ ನಿಗ್ರಹ ಪಡೆಯನ್ನು ಹಿಂಪಡೆಯುವುದಿಲ್ಲ. ಇಲ್ಲಿ ಕ್ರಮ ಕೈಗೊಂಡರೆ ಬೇರೆ ರಾಜ್ಯಕ್ಕೆ ತೆರಳುತ್ತಾರೆ. ಅಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಇಲ್ಲಿಗೆ ಬರುತ್ತಾರೆ. ನಕ್ಸಲ್‌ ಚಟುವಟಿಕೆ ಮತ್ತು ಮಾಹಿತಿದಾರರ ಮೇಲೂ ಪಡೆ ಕಣ್ಣಿಟ್ಟಿದೆ.
-ಆರಗ ಜ್ಞಾನೇಂದ್ರ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next