Advertisement

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

12:02 AM Sep 24, 2024 | Team Udayavani |

ಕಾರ್ಕಳ: ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಕ್ಸಲ್‌ ಸದಸ್ಯರಾದ ಕನ್ಯಾಕುಮಾರಿ ಮತ್ತು ರಮೇಶ್‌ (ಶಿವ ಕುಮಾರ್‌) ಅವರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಸೆ. 23ರಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Advertisement

ಬೆಂಗಳೂರು ಪೊಲೀಸರು ಬಿಗು ಭದ್ರತೆಯೊಂದಿಗೆ ಮಂಗಳೂರಿಗೆ ಕರೆತಂದು ಸೋಮವಾರ ಕಾರ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ಅಪಹರಣ, ಕೊಲೆ ಪ್ರಕರಣ
2011ರ ನ. 19ರಂದು ಹೆಬ್ರಿ ತಾಲೂಕು ಕಬ್ಬಿನಾಲೆಯಲ್ಲಿ ನಡೆದ ಸದಾಶಿವ ಗೌಡ ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಯಿತು.

ಸದಾಶಿವ ಗೌಡ ಅವರನ್ನು ಕನ್ಯಾಕುಮಾರಿಯನ್ನೊಳಗೊಂಡ ನಕ್ಸಲ್‌ ತಂಡ ಅಪಹರಿಸಿ ಗುಂಡು ಹಾರಿಸಿ ಕೊಲೆ ನಡೆಸಿತ್ತು ಎನ್ನುವ ಆರೋಪ ಇವರ ಮೇಲಿದೆ. ಕಾರ್ಕಳ ಡಿವೈಎಸ್ಪಿ ಅರವಿಂದ್‌ ಎನ್‌. ಕಲಗುಜ್ಜಿ ನೇತೃತ್ವದ ತಂಡ ತೀವ್ರ ವಿಚಾರಣೆ ನಡೆಸಿತು.

ಅಕ್ಕನ ನೋವಿಗೆ ತಂಗಿ ಕಾಡಿಗೆ
ನಕ್ಸಲ್‌ ಸದಸ್ಯೆ ಕನ್ಯಾಕುಮಾರಿ ಆಲಿಯಾಸ್‌ ಸುವರ್ಣ ಬಡ ಕುಟುಂಬದ ವಳಾಗಿದ್ದು, ಮೂಡಿಗೆರೆ ತಾಲೂಕು ಕಳಸ ಹೋಬಳಿ ಹಳವಳ್ಳಿ ಗ್ರಾಮದ ಜರಿಮನೆಯ ನಿವಾಸಿ.

Advertisement

ಪೋಷಕರೊಂದಿಗೆ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಈ ವೇಳೆ ಈಕೆಯ ಅಕ್ಕ ಯಶೋದಾ ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಕ್ಸಲ್‌ ಬಾವುಟ ಹಿಡಿದಿದ್ದಳು. ಕಾರ್ಕಳದ ಈದುವಿನಲ್ಲಿ 2003ರ ನ. 13ರಂದು ನಕ್ಸಲರ ವಿರುದ್ಧ ಮೊದಲ ಎನ್‌ಕೌಂಟರ್‌ ನಡೆದಿತ್ತು. ಘಟನೆಯಲ್ಲಿ ಕೊಪ್ಪದ ಪಾರ್ವತಿ ಮತ್ತು ರಾಯಚೂರಿನ ಹಾಜಿಮಾ ಎಂಬಿಬ್ಬರು ಮೃತಪಟ್ಟಿದ್ದರು. ಯಶೋದಾಳ ಕಾಲಿಗೆ ಗುಂಡು ಬಿದ್ದಿತ್ತು. ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದ ಯಶೋದಾಳ ಪರಿಸ್ಥಿತಿಯಿಂದ ನೊಂದು ಕನ್ಯಾಕುಮಾರಿಯೂ ನಕ್ಸಲ್‌ ಹಾದಿ ಹಿಡಿದಿದ್ದಳು.

ಆಶ್ರಯ ಕೊಟ್ಟವನನ್ನೇ ಮದುವೆಯಾದಳು
ಅಲ್ಲಿಂದ ಐದು ವರ್ಷ ಆಕೆಯದು ಕಾಡಿನ ಬದುಕಾಗಿತ್ತು. ಕನ್ಯಾಕುಮಾರಿ ವಿರುದ್ಧ 32 ಪ್ರಕರಣಗಳು ದಾಖಲಾಗಿವೆ. ಕಾಯಿಲೆಗಳಿಗೆ ಒಳಗಾಗಿದ್ದ ಕನ್ಯಾ ಕುಮಾರಿ 2008ರಲ್ಲಿ ಪಶ್ಚಿಮಘಟ್ಟಗಳ ಅರಣ್ಯದಿಂದ ಹೊರಬಂದು ಬೆಂಗಳೂರು ಸೇರಿಕೊಂಡಿದ್ದಳು. ಅಲ್ಲಿ ತನಗೆ ಆಶ್ರಯ ಕೊಟ್ಟ ಬನ್ನೇರುಘಟ್ಟದ ರಮೇಶ್‌ ಅಲಿಯಾಸ್‌ ಶಿವಕುಮಾರ್‌ನನ್ನು ವಿವಾಹ ವಾಗಿದ್ದಳು. ರಮೇಶ್‌ ಕೂಡ ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ.

