ಪಣಜಿ:ಭಾರತೀಯ ನೌಕಾಪಡೆಯ ಮಿಗ್ 29ಕೆ ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಗೋವಾದ ಡಾಬೋಲಿಮ್ ನಲ್ಲಿ ಶನಿವಾರ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಇಬ್ಬರು ಟ್ರೈನಿ ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.
ತರಬೇತಿಗಾಗಿ ಬಳಸುವ ಮಿಗ್ 29 ಕೆ ವಿಮಾನದಲ್ಲಿದ್ದ ಪೈಲಟ್ ಗಳಾದ ಕ್ಯಾಪ್ಟನ್ ಎಂ.ಶಿಯೋಖಂದ್ ಮತ್ತು ಲೆಫ್ಟಿನೆಂಟ್ ಕಮಾಂಡರ್ ದೀಪಕ್ ಯಾದವ್ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನೌಕದಳದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ತರಬೇತು ಮಿಗ್ 29ಕೆ ಟೇಕ್ ಆಫ್ ಆದ ಹೊತ್ತಿನಲ್ಲಿಯೇ ಹಕ್ಕಿಗಳ ಹಿಂಡು ಬಂದು ಬಡಿದ ಪರಿಣಾಮ ಬಲಭಾಗದ ಎಂಜಿನ್ ಗೆ ಬೆಂಕಿ ಹೊತ್ತಿಕೊಂಡಿತ್ತು. ನಂತರ ಎಡಭಾಗದ ಎಂಜಿನ್ ಸ್ಥಗಿತವಾಗಿರುವುದಾಗಿ ವರದಿ ವಿವರಿಸಿದೆ.
ಗೋವಾದ ನೌಕಾನೆಲೆ ಡಾಬೋಲಿಮ್ ನಲ್ಲಿರುವ ಐಎನ್ ಎಸ್ ಹನ್ಸ್ ನಿಂದ ಮಿಗ್ 29ಕೆ ಟೇಕ್ ಆಫ್ ಆದ ಸಂದರ್ಭದಲ್ಲಿ ಹಕ್ಕಿಗಳ ಹಿಂಡು ಬಡಿದಿತ್ತು. ಈ ಸಂದರ್ಭದಲ್ಲಿ ಎಂಜಿನ್ ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಪೈಲಟ್ ಇಬ್ಬರು ಧೈರ್ಯಗೆಡದೆ ಪರಿಸ್ಥಿತಿಯನ್ನು ನಿಭಾಯಿಸಿರುವುದಾಗಿ ನೌಕಾದಳದ ಪ್ರಕಟಣೆ ವಿವರಿಸಿದೆ.
ಬೆಂಕಿ ಹೊತ್ತಿಕೊಂಡ ಮಿಗ್ 29ಕೆ ಜನನಿಭಿಡ ಪ್ರದೇಶದಿಂದ ದೂರದಲ್ಲಿ ತೆರೆದ ಜಾಗದಲ್ಲಿ ಅಪಘಾತಕ್ಕೀಡಾಗಿತ್ತು ಎಂದು ವರದಿ ತಿಳಿಸಿದೆ.