Advertisement

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

05:55 AM Jan 09, 2025 | Team Udayavani |

6 ನಕ್ಸಲರು ಶರಣಾಗುವ ಮೂಲಕ ದಶಕಗಳ ಕಾಲ ಪಶ್ಚಿಮ ಘಟ್ಟದಲ್ಲಿ ಕೇಳಿ ಬರುತ್ತಿದ್ದ ನಕ್ಸಲರ ಗುಂಡಿನ ಮೊರೆತಕ್ಕೆ ಪೂರ್ಣ ವಿರಾಮ ಬೀಳುವ ಸಾಧ್ಯತೆ ಇದೆ. ಹಸುರು ಕಾನನದಲ್ಲಿ ಕೆಂಪು ಬಂಡುಕೋರರ ಉಪಟಳ ಇನ್ನಿರಲ್ಲ. ಬಂದೂಕುಗಳನ್ನು ಕೆಳಗಿಟ್ಟು ನಕ್ಸಲರು ಮುಖ್ಯವಾಹಿನಿಗೆ ಸೇರುತ್ತಿರುವ ಈ ಹೊತ್ತಿನಲ್ಲಿ ನಕ್ಸಲ್‌ ಶರಣಾಗತಿ, ಪುನರ್ವಸತಿ ಪ್ಯಾಕೇಜ್‌, ಪಶ್ಚಿಮ ಘಟ್ಟದಲ್ಲಿ ನಕ್ಸಲ್‌ ಹೆಜ್ಜೆಗಳು ಇತ್ಯಾದಿ ಮಾಹಿತಿ ಇಲ್ಲಿದೆ.

Advertisement

ಎರಡು ದಶಕಗಳಿಂದ ಪಶ್ಚಿಮ ಘಟ್ಟದ ಹಸುರ ಕಾನನದಲ್ಲಿ ಕಾಣ ಸಿಗುತ್ತಿದ್ದ ಕೆಂಪು ಹೆಜ್ಜೆಗಳು, ಕೇಳು ತ್ತಿದ್ದ ಗುಂಡಿನ ಮೊರೆತಗಳು ಇನ್ನು ಬಹುತೇಕ ಸ್ತಬ್ಧವಾಗಲಿದೆ. ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಗಳ ಭಾಗಗಳಲ್ಲಿ ಹಾಗೂ ನೆರೆಯ ಕೇರಳದ ದಟ್ಟಾರಣ್ಯದ ನಡುವೆ ಓಡಾಡುತ್ತಿದ್ದ ನಕ್ಸಲರು ಬೆಂಗಳೂರಿನಲ್ಲಿ ಶರಣಾಗಿದ್ದಾರೆ. ಇದರೊಂದಿಗೆ ಕಾಡು ಮತ್ತು ನಾಡಿನ ನಡುವಿನ ರಕ್ತಸಿಕ್ತ ಅಧ್ಯಾಯವೊಂದು ಕೊನೆಗೊಳ್ಳಲಿದೆ. ಅವರು ಮತ್ತೆ ಮುಖ್ಯವಾಹಿನಿಗೆ ಬಂದು ಸಾಮಾನ್ಯ ಜನರಂತೆ ಬದುಕು ಕಟ್ಟಿಕೊಳ್ಳಲಿದ್ದಾರೆ.

ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ
ಕರ್ನಾಟಕ ವಿಮೋಚನ ರಂಗ ಹೆಸರಿನ ಸಂಘಟನೆಯನ್ನು ಬೆಂಗಳೂರಿನಲ್ಲಿ ಕೊಳೆಗೇರಿ ಮತ್ತು ದಮನಿತರ ಹಕ್ಕಿಗಾಗಿ ಹುಟ್ಟು ಹಾಕಲಾಗಿತ್ತು. ಇದು ಕ್ರಮೇಣ ಬೆಳೆದು ಕಾಡನ್ನೂ ಪ್ರವೇಶಿಸಿತು. ಆದರೆ ಅದುವರೆಗೆ ಅದಕ್ಕೆ ನ್ಸಕಲ್‌ ಎಂಬ ಹಣೆಪಟ್ಟಿ ಇರಲಿಲ್ಲ. 2002ರಲ್ಲಿ ಹೊರ ಜಗತ್ತಿಗೆ ನಕ್ಸಲ್‌ ಹೆಸರು ಬಹಿರಂಗವಾಗಿತ್ತು. ಕೊಪ್ಪ ತಾಲೂಕಿನ ಕಾಡಿಗೆ ಕಟ್ಟಿಗೆ ತರಲು ಹೋಗಿದ್ದ ಚೀರಮ್ಮಗೆ ಗಾಯವಾಗಿದ್ದು ಆಸ್ಪತ್ರೆಗೆ ಕರೆದೊಯ್ದಾಗ ಗುಂಡು ಹೊಕ್ಕಿರುವುದು ಗೊತ್ತಾಯಿತು. ಈ ಮೂಲಕ ಪಶ್ಚಿಮ ಘಟ್ಟದಲ್ಲಿ ಕದ್ದುಮುಚ್ಚಿ ನಡೆಯುತ್ತಿದ್ದ ಹೋರಾಟಗಾರರ ಶಸ್ತ್ರಾಸ್ತ್ರ ಅಭ್ಯಾಸ ನಾಗರಿಕ ಜಗತ್ತಿಗೆ ತಿಳಿಯಿತು. ಇದಾದ ಒಂದೇ ವರ್ಷದಲ್ಲಿ ಪೊಲೀಸ್‌ ಮತ್ತು ನಕ್ಸಲರ ನಡುವೆ ಕುದುರೆಮುಖದಲ್ಲಿ ಗುಂಡಿನ ಚಕಮಕಿ ನಡೆದು ಇದು ತೀವ್ರ ಸ್ವರೂಪ ಪಡೆದಿತ್ತು. ಬಳಿಕ ನಕ್ಸಲ್‌ ಮತ್ತು ಪೊಲೀಸ್‌ ಮುಖಾಮುಖಿ ಆಗಾಗ ನಡೆಯುತ್ತಲೇ ಇತ್ತು.

50ರಿಂದ 6ಕ್ಕೆ ಇಳಿಕೆ
2 ದಶಕಗಳ ಹಿಂದೆ 50ಕ್ಕೂ ಹೆಚ್ಚು ನಕ್ಸಲರು ರಾಜ್ಯದಲ್ಲಿ ನೆಲೆ ಯೂರಿದ್ದರು. ಸರಕಾರ ಕೆಲವು ವರ್ಷಗಳ ಹಿಂದೆ ಬಿಡುಗಡೆ ಮಾಡಿದ ನಕ್ಸಲರ ಪತ್ತೆಯ ಸೂಚನ ಫ‌ಲಕದಲ್ಲಿ 22 ಮಂದಿ ಭಾವಚಿತ್ರಗಳಿದ್ದವು. ಅದರಲ್ಲಿ ಕೆಲವರು ಎನ್‌ಕೌಂಟರ್‌ಗಳಲ್ಲಿ ಸಾವನ್ನಪ್ಪಿದ್ದರೆ, ಬಿ.ಜಿ. ಕೃಷ್ಣಮೂರ್ತಿ, ಸಾವಿತ್ರಿ ಬಂಧನದ ಬಳಿಕ ಮಲೆನಾಡಿನಲ್ಲಿ ನಕ್ಸಲ್‌ ಚಟುವಟಿಕೆಗೆ ಕಡಿವಾಣ ಬಿದ್ದಿತ್ತು. ಅನಂತರದಲ್ಲಿ ಕಬಿನಿ ದಳದ ಮುಖ್ಯಸ್ಥ ವಿಕ್ರಂ ಗೌಡ ರಾಜ್ಯದ ನಕ್ಸಲ್‌ ಚಳವಳಿ ನೇತೃತ್ವ ವಹಿಸಿಕೊಂಡಿದ್ದ.

