Advertisement

ನವ್ಯಕಾವ್ಯದ ಎರಡನೆಯ ಮೇರೆ: ಎ. ಕೆ. ರಾಮಾನುಜನ್‌

07:51 PM Mar 05, 2017 | Harsha Rao |

ಗೋಪಾಲಕೃಷ್ಣ ಅಡಿಗ ಮತ್ತು ಎ. ಕೆ. ರಾಮಾನುಜನ್‌ ಕನ್ನಡ ನವ್ಯಕಾವ್ಯದ ಎರಡು ಮೇರೆಗಳಿದ್ದಂತೆ; ಅಡಿಗರು ಮೊದಲನೆಯ ಮೇರೆಯಾದರೆ, ರಾಮಾನುಜನ್‌ ಎರಡನೆಯ ಮೇರೆ: ಇಬ್ಬರೂ ಎರಡು ಭಿನ್ನ ಸಾಧ್ಯತೆಗಳನ್ನು ಹುಡುಕಿದರು. ಅಡಿಗರದು ಹೈ ಮೈಮೆಸಿಸ್‌, ಅಬ್ಬರದ ಶೈಲಿಯಾದರೆ, ರಾಮಾನುಜನ್‌ರದ್ದು ಲೋ ಮೈಮೆಸಿಸ್‌, ಕೆಳಸ್ತರದ ರೀತಿ. ಅದು ಸಹಜವೆಂಬಂತೆ, ಇಬ್ಬರ ವ್ಯಕ್ತಿತ್ವಗಳೂ ಢಾಳವಾಗಿ ಬೇರೆ ಬೇರೆ. ಅಡಿಗರದು ಜೋರು ಧ್ವನಿಯಾದರೆ, ರಾಮಾನುಜನ್‌ರದ್ದು  ಕ್ಷೀಣ ಸ್ವರ; ವಾಸ್ತವದಲ್ಲಿ ರಾಮಾನುಜನ್‌ ಜೋರು ಮಾತಾಡಲು ಯತ್ನಿಸಿದರೆ ಅದು ಕೀರಲು ಸ್ವರವಾಗುತ್ತಿತ್ತು! ಅದ್ದರಿಂದ ಅವರು ಸಣ್ಣ ಧ್ವನಿಯಲ್ಲಿ ಮಾತಾಡುವುದು ಅನಿವಾರ್ಯವಾಗಿತ್ತು. ಅದು ಅವರ ಬರವಣಿಗೆಯಲ್ಲೂ ಕಾಣಿಸಿಕೊಂಡದ್ದರಲ್ಲಿ ಯಾವ ನ್ಯಾಯವಿತ್ತೋ ತಿಳಿಯದು. ಇನ್ನು ಅಡಿಗರು ಪಬ್ಲಿಕ್‌ ಎಡ್ರೆಸ್‌ ಸಿಸ್ಟಮ್‌ ಮೂಲಕ ದೊಡ್ಡದೊಂದು ಸಭೆಯನ್ನು ಉದ್ದೇಶಿಸಿ ಮಾತಾಡುವಂತೆ ತೋರಿದರೆ, ರಾಮಾನುಜನ್‌ ಆಪ್ತರ ಜತೆ ಮನೆಯಲ್ಲಿ ಮಾತಾಡುವಂತೆ ತೋರುತ್ತದೆ. ಅಡಿಗರದ್ದು ಪೊಲಿಟಿಕಲ್‌ ಕತೆಗಳಾದರೆ, ರಾಮಾನುಜನರದ್ದು ಎ-ಪೊಲಿಟಿಕಲ್‌. ನಾವು ಅವುಗಳಿಗೆ ಪೊಲಿಟಿಕಲ್‌ ನಿರೂಪಣೆ ಕೊಡಬಾರದೆಂದಿಲ್ಲ, ಆದರೆ ಕವಿ ತಾವಾಗಿ ಅದನ್ನು ಮಾಡುವುದಿಲ್ಲ. ಅಡಿಗರಲ್ಲಿ ಎಲ್ಲವೂ ಸಾರ್ವಜನಿಕ, ರಾಮಾನುಜನ್‌ರಲ್ಲಿ ಖಾಸಗಿ. ಒಂದು ಕತೆಯಲ್ಲಿ ರಾಮಾನುಜನ್‌ ಕೆಲವು ಕತೆಗಳನ್ನು ಕುಸ್ತಿಯಲ್ಲಿ ಸೋತು ನೆಲದಲ್ಲಿ ಮುಖ ಮರೆಸಿ ಸಂಜೆ ಯಾರಿಗೂ ಕಾಣಿಸದಂತೆ ಎದ್ದು ಹೋದ ಪೈಲ್ವಾನನಿಗೆ ಹೋಲಿಸುತ್ತಾರೆ. ಬಹುಶಃ ಎಲ್ಲ ಕವಿತೆಗಳೂ ಹೀಗೆಯೇ ಎಂಬ ಸೂಚನೆ ಇದರಲ್ಲಿ ಬರುತ್ತದೆ.