ಯಾರು ರಮೇಶ್‌
ಆಲಿಯಾಸ್‌ ಶಿವಕುಮಾರ್‌?
ರಾಯಚೂರು ಮೂಲದ ಶಿವಕುಮಾರ್‌ ಆಂಧ್ರದ ಕ್ರಾಂತಿಕಾರಿ ಕವಿ ಗದ್ದರ್‌ ಪ್ರಭಾವಕ್ಕೆ ಒಳಗಾಗಿ ರಮೇಶ್‌ ಎಂಬ ಹೆಸರಿನಲ್ಲಿ ನಕ್ಸಲ್‌ ಸಂಘಟನೆ ಸೇರಿ ಬಂದೂಕು ಕೈಗೆತ್ತಿಕೊಂಡಿದ್ದ. ಬೆಂಗಳೂರಿನ ಕೊಳೆಗೇರಿಯಲ್ಲಿ ವಾಸವಿದ್ದ ಈತ ಬಳಿಕ ಹಾಸ್ಟೆಲ್‌ ವಿದ್ಯಾರ್ಥಿಗಳನ್ನು ಸಂಘಟಿಸಿ ಆಂಧ್ರ ಗಡಿಭಾಗದ ರೈತ ಕೂಲಿ ಕಾರ್ಮಿಕ ಸಂಘಟನೆಯ ಭೂ ಹೋರಾಟದಲ್ಲಿ ತೊಡಗಿಸುವ ಮೂಲಕ ಹಲವರು ನಕ್ಸಲ್‌ ಚಟುವಟಿಕೆಗೆ ಆಕರ್ಷಣೆಗೆ ಒಳಗಾಗುವಂತೆ ಮಾಡಿದ್ದ. ಈತನ ಮೇಲೆ ಹಲವು ಪ್ರಕರಣಗಳು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ದಾಖಲಾಗಿವೆ. ಈತನ ಪತ್ನಿ ಈದು ಎನ್‌ಕೌಂಟರ್‌ನಲ್ಲಿ ಹತಳಾಗಿದ್ದ ಪಾರ್ವತಿ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿತ್ತು.

2017ರಲ್ಲಿ ಶರಣು: ಮುಗಿಯದ ವಿಚಾರಣೆೆ
2017ರಲ್ಲಿ ನಕ್ಸಲರು ಸಮಾಜದ ಮುಖ್ಯ ವಾಹಿನಿಗೆ ಬಂದರೆ ಭೂಮಿ, ವಸತಿ, ಉದ್ಯೋಗ ಸಹಿತ ತಮ್ಮ ಮೇಲಿನ ಪ್ರಕರಣಗಳನ್ನು ರದ್ದುಪಡಿಸುವುದಾಗಿ ಹಾಗೂ ಜತೆಗೆ ಸೌಲಭ್ಯ ನೀಡುವುದಾಗಿ ಸರಕಾರ ಹೇಳಿತ್ತು. ರಾಜ್ಯದ ವಿವಿಧ ಕಡೆಗಳ ನಕ್ಸಲರನ್ನು ಅಂದು ಸರಕಾರ ಶರಣಾಗುವಂತೆ ಮಾಡಿತ್ತು. ಈ ಸಂದರ್ಭ 8 ವರ್ಷ ತಲೆಮರೆಸಿಕೊಂಡಿದ್ದ ಕನ್ಯಾಕುಮಾರಿ ಮತ್ತು ರಮೇಶ್‌ ಅವರು ಎ.ಕೆ. ಸುಬ್ಬಯ್ಯ ನೇತೃತ್ವದ ಸಮಿತಿಯನ್ನು ಸಂಪರ್ಕಿಸಿ ಶರಣಾಗಿದ್ದರು. ಬಳಿಕ ಅವರು ವಿಚಾರಣೆಗಾಗಿ ಸೆರೆಮನೆ ಅನುಭವಿಸುವಂತಾಗಿತ್ತು. ಇವರಿಬ್ಬರ ಜತೆ ಅವರ ಐದು ವರ್ಷದ ಮಗು ಕೂಡ ಸೆರೆವಾಸ ಅನುಭವಿಸಿತ್ತು ಎಂದು ಹೇಳಲಾಗುತ್ತಿದೆ.

ನಕ್ಸಲರು ದೇಶಭಕ್ತರೆಂದು ಘೋಷಣೆ
ಕಾರ್ಕಳಕ್ಕೆ ತನಿಖೆಗಾಗಿ ಕರೆತಂದಿದ್ದ ವೇಳೆ ನ್ಯಾಯಾಲಯದ ಆವರಣದಲ್ಲಿ ರಮೇಶ್‌ ಹಲವು ಬಾರಿ ಘೋಷಣೆ ಕೂಗಿದ. ನಕ್ಸಲರು ದೇಶಭಕ್ತರು, ಮಾವೋವಾದಿ ಜಿಂದಾಬಾದ್‌, ಏ ಆಜಾದಿ ಜೂಟಿ ಹೇ, ದೇಶ್‌ ಕಿ ಜನತಾ ಬೂಕಿ ಹೇ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದ.

Advertisement

Udayavani is now on Telegram. Click here to join our channel and stay updated with the latest news.

Next