ಮುಂಡಗಾರು ಲತಾ ಜತೆಗೂಡಿ 6 ಮಂದಿ ನಕ್ಸಲರ ತಂಡ ಮಲೆನಾಡಿನಲ್ಲಿ ಸಕ್ರಿಯವಾಗಿತ್ತು. ಈಚೆಗೆ ವಿಕ್ರಂ ಗೌಡನ ಎನ್‌ಕೌಂಟರ್‌ ಬಳಿಕ ರಾಜ್ಯದಲ್ಲಿ ನಕ್ಸಲ್‌ ಚಳವಳಿ ಈಗ ಸಂಪೂರ್ಣ ನೆಲಕಚ್ಚಿದೆ. ತಂಡದ ಸದಸ್ಯರ ಸಂಖ್ಯೆ 7ರಿಂದ 6ಕ್ಕೆ ಇಳಿದಿದೆ. ಇವರ ಶರಣಾಗತಿ ಬಳಿಕ ಸಂಘಟನೆಯ ಹೊಸ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ತೀರಾ ವಿರಳ. ಇದರೊಂದಿಗೆ ದಶಕಗಳಿಂದ ಮಲೆನಾಡಿನಲ್ಲಿ ಬೇರೂರಿದ್ದ ಕೆಂಪು ಉಗ್ರರ ಚಳವಳಿಗೆ ಕೊನೆಗೂ ಮುಕ್ತಿ ದೊರೆಯುವಂತಾಗಿದೆ.

Advertisement

ಶರಣಾಗತಿ ಹಿಂದಿನ ಕಸರತ್ತು
ಶರಣಾದ ನಕ್ಸಲರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚನೆ ಕೋರಿ ಇತ್ತೀಚೆಗೆ ನಕ್ಸಲ್‌ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಸರಕಾರಕ್ಕೆ ಶಿಫಾರಸು ಸಲ್ಲಿಸಿದೆ. ಆದರೆ, ಇದಕ್ಕೆ ಅನುಮತಿ ದೊರೆತಿಲ್ಲ. ಬದಲಾಗಿ ನಕ್ಸಲ್‌ ಪೀಡಿತ ಜಿಲ್ಲಾ ವ್ಯಾಪ್ತಿ ಕೋರ್ಟ್‌ಗಳಲ್ಲಿ ತ್ವರಿತ ವಿಚಾರಣೆಗೆ ಕ್ರಮ ಹಾಗೂ ಉಚಿತ ಕಾನೂನು ಸೇವೆ ನೀಡಲು ಮುಂದಾಗಿದೆ. ಕೊಲೆ, ಕೊಲೆ ಯತ್ನ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಸೇರಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರದ ನಕ್ಸಲರ ಕೇಸ್‌ಗಳ ವಜಾಕ್ಕೆ ನಿಯಾಮನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ.

ರಾಜ್ಯಮಟ್ಟದಲ್ಲಿ ಶರಣಾಗತಿ ಸಮಿತಿ
ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಶರಣಾಗತ ನಕ್ಸಲರನ್ನು ಮುಖ್ಯ ವಾಹಿನಿಗೆ ತರಲು ರಾಜ್ಯ ಮಟ್ಟದ ಸಮಿತಿಯನ್ನು ಸರಕಾರ ರಚಿಸಿದೆ. ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಸಾಹಿತಿ ಡಾ| ಬಂಜಗೆರೆ ಜಯಪ್ರಕಾಶ್‌, ಹಿರಿಯ ಪತ್ರಕರ್ತ ಬಿ. ಪಾರ್ವತೀಶ್‌, ಶಿವಮೊಗ್ಗದ ನ್ಯಾಯವಾದಿ ಕೆ.ಪಿ. ಶ್ರೀಪಾಲ್‌ ಹಾಗೂ ಒಳಾಡಳಿತ ಇಲಾಖೆ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕ, ರಾಜ್ಯ ಗುಪ್ತವಾರ್ತೆ ನಿರ್ದೇಶಕ, ಉಪ ನಿರ್ದೇಶಕ, ಆಂತರಿಕ ಭದ್ರತಾ ವಿಭಾಗ ಮುಖ್ಯಸ್ಥರು ಪದ ನಿಮಿತ್ತ ಸದಸ್ಯರಾಗಿದ್ದಾರೆ.