Advertisement

ರಾಮಾನುಜನ್‌ ಧೋರಣೆಯೇ ಈ ರೀತಿಯ ಸೋಲುಂಡ ಪೈಲ್ವಾನನದು. ಅವರಿಗೆ ಶಬ್ದದ ಲಜ್ಜೆ ಮುಖ್ಯ. ಆದ್ದರಿಂದ ಅವರ ಕತೆಗಳಲ್ಲಿ ಶಬ್ದಗಳು ಎಂದೂ ಪೋಲಾಗುವುದಿಲ್ಲ. ರಾಮಾನುಜನ್‌ ಶಬ್ದಜಿಪುಣರು ಎಂದರೂ ಸರಿಯೆ. ಅಡಿಗರಾದರೆ ಹೇಳಿದ್ದನ್ನು ಮತ್ತೆ ಮತ್ತೆ ಬೇರೆ ಬೇರೆ ರೀತಿಗಳಲ್ಲಿ ಹೇಳುತ್ತಾರೆ, ರಾಮಾನುಜನ್‌ ಹಾಗೆ ಮಾಡುವುದಿಲ್ಲ. 

ಅಡಿಗರು ನವ್ಯ ಕಾವ್ಯದ ಸಾರ್ವಜನಿಕ ಮುಖವಾದರೆ ರಾಮಾನುಜನ್‌ ಅದರ ಖಾಸಗಿ ಮುಖ. ಇಬ್ಬರೂ ಸಿಂಬಲಿಸಂ ಅರ್ಥಾತ್‌ ಫ್ರೆಂಚರು ಪ್ರಚುರಪಡಿಸಿದ ಪ್ರತಿಮಾವಿಧಾನಕ್ಕೆ ಮೊರೆಹೋಗುತ್ತಾರೆ; ಅಡಿಗರು ಅದಕ್ಕೆ  ವ್ಹಿಟ್‌ಮನ್‌ ಮತ್ತು ಎಲಿಯಟ್‌ ಮೂಲಕ ಬಂದರೆ, ರಾಮಾನುಜನ್‌ ವಾಲೆಸ್‌ ಸ್ಟೀವನ್ಸ್‌ , ಪೌಂಡ್‌ ಮತ್ತು ವಿಲಿಯಂ ಕಾರ್ಲೋಸ್‌ ವಿಲಿಯಮ್ಸ್‌ ಮೂಲಕ ಬಂದರು ಎನಿಸುತ್ತದೆ. ಪೌಂಡ್‌ನ‌ In a Station of the Metro ಎಂಬ ಎರಡು ಸಾಲುಗಳ ಕವಿತೆಯಿದೆಯಷ್ಟೆ;  

