Advertisement

ನವಲಗುಂದ ಕೃಷಿ ಮಾರುಕಟ್ಟೆ ಕಥೆ-ವ್ಯಥೆ

11:07 AM Dec 27, 2019 | Suhan S |

ನವಲಗುಂದ: ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಾಗಿದೆ. ಅಭಿವೃದ್ಧಿಗಾಗಿ ಲಕ್ಷಾಂತರ ರೂ. ಸುರಿದಿದ್ದರೂ ರೈತರಿಗೆ, ವ್ಯಾಪಾರಸ್ಥರಿಗೆ ಮಾತ್ರ ಪ್ರಯೋಜನವಾಗುತ್ತಿಲ್ಲ. ವೇ ಬ್ರಿಜ್‌ ಇದ್ದೂ ಇಲ್ಲದಂತಾಗಿದೆ. ವಿದ್ಯುತ್‌ ಕಂಬಗಳಿದ್ದರೂ ಬೆಳಕಿಲ್ಲ. ಮೂಲಸೌಲಭ್ಯಗಳು ಮೂರಾಬಟ್ಟೆಯಾಗಿದ್ದು ಹಿಡಿಶಾಪ ಹಾಕುವಂತಾಗಿದೆ.

Advertisement

ಪಟ್ಟಣದಲ್ಲಿ ಎತ್ತು-ಎಮ್ಮೆಗಳ ಸಂತೆ ಗುರುವಾರ ನಡೆದರೆ, ಕುರಿ-ಆಡುಗಳ ಸಂತೆ ಮಂಗಳವಾರ ನಡೆಯುತ್ತವೆ. ಆದರೆ ಮಂಗಳವಾರ ಆಡು-ಕುರಿಗಳಿಗೆ ಎಪಿಎಂಸಿ ಆವರಣದಲ್ಲಿ ಜಾಗ ಇಲ್ಲದೆ ರಸ್ತೆಯಲ್ಲೇ ಮಾರಾಟಗಾರರು ನಿಲ್ಲುವುದರಿಂದ ವಾಹನಗಳ ದಟ್ಟಣೆ ಉಂಟಾಗುತ್ತಿದೆ. ಇತ್ತ ಎಪಿಎಂಯವರು ಮಾತ್ರ ಗಮನ ಹರಿಸುತ್ತಿಲ್ಲ. ಅಲ್ಲದೇ ಇಲ್ಲಿ ಯಾರು ಎಲ್ಲಿ ಮಾರಾಟ ಮಾಡಿದರೂ ಎಪಿಎಂಸಿಗೆ ಮಾತ್ರ ಯಾವುದೇ ಆದಾಯ ಇಲ್ಲವಾಗಿದೆ.

ಉಪ ಮಾರುಕಟ್ಟೆ ಸುಮಾರು 10 ಎಕರೆ ಜಾಗೆ ಇದ್ದರೂ ಎಲ್ಲೆಂದರಲ್ಲಿ ಮುಳ್ಳುಕಂಟಿಗಳು ಬೆಳೆದು ನಿಂತಿವೆ. ಆವರಣದಲ್ಲಿ ದುಸ್ಥಿತಿಯಲ್ಲಿರುವ ಕಟ್ಟಡಗಳು ಹಂದಿಗಳ ತಾಣವಾಗಿದೆ. ಉಪ ಮಾರುಕಟ್ಟೆಗೆ ಕಾರ್ಯಾಲಯದ ಕಟ್ಟಡ ಇಲ್ಲದೆ ರೈತರ ಸಭಾಭವನದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದೂ ಶಿಥಿಲಾವಸ್ಥೆಯಲ್ಲಿದೆ.