ನಕ್ಸಲ್‌ ಶರಣಾಗತಿ ನೀತಿ ಹೇಗಿದೆ?
ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಸರಕಾರ ಶರಣಾಗತಿ ಪ್ಯಾಕೆಜ್‌ ರೂಪಿಸಿದೆ. ಭೂಗತರಾಗಿ ಶಸ್ತ್ರಸಜ್ಜಿತ ಗುಂಪಿನ ಸದಸ್ಯ, ಸೆಂಟ್ರಲ್‌, ರಿಜನಲ್‌ ಕಮಿಟಿ, ರಾಜ್ಯ, ಜಿಲ್ಲಾ  ಮತ್ತು ಏರಿಯಾ ಸಮಿತಿಗಳ ಪೈಕಿ ಕನಿಷ್ಠ ಒಂದು ಸಮಿತಿಯಲ್ಲಿ ಸಕ್ರಿಯವಾಗಿರುವ ಮತ್ತು ಒಂದು ಅಥವಾ ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕರ್ನಾಟಕದ ನಿವಾಸಿಯಾಗಿದ್ದಲ್ಲಿ ಪ್ರವರ್ಗ “ಎ’ಯಲ್ಲಿ ಇರಲಿದ್ದು, ಇವರಿಗೆ ವಿವಿಧ ಕಂತುಗಳಲ್ಲಿ 7.5 ಲಕ್ಷ ರೂ. ಸಿಗುತ್ತದೆ. ಅನ್ಯರಾಜ್ಯದ ನಕ್ಸಲರು ಪ್ರವರ್ಗ “ಬಿ’ ನಡಿ 4 ಲಕ್ಷ ರೂ. ಹಾಗೂ ಮಾಹಿತಿದಾರರು ಹಾಗೂ ಸಂಘಟನೆಗೆ ನೇಮಕಾತಿ ಮಾಡುವಂತಹ ವ್ಯಕ್ತಿಗಳು, ತಮ್ಮ ವಿರುದ್ಧ ಚಾರ್ಜ್‌ ಶೀಟ್‌ ಹೊಂದಿರುವ ಆರೋಪಿಗಳು ಪ್ರವರ್ಗ “ಸಿ’ಯಡಿ ಬರಲಿದ್ದು, ಶರಣಾಗತಿಗೆ ಬಯಸಿದರೆ ಸರಕಾರವು 2 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಿದೆ.

ಪುನರ್ವಸತಿ ವ್ಯವಸ್ಥೆ ಹೇಗೆ?
ಪ್ರವರ್ಗ “ಎ’ಅಡಿ ಶರಣಾದ ನಕ್ಸಲ್‌ ಮುಖಂಡನಿಗೆ ಸರ್ಕಾರ ಕೂಡಲೇ 3 ಲಕ್ಷ ರೂ. ನೀಡಲಿದೆ. ಶರಣಾದ 1 ವರ್ಷದ ಬಳಿಕ 2 ಲಕ್ಷ ರೂ. ಹಾಗೂ 2 ವರ್ಷ ಬಳಿಕ 2 ಲಕ್ಷ ರೂ. ನೀಡಲಿದೆ. ಇದೇ ನಿಯಮ “ಬಿ’ ಹಾಗೂ “ಸಿ’ ಪ್ರವರ್ಗದಡಿ ಬರುವ ನಕ್ಸಲರಿಗೂ ಅನ್ವಯ. ವೃತ್ತಿ ಆಧಾರಿತ ತರಬೇತಿಗೆ ಒಲವು ತೋರಿದರೆ 1 ವರ್ಷದ ಕೌಶಲ ತರಬೇತಿ ಪಡೆಯಬಹುದಾಗಿದೆ. ಈ ಅವಧಿಯಲ್ಲಿ ಮಾಸಿಕ 5 ಸಾವಿರ ರೂ. ಪ್ರೋತ್ಸಾಹ ಧನ ಸಿಗಲಿದೆ. ಶರಣಾಗಲು ಬಯಸುವವರು ತಮ್ಮೊಂದಿಗಿರುವ ಯಾವುದೇ ಶಸ್ತ್ರಾಸ್ತ್ರ ಅಥವಾ ಉಪಕರಣ ಸರಕಾರಕ್ಕೆ ಒಪ್ಪಿಸಿದರೆ ಇದಕ್ಕೂ ಪ್ರೋತ್ಸಾಹ ಧನ ಇದೆ.

