Advertisement

ನಕ್ಸಲ್‌ ದಾಳಿ: ಡಿಡಿ ಸಿಬಂದಿ, ಇಬ್ಬರು ಪೊಲೀಸರ ಸಾವು

06:30 AM Oct 31, 2018 | Team Udayavani |

ರಾಯ್ಪುರ: ಚುನಾವಣೆಗೆ ತಯಾರಾಗುತ್ತಿರುವ ಛತ್ತೀಸ್‌ಗಢ‌ದ ದಂತೇವಾಡ ಜಿಲ್ಲೆಯಲ್ಲಿ ನಕ್ಸಲೀಯರು ಮತ್ತೂಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ ನಿಲವಾಯಾ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ಪತ್ರಕರ್ತರು ತೆರಳುತ್ತಿದ್ದ ವಾಹನಗಳ ಮೇಲೆ ನಕ್ಸಲರು ಏಕಾಏಕಿ ದಾಳಿ ನಡೆಸಿದ್ದು, ದೂರದರ್ಶನ ನ್ಯೂಸ್‌ ಕ್ಯಾಮೆರಾಮನ್‌ ಮತ್ತು ಇಬ್ಬರು ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್‌ ಸಿಬಂದಿ ಗಾಯಗೊಂಡಿದ್ದಾರೆ.

Advertisement

ಮಂಗಳವಾರ ಬೆಳಗ್ಗೆ 11 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎಂದು ನಕ್ಸಲ್‌ ನಿಗ್ರಹ ದಳದ ಡಿಐಜಿ ಸುಂದರರಾಜ್‌ ಪಿ ತಿಳಿಸಿದ್ದಾರೆ. ಇದೇ ವೇಳೆ, ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ ನಕ್ಸಲರನ್ನು ಅಟ್ಟಿಸಿಕೊಂಡು ಹೋಗಿದ್ದು, ಗ್ರಾಮವೊಂದಕ್ಕೆ ನುಗ್ಗಿದ ನಕ್ಸಲರು ಇಬ್ಬರು ಮೃತರನ್ನು ಎಳೆದುಕೊಂಡು ಹೋಗುತ್ತಿದ್ದುದನ್ನು ಭದ್ರತಾ ಪಡೆ ಸಿಬಂದಿ ನೋಡಿದ್ದಾರೆ. ಹೀಗಾಗಿ ಪ್ರತಿದಾಳಿಯಲ್ಲಿ ಇಬ್ಬರು ನಕ್ಸಲೀಯರು ಹತರಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಗುಂಡಿನ ಚಕಮಕಿ ಬಳಿಕ 8ರಿಂದ 10 ಸುಧಾರಿತ ಸ್ಫೋಟಕಗಳು ಪತ್ತೆಯಾಗಿದ್ದು, ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ವಿಶೇಷ ಡಿಜಿ ಡಿ.ಎಂ. ಅವಸ್ತಿ ಹೇಳಿದ್ದಾರೆ.


ಸಾವಿಗೂ ಮುನ್ನ ಸಾಹು ಫೇಸ್‌ಬುಕ್‌ ಗೆ ಅಪ್‌ಲೋಡ್‌ ಮಾಡಿದ ಚಿತ್ರ.

ಹೇಗಾಯ್ತು ದಾಳಿ?: ಬೆಳಗ್ಗೆ ಸ್ಥಳೀಯ ಪೊಲೀಸ ತಂಡವೊಂದು ಎಂದಿನಂತೆ ಗಸ್ತು ತಿರುಗಲು ಸಮೇಲಿ ಕ್ಯಾಂಪ್‌ನಿಂದ ನಿಲವಾಯಾ ಗ್ರಾಮದತ್ತ ಮೋಟಾರ್‌ ಬೈಕ್‌ನಲ್ಲಿ ತೆರಳುತ್ತಿತ್ತು. ಇದೇ ಸಮಯದಲ್ಲಿ, ದೂರದರ್ಶನದ ಮೂವರು ಸದಸ್ಯರ ತಂಡವೂ ನ್ಯೂಸ್‌ ಕವರೇಜ್‌ಗಾಗಿ ತಮ್ಮ ವಾಹನದಲ್ಲಿ ಹೊರಟಿತ್ತು. ನಿಲವಾಯಾ ಗ್ರಾಮದಲ್ಲಿ ಮಾವೋವಾದಿಗಳು ಮರ ವೊಂದರಲ್ಲಿ ಅಂಟಿಸಿದ್ದ ಪೋಸ್ಟರ್‌ ಅನ್ನು ನೋಡಿ, ಡಿಡಿ ನ್ಯೂಸ್‌ ಕ್ಯಾಮೆರಾಮನ್‌ ಅಚ್ಯುತಾನಂದ್‌ ಸಾಹು ಅವರು ಅದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲೆಂದು ಬೈಕ್‌ನಿಂದ ಇಳಿದು ಆ ಮರದತ್ತ ನಡೆದರು. ಅಷ್ಟರಲ್ಲಿ ಸುಮಾರು 100 ಮಂದಿ ನಕ್ಸಲರ ತಂಡವು ಏಕಾಏಕಿ ಗುಂಡಿನ ದಾಳಿ ನಡೆಸಿತು. ಮೊದಲ ಸುತ್ತಿನ ದಾಳಿಯಲ್ಲೇ ಸಾಹು ಅವರು ಅಸುನೀಗಿದರು. ಜತೆಗೆ, ಸಬ್‌ ಇನ್‌ಸ್ಪೆಕ್ಟರ್‌ ರುದ್ರಪ್ರತಾಪ್‌ ಸಿಂಗ್‌, ಸಹಾಯಕ ಕಾನ್‌ಸ್ಟೇಬಲ್‌ ಮಂಗಾಲು ಕೂಡ ಮೃತಪಟ್ಟರು. ಚುನಾವಣೆಯ ಕುರಿತು ಸುದ್ದಿ ಸಂಗ್ರಹಿಸಲೆಂದು ಸಾಹು ದಿಲ್ಲಿಯಿಂದ ಬಂದಿದ್ದರು. ಪತ್ರಕರ್ತರ ತಂಡದಲ್ಲಿದ್ದ ಮತ್ತಿಬ್ಬರು ಸದಸ್ಯರು ಸುರಕ್ಷಿತವಾಗಿದ್ದಾರೆ ಎಂದು ಡಿಐಜಿ ತಿಳಿಸಿದ್ದಾರೆ.