The apparition of these faces in the crowd: Petals on a wet black bough. (‘In a Station of the Metro’)ಆರಂಭದಲ್ಲಿ ಇಪ್ಪತ್ತು ಸಾಲುಗಳಿದ್ದ ಕವಿತೆಯನ್ನು ಪೌಂಡ್‌ ತಿದ್ದಿ ತೀಡಿ ಎರಡು ಸಾಲುಗಳಿಗೆ ಇಳಿಸಿದ ಎಂಬ ದಂತಕತೆಯಿದೆ; ಪೌಂಡ್‌ ಪ್ರತಿಮಾವಾದಕ್ಕೆ ನಿಷ್ಠನಾಗಿದ್ದ ಕಾಲ ಅದು, ನಂತರ ಅದರಿಂದ ಹೊರಬಂದ. ರಾಮಾನುಜನ್‌ರ ಈ ಪ್ರಸಿದ್ಧ ನಾಲ್ಕು ಸಾಲುಗಳ ಕವಿತೆಯನ್ನು ನೋಡಿ:

ಬಚ್ಚಲು ಮನೆ ಗಂಗಾಳದಲ್ಲಿ 
ಅಪ್ಪ ಮರೆತ ಹೊಸ ಹಲ್ಲು ಸ್ವತಂತ್ರವಾಗಿ
ಹಲ್ಲು ಕಿರಿಯಿತು.
ನಾನು ನೋಡಿದೆ
    (“ಅಪ್ಪ , ಮಗ’)

Advertisement

ಹೀಗೆ ಬಿಂದುನಲ್ಲಿ ಸಿಂಧು ತೋರಿಸುವುದು ರಾಮಾನುಜನ್‌ ಕತೆಗಳ ಗುಣ. ಅರ್ಥ ಹೇಳದೆ, ಕೇವಲ ಪ್ರತಿಮೆಯನ್ನು ನೀಡುವ ಮೂಲಕ ಅವರು ಓದುಗರಿಗೆ ಯೋಚಿಸುವ ಸ್ವಾತಂತ್ರ್ಯವನ್ನು ಕೊಡುತ್ತಾರೆ. ಇಂಥ ಪ್ರತಿಮಾವಿಧಾನವನ್ನೇ ವಿಸ್ತರಿಸಿದ ಇನ್ನೊಂದು ಕವಿತೆ ತಾತ ಕೂತಿದ್ದ ; 

ತಾತ ಕೂತಿದ್ದ.
ನೆರೆಮನೆಯ ಚಿಕ್ಕ ತಾತನ ಮೊಮ್ಮಗಳು ಬಾಗಿಲ
ಬಿಸಿಲಲ್ಲಿ ನಿಂತು ಕರೆದಾಗ ಅÇÉೇ ಮೂಲೆಯ ಕುರ್ಚಿಯÇÉೇ ಲೇವಾದೇವಿ ಲೆಕ್ಕ ಮುಗಿಸಿ ಕೂತಿದ್ದ ನೆರೆಮನೆಯ ಚಿಕ್ಕತಾತ. ಮಾಗಿ ರಾತ್ರಿಯ ಛಳಿ ತಣ್ಣಗೆ ಕೊರೆದಾಗ ಎಷ್ಟೋ ವರುಷದ ಸುಡುಗಾಡು ಲೆಕ್ಕ ಫ‌ಕ್ಕನೆ ಸುಲಭವಾಯಿತು.
  (“ತಾತ ಕೂತಿದ್ದ’)

ದೈನಂದಿನ ನಡೆದೇ ಇರುತ್ತದೆ; ತಾತ ಕೂತಿರುತ್ತಾನೆ. ಜನ ಅವನನ್ನು ಪ್ರಸ್ತದೂಟಕ್ಕೆ ಕರೆಯುತ್ತಾರೆ; ಅವನು ಏಳುವುದಿಲ್ಲ. ಮಗಳ ಅಚ್ಚುಮೆಚ್ಚಿನ ಮಗಳು ಬಂದು ಮುಟ್ಟಿ ನೋಡುತ್ತಾಳೆ; ಅವನ ಮೈತಣ್ಣಗೆ ಹೆಪ್ಪುಗಟ್ಟಿರುತ್ತದೆ:
ಅವರಿವರು ಬಂದು ಮುಟ್ಟಿ ಮುಚ್ಚುವ ವರೆಗು ಬಿಟ್ಟ ಕಣ್‌ ಮುಚ್ಚದೆಯೆ ಅÇÉೇ
ಕೂತಿದ್ದ ನಾನು ನೀವು ಈಗ ಕೂತಿಲ್ಲವೆ,
ಹಾಗೆ.
    (“ತಾತ ಕೂತಿದ್ದ’)