ಪುನವರ್ಸತಿ ಪ್ಯಾಕೇಜ್‌ ಮೊತ್ತ ಹೆಚ್ಚಳ
ಈ ಬಾರಿ ನಕ್ಸಲ್‌ ಪುನರ್ವಸತಿ ಪ್ಯಾಕೇಜ್‌ ಪರಿಷ್ಕರಿಸಲಾಗಿದೆ. ಈ ಹಿಂದೆ ಅಂದರೆ 2005ರಲ್ಲಿ ಎನ್‌ಕೌಂಟರ್‌ ನಡೆದು ಇಬ್ಬರು ಸಾವಿಗೀಡಾದ ಬಳಿಕ ನಕ್ಸಲ್‌ ಶರಣಾಗತಿಗೆ ಯೋಜನೆ ರೂಪಿಸಬೇಕೆಂಬ ಆಗ್ರಹ ಜೋರಾಗತೊಡಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರ 2015ರಲ್ಲಿ ಒಂದು ಪ್ಯಾಕೇಜ್‌ ಘೋಷಿಸಿ 5 ಲಕ್ಷ ರೂ. ಹಾಗೂ ಮನೆ ಮತ್ತು ಉದ್ಯೋಗದ ಅವಕಾಶ ಕಲ್ಪಿಸುವುದಾಗಿ ಘೋಷಣೆ ಮಾಡಿತ್ತು. ಆ ಬಳಿಕ ಕೆಲವರು ಶರಣಾಗಿದ್ದರು.

14 ನಕ್ಸಲರು ಶರಣಾಗತಿ
2010ರಲ್ಲಿ ವೆಂಕಟೇಶ್‌, ಜಯಾ, ಸರೋಜಾ, ಮಲ್ಲಿಕಾ, 2014ರಲ್ಲಿ ಸಿರಿಮನೆ ನಾಗರಾಜ್‌, ನೂರ್‌ ಜುಲ್ಫಿಕರ್‌, 2016ರಲ್ಲಿ ಭಾರತಿ, ಫಾತೀಂ, ಪದ್ಮನಾಭ, ಪರಶುರಾಮ್‌, 2017ರಲ್ಲಿ ಕನ್ಯಾಕುಮಾರಿ, ಶಿವಕುಮಾರ್‌ ದಂಪತಿ, ಚೆನ್ನಮ್ಮ, ನೀಲಗುಳಿ ಪದ್ಮನಾಭ ಶರಣಾಗಿದ್ದರು. ಇದುವರೆಗೆ 14 ಮಂದಿ ನಕ್ಸಲರು ಶರಣಾಗಿ, ಮುಖ್ಯವಾಹಿನಿಗೆ ಬಂದಿದ್ದಾರೆ. 2013-14ರಲ್ಲಿ ಸರಕಾರವು ವಿಶೇಷ ಪ್ಯಾಕೇಜ್‌ ಘೋಷಿಸಿ, ಬಳಿಕ ಗೌರಿ ಲಂಕೇಶ್‌ ನೇತೃತ್ವದಲ್ಲಿ ಮೊದಲ ತಂಡ ರಚಿಸಿತ್ತು.

ತತ್‌ಕ್ಷಣ ಸಿಗಲ್ಲ ಪ್ಯಾಕೇಜ್‌!
ನಕ್ಸಲ್‌ ಚಟುವಟಿಕೆಯಿಂದ ಮುಕ್ತಿ ಹೊಂದಿ ಮುಖ್ಯವಾಹಿನಿಗೆ ಬಂದವರ ವಿರುದ್ಧ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದ ಕೋರ್ಟುಗಳಲ್ಲೂ ಪ್ರಕರ‌ಣಗಳಿವೆ. ಹೀಗಾಗಿ ಪೂರ್ಣ ಪ್ರಮಾಣದ ಪ್ಯಾಕೇಜ್‌ಗಾಗಿ ಕೊಂಚ ಕಾಯಬೇಕಾಗುತ್ತದೆ. ನ್ಯಾಯಾಲಯದಲ್ಲಿ ಸಂಪೂರ್ಣ ಪ್ರಕರಣ ಇತ್ಯರ್ಥವಾಗದೆ ಪೂರ್ಣ ಪ್ಯಾಕೇಜ್‌ ಸಿಗುವುದಿಲ್ಲ. ಶರಣಾಗತಿಗೊಂಡು ಬಂಧಿತ ನಕ್ಸಲರ ಮೇಲಿನ ಪ್ರಕರಣಗಳ ತ್ವರಿತ ವಿಚಾರಣೆ ಸಾಧ್ಯವಾಗಿಲ್ಲ.