ಮಳಿಗೆ ಆದಾಯ ಮರೀಚಿಕೆ: ಒಟ್ಟು 30 ನೂತನ ವಾಣಿಜ್ಯ ಮಳಿಗೆಗಳು ಅಣ್ಣಿಗೇರಿ ರಸ್ತೆಗೆ ಹೊಂದಿಕೊಂಡು ನಿರ್ಮಾಣವಾಗಿ ಕಾಲಿ ಬಿದ್ದಿದ್ದು, ನಾಲ್ಕು ವರ್ಷದಿಂದ ಆದಾಯ ಮರೀಚಿಕೆಯಾಗಿದೆ. ಮಳಿಗೆಯ ಇಲಾಖೆ ಟೆಂಡರ್‌ ಬಿಡ್‌ 2800 ರೂ. ಗಳಿಂದ ಪ್ರಾರಂಭವಾಗುತ್ತವೆ. ಟೆಂಡರ್‌ನಲ್ಲಿ ವ್ಯಾಪಾರಸ್ಥರು ತಿಂಗಳಿಗೆ 5,000 ಸಾವಿರದ ವರೆಗೂ ಅಂಗಡಿಗಳನ್ನು ಪಡೆದು, ವ್ಯಾಪಾರವಾಗದೆ ನಷ್ಟ ಅನುಭವಿಸುವಂತಾಗಿದೆ. ಮತ್ತೆ ವಾಣಿಜ್ಯ ಮಳಿಗೆಗಳು

ಖಾಲಿಯಾಗುವುದರಿಂದ ಸರಕಾರದ ಆದೇಶ ಬರುವವರಿಗೂ ಆದಾಯವಿಲ್ಲದಂತಾಗುತ್ತಿದೆ. ಹಿಂದೆ ಕೃಷಿ ಉಪಕರಣದ ಅಂಗಡಿ ಪ್ರಾರಂಭಿಸಲು ಟೆಂಡರ್‌ ಮುಖಾಂತರ 3,500 ರೂ. ಅಂಗಡಿ ಹಿಡಿದಿದ್ದೆ. ಆದರೆ, ವಿದ್ಯುತ್‌ ಇತರೆ ಮೂಲಸೌಕರ್ಯಗಳಿಲ್ಲದೆ ನಷ್ಟ ಅನುಭವಿಸಿದ್ದೇನೆ. ನಾವೇ ವಿದ್ಯುತ್‌ ಪರವಾನಗಿ ಪಡೆಯೋಣ ಎಂದುಕೊಂಡರೆ ಎಪಿಎಂಸಿಯವರು ಟಿಸಿ ಅಳವಡಿಸಲು ಬೇಕಾಗುವ ಡಿಪಾಸಿಟ್‌ ಹಣ ತುಂಬಿಲ್ಲವೆಂದು ಹೆಸ್ಕಾಂ ಅಧಿ ಕಾರಿಗಳು ಸಬೂಬು ನೀಡಿದರು. ಇದರಿಂದ ಬೇಸತ್ತು ನಾನು ವ್ಯಾಪಾರ ಪ್ರಾರಂಭಿಸಲಿಲ್ಲ. ನಾನು ನೀಡಿದ ಡಿಪಾಸಿಟ್‌ ಹಣವೂ ವಾಪಸ್‌ ಬರಲಿಲ್ಲ ಎಂಬುದು ಈರಣ್ಣ ಖಾತೆದಾರ ಅವರ ದೂರು.

