Advertisement

ಮೇಲ್ದರ್ಜೆಗೇರದ ನಕ್ಸಲ್‌ ಪೀಡಿತ ಸಿದ್ದಾಪುರ ಪ್ರಾ. ಆರೋಗ್ಯ ಕೇಂದ್ರ

01:00 AM Feb 26, 2019 | Harsha Rao |

ಸಿದ್ದಾಪುರ: ಗ್ರಾಮೀಣ ಹಾಗೂ ನಕ್ಸಲ್‌ ಪೀಡಿತ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಗ್ರಾಮಸ್ಥರ ಆಗ್ರಹವು ಮರೀಚಿಕೆಯಾಗಿದೆ. ಇರುವ ಹುದ್ದೆಗಳು ಎಲ್ಲವೂ ಖಾಲಿ ಇವೆ. ಮಂಗನ ಕಾಯಿಲೆಗಳು ಸೇರಿದಂತೆ ಸಾಂಕ್ರಾಮಿಕ ಕಾಯಿಲೆ ಹರಡುತ್ತಿವೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಕೇಂದ್ರಗಳ ಅಗತ್ಯ ಇನ್ನೂ ಹೆಚ್ಚು. ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸೇರಿದಂತೆ ದಾದಿಯರ ಹುದ್ದೆಗಳು ಖಾಲಿ ಖಾಲಿಯಾಗಿದ್ದು, ರೋಗಿಗಳು ಪರದಾಡುವಂತಾಗಿದೆ.

Advertisement

ಹುದ್ದೆಗಳು ಖಾಲಿ ಖಾಲಿ
 ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೇಕಾಗಿರುವ 26 ಹುದ್ದೆಗಳಲ್ಲಿ 19 ಹುದ್ದೆ ಖಾಲಿ ಇವೆ. ಕೇವಲ 7 ಹುದ್ದೆಗಳಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವೊಂದು ಹುದ್ದೆಗಳಿಗೆ ಗುತ್ತಿಗೆ ಅಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿ ಬೇಕಾಗಿರುವ ಸ್ಟಾಫ್‌ ನರ್ಸ್‌ ಹುದ್ದೆಯೇ ಇಲ್ಲಿಯ ತನಕ ಸೃಷ್ಟಿಯಾಗಿಲ್ಲ. ಆರೋಗ್ಯ ಕೇಂದ್ರಕ್ಕೆ ಖಾಯಂ ಆಡಳಿತ ವೈದ್ಯಾಧಿಕಾರಿಗಳು ಸೇರಿದಂತೆ 3 ವೈದ್ಯರ ಹುದ್ದೆ ಖಾಲಿ ಇವೆ. ಪ್ರಥಮ ದರ್ಜೆ ಸಹಾಯಕ, ನೇತ್ರಾಧಿಕಾರಿ, ಪ್ರಯೋಗ ಶಾಲೆ ತಂತ್ರಜ್ಞಾನ ಹುದ್ದೆಯಲ್ಲಿ ತಲಾ ಒಬ್ಬೊಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ದ್ವಿತೀಯ ದರ್ಜೆ ಸಹಾಯಕ ಹುದ್ದೆ ಖಾಲಿ ಇದೆ. ಬಿ.ಎಚ್‌.ಇ., ಫಾರ್ಮಾಸಿಸ್ಟ್‌, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ, ಹಿರಿಯ ಪುರುಷ ಆರೋಗ್ಯ ಸಹಾಯಕ, ವಾಹನ ಚಾಲಕ ತಲಾ ಒಂದೊಂದು ಹುದ್ದೆ ಖಾಲಿ ಇದೆ. ಕಿರಿಯ ಪುರುಷ ಆರೋಗ್ಯ ಸಹಾಯಕ 3 ಹುದ್ದೆಯಲ್ಲಿ 2 ಖಾಲಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ 8 ಹುದ್ದೆಯಲ್ಲಿ 7 ಖಾಲಿ, ಡಿ ದರ್ಜೆ 3 ಹುದ್ದೆಯಲ್ಲಿ 2 ಖಾಲಿ ಇವೆ. ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾಧಿಕಾರಿ ಡಾ| ದೀಕ್ಷಾ ಅವರು ದಿನಕ್ಕೆ ಕನಿಷ್ಠ 80 ರಿಂದ 90 ರೋಗಿಗಳನ್ನು ನೋಡುತ್ತಿದ್ದಾರೆ. ಆದರೆ ರೋಗಿಗಳಿಗೆ ಪರದಾಟ ತಪ್ಪುತ್ತಿಲ್ಲ. ಇಲ್ಲಿ ವಾಹನದ ವ್ಯವಸ್ಥೆಯೇ ಇಲ್ಲ.