ಪಶ್ಚಿಮ ಘಟ್ಟದಲ್ಲಿ ನಕ್ಸಲ್‌ ಹೆಜ್ಜೆಗಳು
1980
ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ. 2000ರ ಅನಂತರ ನಕ್ಸಲ್‌ ಚಟುವಟಿಕೆ ಬಿರುಸು.

2005
ಫೆ.6: ನಕ್ಸಲ್‌ ನಾಯಕ ಸಾಕೇತ್‌ ರಾಜನ್‌, ಶಿವಲಿಂಗು ಪೊಲೀಸರ ಗುಂಡಿಗೆ ಬಲಿ.

2006
ಆ.23: ಶೃಂಗೇರಿಯ ಕೆರೆಕಟ್ಟೆಯ ವನ್ಯಜೀವಿ ವಿಭಾಗದ ಕಚೇರಿ ಮೇಲೆ ದಾಳಿ. ಬಳಿಕ ಕಾರ್ಕಳ ದಲ್ಲಿ ಸದಾನಂದ ಶೆಟ್ಟಿ ಬೈಕ್‌ಗೆ ಬೆಂಕಿ.
ಡಿ.25: ಶೃಂಗೇರಿ ಬಳಿಯ ಕಿಗ್ಗದಲ್ಲಿ ನಕ್ಸಲ್‌ ದಿನಕರ್‌ ಎನ್‌ಕೌಂಟರ್‌ಗೆ ಬಲಿ.

2007
ಮಾ.13: ಶಂಕಿತ ನಕ್ಸಲ್‌ ಯುವತಿ ಚೆನ್ನಮ್ಮ ಅಮಾಸೆಬೈಲಿನಲ್ಲಿ ಸೆರೆ.
ಜೂ.3: ಶೃಂಗೇರಿ ಬಳಿ ಗುಂಡಘಟ್ಟದಲ್ಲಿ ನಕ್ಸಲರಿಂದ ಅಂಗಡಿ ಮಾಲಕ ವೆಂಕಟೇಶ ಹತ್ಯೆ.
ಜೂ.7: ಆಗುಂಬೆಯ ತಲ್ಲೂರಂಗಡಿ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ.
ಜು.10: ಕೊಪ್ಪ ತಾಲೂಕಿನ ಒಡೆಯರಮಠ ದಲ್ಲಿ ಪೊಲೀಸ್‌ ಎನ್‌ಕೌಂಟರ್‌ಗೆ ನಕ್ಸಲ್‌ ಯುವಕ ಸಿಂಧನೂರಿನ ಗೌತಮ, ಪರಮೇಶ್ವರ, ಕಾರ್ಮಿಕ ಸುಂದರೇಶ್‌, ಮನೆ ಯಜಮಾನ­ರಾದ ರಾಮೇಗೌಡ್ಲು, ಕಾವೇರಿ ಸಾವು.
ಜು.17: ಆಗುಂಬೆಯ ಹುಲ್ಲಾರಬೈಲಿನಲ್ಲಿ ಗುಂಡಿನ ಚಕಮಕಿ, ಎಸ್‌ಐ ವೆಂಕಟೇಶ್‌ ಹತ್ಯೆ.