ಇಲ್ಲಿ ತಾತ ಕೂತಿದ್ದುದು ಒಂದು ನಿಜವಾದ ಪ್ರತಿಮೆಯಾಗಿ, ಕೊನೆಯ ಎರಡು ಸಾಲುಗಳು ನೇರವಾಗಿ ಕವಿಯನ್ನೂ ನಮ್ಮನ್ನೂ ತಲಪುತ್ತವೆ. ಇಂಥ ಮನುಷ್ಯಾವಸ್ಥೆಯ ವಿವರ ಅಡಿಗರಲ್ಲಿ ಕಾಣಿಸದು. ಬಹುಶಃ ಇಪ್ಪತ್ತನೆಯ ಶತಮಾನದ ಅಸ್ತಿತ್ವವಾದ ರಾಮಾನುಜನ್‌ರನ್ನು ಒಳಗೊಂಡಷ್ಟು ಅಡಿಗರನ್ನು ಒಳಗೊಂಡಿರಲಿಲ್ಲ. ರಾಮಾನುಜನ್‌ ಊರು ಬಿಟ್ಟು ಪರದೇಸಿಯಾದವರು, ಪರದೇಶವನ್ನೇ ತನ್ನದಾಗಿ ಮಾಡಿಕೊಂಡವರು. ಆ ಹಕ್ಕಿ ಬೇಕಾದರೆ ಎಂಬ ಅವರ ಕವಿತೆಯಲ್ಲಿನ ಮಂಗೋಲಿಯಾದ ರಾಜನ ಹಾಗೆ: ಈ ರಾಜ ಒಂದು ಹಕ್ಕಿಯ ಮೋಹದಲ್ಲಿ ಅದರ ದೇಶವನ್ನು ಗೆದ್ದು ತಾನು ಅದೇ ದೇಶದವನಾಗಿಬಿಡುತ್ತಾನೆ! ಹೀಗೆ ಹೊರಗಿನದನ್ನು ತನ್ನದಾಗಿ ಮಾಡಿಕೊಳ್ಳುವುದಕ್ಕೆ ತಾನೇ ಹೊರಗಿನವನಾಗುವದು ಕೂಡ ಅಗತ್ಯವಾಗುತ್ತದೆ. ವಾಲೆಸ್‌ ಸ್ಟೀವನ್ಸ್‌ ತನ್ನ ಕರ್ಮಭೂಮಿಯಾಗಿದ್ದ ಹಾರ್ಟ್‌ಫೋರ್ಡ್‌ ನಿಂದ ಹೊರಗೆಲ್ಲೂ ಹೋಗಲಿಲ್ಲ, ಆದರೆ ಬೇಕಾದ್ದನ್ನು ತಾನು ಇದ್ದಲ್ಲಿಗೇ ತರಿಸಿಕೊಂಡ, ಉಳಿದುದನ್ನ ಕಲ್ಪಿಸಿಕೊಂಡ; ಆದ್ದರಿಂದ ಅವನ ಕವಿತೆಗಳಲ್ಲೂ ನಾವು ಪರದೇಸಿತನವನ್ನು ಕಾಣುತ್ತೇವೆ: ಉದಾಹರಣೆಗೆ. Tea at the Palaz of Hoon. ಆಧುನಿಕ ಕವಿಗಳಲ್ಲಿ ಸಾಮಾನ್ಯವಾದ ಈ ಪರದೇಸಿತನ ರಾಮಾನುಜನ್‌ರಲ್ಲಿ ಕಾಣುವಷ್ಟು ಅಡಿಗರಲ್ಲಿ ಕಾಣಲಾರೆವು; ಅಡಿಗರಲ್ಲಿ ಅದು ಕಾಣಿಸಿದರೆ ವ್ಯಂಗ್ಯವಾಗಿ ಮಾತ್ರ. ಹಕ್ಕಿಗಳು ವಲಸೆ ಬಂದಾಗ ಕೇವಲ ಹಕ್ಕಿಗಳು ಮಾತ್ರವಲ್ಲ, ಕಾಡುಗಳು ಕೂಡ ಬರುತ್ತವೆ ಎನ್ನುತ್ತದೆ ವಲಸೆ ಬಂದ ಕಾಡು. ಹೀಗೆ ಜನಸಮೂಹಗಳು ಸಹಾ ವಲಸೆ ಬರುತ್ತವೆ, ತಮ್ಮ ಕಾಲನಿಗಳನ್ನು ಸ್ಥಾಪಿಸುತ್ತವೆ. ತಮ್ಮ ಚಿಕ್ಕ ಚಿಕ್ಕ ಕತೆಗಳಲ್ಲಿ ರಾಮಾನುಜನ್‌ ಇಡೀ ಜಗತ್ತಿನ ಇತಿಹಾಸವನ್ನು ಹಿಡಿಯುವ ರೀತಿ ಅನನ್ಯವಾದುದು. 