Advertisement

ವೇ ಬ್ರಿಡ್ಜ್ ತರಾತುರಿ ಉದ್ಘಾಟನೆ: 50 ಲಕ್ಷ ರೂ. ಅನುದಾನದಲ್ಲಿ ತಯಾರಿಸಿದ ವಾಹನಗಳ ಮಾಪನ (ವೇ ಬ್ರಿಡ್ಜ್ ) ಇದ್ದರೂ ಕೆಲಸ ಮಾಡುತ್ತಿಲ್ಲ. ಈ ಹಿಂದಿನ ಆಡಳಿತ ಮಂಡಳಿ ಇದಕ್ಕೆ ವಿದ್ಯುತ್‌ ಮೀಟರ್‌ ಅಳವಡಿಸದೆ ತರಾತುರಿಯಲ್ಲಿ ಉದ್ಘಾಟನೆ ಮಾಡಿದೆ. ಹೀಗಾಗಿ ಲಕ್ಷಾಂತರ ಹಣ ಸುರಿದರೂ ಸಾರ್ವಜನಿಕರ, ರೈತರ ಉಪಯೋಗಕ್ಕೆ ಬರದಂತಾಗಿದೆ. ಜಾನುವಾರುಗಳಿಗೆ ನೀರು, ಮೇವು, ಸರಿಯಾದ ರಸ್ತೆ, ಚರಂಡಿ, ರೈತರಿಗೆ ವಿಶ್ರಾಂತಿ ವ್ಯವಸ್ಥೆ, ರೈತರಿಗೆ ಕುಡಿಯುವ ನೀರಿನ ಅರವಟಿಗೆ ಸೇರಿದಂತೆ ಹಲವು ಕೊರತೆಗಳನ್ನು ಮಾರುಕಟ್ಟೆ ಒಳಗೊಂಡಿದೆ. ಎಲ್ಲೆಂದರಲ್ಲಿ ನೆಟ್ಟ ಸಸಿಗಳು ನೀರಿಲ್ಲದೆ ಬಾಡಿವೆ. ಸಾವಯವ ಗೊಬ್ಬರ ಬಳಕೆ ಮಾಡಬೇಕೆಂದು ಕೃಷಿ ಇಲಾಖೆಯಿಂದ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಆದರೆ ಇಲ್ಲಿ ಜಾನುವಾರುಗಳಿಂದ ಬಂದಿರುವ ಗೊಬ್ಬರದ ಲೆಕ್ಕವೇ ಇಲ್ಲವಾಗಿದೆ. ಅಧಿಕಾರಿಗಳು, ಆಡಳಿತಮಂಡಳಿ ಇನ್ನಾದರೂ ಮಾರುಕಟ್ಟೆ ಮೂಲಸೌಲಭ್ಯಗಳಿಗೆ ಆದ್ಯತೆ ನೀಡಬೇಕಿದೆ.

ಹಿಂದಿನ ಆಡಳಿತ ಮಂಡಳಿ ವೇ ಬ್ರಿಜ್‌ಅನ್ನು ವಿದ್ಯುತ್‌ ಮೀಟರ್‌ ಇಲ್ಲದೇ ದಿಢೀರನೇ ಉದ್ಘಾಟಿಸಿದ್ದಾರೆ. ಈಗ ಒಂದು ವಾರದಲ್ಲಿ ವೇ ಬ್ರಿಜ್‌ಗೆ ವಿದ್ಯುತ್‌ ಮೀಟರ್‌ ನೀಡಿ ಪ್ರಾರಂಭ ಮಾಡುತ್ತೇವೆ. ವಾಣಿಜ್ಯ ಸಂಕೀರ್ಣಗಳು ಟೆಂಡರ್‌ ಆಗಿದ್ದು, ಆದೇಶ ಬಂದ ತಕ್ಷಣ ಪ್ರಾರಂಭ ಮಾಡಲು ಅನುಮತಿ ನೀಡುತ್ತೇವೆ. ವಿದ್ಯುತ್‌ ತೊಂದರೆ ಇಲ್ಲ. ಎಪಿಎಂಸಿ ಆವರಣಕ್ಕೆ ವಿದ್ಯುತ್‌ ಟಿಸಿ ಅವಶ್ಯಕತೆ ಇದೆ. ಇರುವಂತಹ ಸಮಸ್ಯೆ ಬಗೆಹರಿಸಿ ಕೆಲವು ದಿನಗಳಲ್ಲಿ ಟಿಸಿ ಅಳವಡಿಸಲು ತಿಳಿಸಲಾಗಿದೆ. –ಗುರುನಾಥ ಉಳ್ಳೇಗಡ್ಡಿ, ಅಧ್ಯಕ್ಷ, ನವಲಗುಂದ ಕೃಷಿ ಉತ್ಪನ್ನ ಉಪಮಾರುಕಟ್ಟೆ

 

-ಪುಂಡಲೀಕ ಮುಧೋಳೆ

Advertisement

Udayavani is now on Telegram. Click here to join our channel and stay updated with the latest news.

Next