2008
ಮೇ 15: ಹೆಬ್ರಿಯ ಸೀತಾನದಿ ಬಳಿ ನಕ್ಸಲರ ಗುಂಡಿಗೆ ಶಿಕ್ಷಕ ಭೋಜ ಶೆಟ್ಟಿ, ಸುರೇಶ್‌ ಬಲಿ.
ಜು.7: ಬೆಳ್ತಂಗಡಿ ತಾಲೂಕಿನ ಕುತ್ಲೂರು, ಕಾರ್ಕಳದ ತಿಂಗಳಮಕ್ಕಿಯಲ್ಲಿ ಶಸ್ತ್ರಾಸ್ತ್ರ ಪತ್ತೆ.
ನ.13: ಶಿವಮೊಗ್ಗದಲ್ಲಿ ಶಂಕಿತ ನಕ್ಸಲ್‌ ಜನಾರ್ದನ ಬಂಧನ, ನಕ್ಸಲರು ಬಚ್ಚಿಟ್ಟ ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ವಶ.
ನ.20: ಹೊರನಾಡು ಸಮೀಪ ಮಾವಿನಹೊಲ ಬಳಿ ಎನ್‌ಕೌಂಟರ್‌, ನಕ್ಸಲರಾದ ಸೊರಬದ ಮನೋಹರ್‌, ಸಹಚರರಾದ ನವೀನ್‌, ಅಭಿಲಾಷ್‌ ಹತ್ಯೆ, ಪೇದೆ ಗುರುಪ್ರಸಾದ್‌ ಸಾವು.
ಡಿ.7: ಹಳ್ಳಿಹೊಳೆ ಸಮೀಪ ಪೊಲೀಸರ ಮಾಹಿತಿ ದಾರನೆಂಬ ಆರೋಪದಲ್ಲಿ ಕೃಷಿಕ, ಜಮೀನಾªರ ಕೇಶವ ಯಡಿಯಾಳ ಅವರ ಮನೆಗೆ ನುಗ್ಗಿ ಹತ್ಯೆ.

2009
ಆ.22: ಕಿಗ್ಗ ಬಳಿ ಎನ್‌ಕೌಂಟರ್‌. 2 ದಿನಗಳ ಬಳಿಕ ಶೃಂಗೇರಿಯ ನೆಮ್ಮಾರಿನ ದಿಂಡೋಡಿ ಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ.

2010
ಮಾ.1: ಕಾರ್ಕಳ ತಾಲೂಕಿನ ಮುನಿಯಾಲು ಮುಟ್ಲುಪಾಡಿಯ ಮೈರೋಳಿಯಲ್ಲಿ ಎನ್‌ಕೌಂಟರ್‌ಗೆ ಬೆಳ್ತಂಗಡಿ ತಾಲೂಕು ಕುತ್ಲೂರಿನ ವಸಂತ ಗೌಡ್ಲು ಅಲಿಯಾಸ್‌ ಆನಂದನ ಹತ್ಯೆ.

2011
ಡಿ.19: ಹೆಬ್ರಿ ಕಬ್ಬಿನಾಲೆ ಸಮೀಪದ ತಿಂಗಳ ಮಕ್ಕಿಯ ಸದಾಶಿವ ಗೌಡ ತೆಂಗಿನಮಾರು ಮನೆ ಯಿಂದ ನಾಪತ್ತೆ. ಡಿ. 22ರಂದು ಬೆಳಕಿಗೆ.
ಡಿ.28: ತೆಂಗಿನಮಾರುವಿನಿಂದ 2 ಕಿ.ಮೀ. ದೂರದ ದಟ್ಟಾರಣ್ಯದಲ್ಲಿ ಸದಾಶಿವ ಗೌಡರ ಶವ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಮರದಡಿ ಪತ್ತೆ. ನಕ್ಸಲರ ಬರಹವೂ ಸಮೀಪದಲ್ಲಿ ದೊರಕಿತ್ತು.

2012
ಸೆ.4: ಸುಬ್ರಹ್ಮಣ್ಯ ಸಮೀಪದ ಬಿಸಿಲೆ ಬಾಗಿಮಲೆ ರಕ್ಷಿತಾರಣ್ಯದಲ್ಲಿ ರಾಯಚೂರಿನ ನಕ್ಸಲ್‌ ಯಲ್ಲಪ್ಪ ಎಎನ್‌ಎಫ್ ಗುಂಡಿಗೆ ಬಲಿ.

2024
ನ.18: ಕಾರ್ಕಳ ತಾಲೂಕಿನ ಹೆಬ್ರಿಯ ಪೀತಬೈಲಿನಲ್ಲಿ ಎಎನ್‌ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್‌ ಮುಖಂಡ ವಿಕ್ರಂ ಗೌಡ ಬಲಿ.

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next