    ಅದೇ ರೀತಿ ಮಾನವ ಸಂಬಂಧದ ನಿಗೂಢತೆಯ ಬಗ್ಗೆ, ಅದರಲ್ಲಿನ ಭಾಷೆಯ ಪಾತ್ರ ಅಥವಾ ಸಮಸ್ಯೆಯ ಬಗ್ಗೆ ಅವರು ಬರೆಯುತ್ತಾರೆ. ಮಾತು ಮುಗಿಯುವ ಮೊದಲು ಎಂದು ಆರಂಭವಾಗುವ ಈ ಹೆಸರಿಲ್ಲದ ಕತೆಯನ್ನು ನೋಡಿ:
ಮಾತು ಮುಗಿಯುವ ಮೊದಲು
ಮಾತು ಬಿಟ್ಟ ದೇವರೆ,
ಮಾತು ಕಲಿಸಬಾರದೆ,
ಸ್ವಭಾವೋಕ್ತಿ ಹೇಳಿಕೊಡಬಾರದೆ?
ಪ್ರೀತಿಯ ವಿಷಯದÇÉಾದರೂ
ವಕ್ರೋಕ್ತಿ ಔಚಿತ್ಯವಿಚಾರ
ಎಲ್ಲ ಕಳೆದು
ಐರನಿ ಕಳಚಿ
ಮೈ ಮುಟ್ಟಿದ ಹಾಗೆ
ಮನಸ್ಸು ಮುಟ್ಟಿಸಬಾರದೆ?

ಒಂದು ನಿಮಿಷ
ಭಾವದ ಸ್ವಭಾವ 
ತೋರಿಸು.
    (ಮಾತು ಮುಗಿಯುವ ಮೊದಲು)