ಯಾವುದೇ ರೀತಿಯ ಸಮಸ್ಯೆಯಿಲ್ಲ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹಾಗೂ ದಾದಿಯರ ಹುದ್ದೆ ಖಾಲಿ ಇದೆ. ಇಲಾಖೆ ಗುತ್ತಿಗೆ ಆಧಾರದ ಮೇಲೆ ಕೆಲವೊಂದು ಖಾಲಿ ಹುದ್ಧೆಗಳಿಗೆ ನೇಮಕ ಮಾಡಿಕೊಂಡಿದೆ. ಸರಕಾರದಿಂದ ಒದಗಿಸಲಾಗುತ್ತಿರುವ ಔಷಧವು ವಿವಿಧ ರೋಗಿಗಳ ರೋಗಕ್ಕೆ ಅನುಗುಣವಾಗಿ ಉಪಯೋಗಕ್ಕೆ ಲಭಿಸುತ್ತಿದ್ದು ಆ ಬಗ್ಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ.
-ಡಾ| ಸನ್ಮಾನ ಶೆಟ್ಟಿ, ಪ್ರಭಾರ ಆಡಳಿತ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸಿದ್ದಾಪುರ

ರೋಗಿಗಳಿಗೆ ತೊಂದರೆಯಾಗದ ರೀತಿ ಕಾರ್ಯ ನಿರ್ವಹಣೆ
ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರು ಇಲ್ಲ. ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದೇವೆ. ಖಾಯಂ ವೈದ್ಯರ ನೇಮಕ ಸರಕಾರದ ಮಟ್ಟದಲ್ಲಿ ನಡೆಯ ಬೇಕಾಗಿದೆ. ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಕೆಲವೊಂದು ಮೂಲ ಸಮಸ್ಯೆಗಳ ಬಗ್ಗೆ ಶಾಸಕರ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. 
-ಡಾ| ನಾಗಭೂಷಣ ಉಡುಪ, ತಾಲೂಕು ವೈದ್ಯಾಧಿಕಾರಿ ಕುಂದಾಪುರ

ಹೆರಿಗೆ ವಾರ್ಡ್‌ ಕೊರತೆ
ಮೊದಲು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರು ಹಾಗೂ ದಾದಿಯರು ನೇಮಕವಾಗಬೇಕು. ಸಿದ್ದಾಪುರ ಪರಿಸರದ 8 ಗ್ರಾಮಗಳ ಗರ್ಭಿಣಿಯರ ಸುಶ್ರೂಷೆಗೆ ಅಗತ್ಯವಿರುವ ಮೆಟರ್ನಿಟಿ ವಾರ್ಡ್‌ (ಲೇಬರ್‌ ವಾರ್ಡ್‌) ಕೊರತೆ ಇದೆ. ತುರ್ತು ಚಿಕಿತ್ಸೆಗೆ ದೂರದ ಕುಂದಾಪುರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಇದರ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳುವುದು ಅಗತ್ಯ.
-ಕೆ. ಭೋಜ ಶೆಟ್ಟಿ ಕಡ್ರಿ ಮಾಜಿ ಸದಸ್ಯರು ಗ್ರಾ. ಪಂ. ಸಿದ್ದಾಪುರ 

Advertisement

24×7 ಸೇವೆ 
ಸಿದ್ದಾಪುರ ಆರೋಗ್ಯ ಕೇಂದ್ರ ವ್ಯಾಪ್ತಿಗೆ ನಕ್ಸಲ್‌ ಪೀಡಿತ ಪ್ರದೇಶ ಮತ್ತು ತೀರ ಗ್ರಾಮೀಣ ಭಾಗಗಳು ಹೊಂದಿವೆ. ತುರ್ತು ಚಿಕಿತ್ಸೆಗೆ ಸಂಬಂಧಪಟ್ಟಂತೆ ಬೇಕಾದ ವ್ಯವಸ್ಥೆಗಳ ಕೊರತೆ ನಿಭಾಯಿಸುವಲ್ಲಿ ಮೇಲಧಿಕಾರಿಗಳ ಗಮನಕ್ಕೆ ಜಿ. ಪಂ. ಸಭೆಯಲ್ಲಿ ತರಲಾಗಿದೆ. ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವ ಬಗ್ಗೆ ಶಾಸಕರು ಪ್ರಯತ್ನ ಮಾಡುತ್ತಿದ್ದಾರೆ.  ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವುದರೊಡನೆ 24×7 ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳುವಂತೆ ಪ್ರಯತ್ನಿಸಲಾಗುವುದು.
-ರೋಹಿತ್‌ ಕುಮಾರ್‌ ಶೆಟ್ಟಿ, ಸದಸ್ಯರು, ಜಿ. ಪಂ. ಸಿದ್ದಾಪುರ ಕ್ಷೇತ್ರ 

Advertisement

Udayavani is now on Telegram. Click here to join our channel and stay updated with the latest news.

Next