ಇಬ್ಬರಿಗೆ ಗಾಯ: ಘಟನೆಯಲ್ಲಿ ಕಾನ್‌ಸ್ಟೆಬಲ್‌ ವಿಷ್ಣು ನೇತಮ್‌, ಸಹಾಯಕ ಕಾನ್‌ಸ್ಟೆಬಲ್‌ ರಾಕೇಶ್‌ ಕೌಶಾಲ್‌ ಗಾಯಗೊಂಡಿದ್ದಾರೆ. ಅವರನ್ನು ದಂತೇವಾಡ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗತ್ಯಬಿದ್ದರೆ ಹೆಲಿ ಕಾಪ್ಟರ್‌ ಮೂಲಕ ರಾಯ್ಪುರಕ್ಕೆ ಸಾಗಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದೂ ಸುಂದರರಾಜ್‌ ಹೇಳಿದ್ದಾರೆ.

Advertisement

ಇತ್ತೀಚೆಗಷ್ಟೇ ಬಿಜಾಪುರ ಜಿಲ್ಲೆಯ ಅವಪಲ್ಲಿಯಲ್ಲಿ ಬುಲೆಟ್‌ ಪ್ರೂಫ್ ಬಂಕರ್‌ ವಾಹನವನ್ನು ಸ್ಫೋಟಿಸಿದ್ದ ನಕ್ಸಲರು, ನಾಲ್ವರು ಸಿಆರ್‌ಪಿಎಫ್ ಯೋಧರನ್ನು ಹತ್ಯೆಗೈದಿದ್ದರು. ನವೆಂಬರ್‌ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತದಾನ ಬಹಿಷ್ಕರಿಸುವಂತೆ ಗ್ರಾಮಸ್ಥರಿಗೆ ನಕ್ಸಲೀಯರು ಕರೆ ನೀಡಿದ್ದಾರೆ.

ಕೇಂದ್ರ ಸಚಿವರಿಂದ ತೀವ್ರ ಖಂಡನೆ
ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಘಟನೆ ಅತ್ಯಂತ ಖಂಡನೀಯ. ಕ್ಯಾಮೆರಾಮನ್‌ ಸಾಹು ಹಾಗೂ ಇಬ್ಬರು ಪೊಲೀಸರ ಸಾವಿನಿಂದ ತೀವ್ರ ದುಃಖವಾಗಿದೆ. ನಮ್ಮ ದೃಢ ನಿರ್ಣಯವನ್ನು ದುರ್ಬಲಗೊಳಿಸಲು ಬಂಡುಕೋರರಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಜತೆಗೆ ಸಾಹು ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಸಿಎಂ ಆಗಿರಲು ಅರ್ಹರೇ ಅಲ್ಲ
ಮಂಗಳವಾರದ ನಕ್ಸಲ್‌ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್‌, ಆಡಳಿತಾರೂಢ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ನಕ್ಸಲ್‌ ದಾಳಿಯನ್ನು ನಿಯಂತ್ರಿಸುವಲ್ಲಿ ರಾಜ್ಯದಲ್ಲಿನ ಬಿಜೆಪಿ ಸರಕಾರ ವಿಫ‌ಲವಾಗಿದೆ. ಹೇಡಿ ಮತ್ತು ಭಯಪೀಡಿತ ರಮಣ್‌ಸಿಂಗ್‌ ಅವರಿಗೆ ಇನ್ನು ಒಂದು ಕ್ಷಣವೂ ಮುಖ್ಯಮಂತ್ರಿ ಸೀಟಿನಲ್ಲಿ ಕುಳಿತುಕೊಳ್ಳುವ ಅರ್ಹತೆಯಿಲ್ಲ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next