ಪಾರದರ್ಶಕವಾದ ಭಾಷೆಗೋಸ್ಕರ ಮಾನವ ಹಾತೊರೆಯುವುದನ್ನು ಇಲ್ಲಿ ಕಾಣುತ್ತೇವೆ; ಆದರೆ ಅದು ಸಾಧ್ಯವೇ? ಭಾಷೆಯಿಲ್ಲದ ಭಾವದ ಸ್ವಭಾವವೇನು? ಕೇವಲ ಸ್ವಭಾವೋಕ್ತಿಯಾದರೂ ಸಾಧ್ಯವೇ? ಇಂಥ ಮೂಲ ಪ್ರಶ್ನೆಗಳನ್ನು ಎತ್ತುತ್ತ ರಾಮಾನುಜನ್‌ ಕಾವ್ಯ ನಮ್ಮದೇ ಅನುಮಾನಗಳಿಗೆ ಮಾತು ಕೊಡುತ್ತದೆ. ಇನ್ನು ಎÇÉೇ ಹೋಗಲಿ, ಏನೇ ಮಾಡಲಿ ಮನುಷ್ಯ ಎಲ್ಲವನ್ನೂ ತನ್ನ ಜತೆಯಲ್ಲಿ ಒಯ್ಯುತ್ತಾನೆ ಎನ್ನುವ ಯಾವುದೂ ಎಂಬ ಕವಿತೆ ಯಾರ ಕವಿತೆ ತಾನೇ ಅಲ್ಲ? 
ಯಾವುದೂ ಅಳಿಸಿಹೋಗುವುದಿಲ್ಲ. ಸ್ಲೇಟಿ
ನಲ್ಲಿ ಬರೆದು ಅಳಿಸಿ ಬರೆದು ಅಳಿಸಿ
ದ ಅಕ್ಷರಲಕ್ಷಿ¾ ಮೆಕ್ಸಿಕೋನಲ್ಲಿ¨ªಾಗ ಬಾಗಿಲಿ
ಗೆ ಬಂದು ಬಾಗಿಲು ಹಾಕಿದೆ. ಅವಳ ಬೆರಳು
ಸಿಕ್ಕಿ ರಕ್ತ ಬಂತು. ನಾನು ಒಳಗೆ ಕರೆದು
ಗಾಯಕ್ಕೆ ಬ್ಯಾಂಡೇಜು ಕಟ್ಟಿದೆ. ಆ ಸ್ಪಾನಿಷ್ಟ
ನಲ್ಲಿ ನನ್ನ ಇಂಗ್ಲಿಷು. ನನ್ನ ಇಂಗ್ಲಿಷ್‌ನಲ್ಲಿ ಈ ಇವಳ
ಕನ್ನಡದ ಬ್ಯಾಂಡೇಜು ಬೆರಳು.
ಚಿಕ್ಕಂದು ಸತ್ತ
ಸಂಪಿಗೆಮನೆ ಹುಡುಗಿಯ ಬಾದಾಮಿ ಬಾಯಿ
ಹಾಂಕಾಂಗು ಸೂಳೆಯರ ಮುಖದಲ್ಲಿ.
ಯಾವುದೂ ಅಳಿಸಿ
ಹೋಗುವುದಿಲ್ಲ, ಸ್ವಾಮೀ.
    (ಯಾವುದೂ)
ಹೀಗೆ ನಮ್ಮದೇ ಕತೆಗಳನ್ನು ಬರೆದವರು ರಾಮಾನುಜನ್‌. ಅವರ ಯಾವುದೇ ಕತೆಯನ್ನು ತೆಗೆದುಕೊಂಡರೂ ಅದರ ಜತೆ ನಮಗೆ ಥಟ್ಟನೆ ಅವಿನಾಭಾವ ಸಂಬಂಧ ಅನಿಸಿಬಿಡುತ್ತದೆ. 
    ಅಡಿಗರು ಮತ್ತು ರಾಮಾನುಜನ್‌ ಕನ್ನಡ ನವ್ಯಕಾವ್ಯದ ಎರಡು ಮೇರೆಗಳು ಎಂದೆ; ಹೌದು, ಉಳಿದವರು ಈ ಮೇರೆಗಳ ಮಧ್ಯೆ ಆಚೀಚೆ ತಮ್ಮ ಸ್ಥಾನವನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಆದರೆ ಆ ಜಾಗವೂ ವಿಶಾಲವಾಗಿದೆ.
    
– ಕೆ. ವಿ. ತಿರುಮಲೇಶ್‌

Advertisement

Udayavani is now on Telegram. Click here to join our channel and stay updated with the latest news.

Next