Advertisement

ಐಎನ್‌ಎಸ್‌ ಜಲಾಶ್ವ ಇಂದು ಭಾರತಕ್ಕೆ

02:14 AM May 10, 2020 | Sriram |

ಕೊಚ್ಚಿ: ವಿದೇಶದಿಂದ “ವಂದೇ ಭಾರತ್‌’ ವಿಮಾನಗಳು ಭಾರತಕ್ಕೆ ಒಂದೊಂದಾಗಿ ಬಂದಿಳಿಯುತ್ತಿವೆ. ಈ ನಡುವೆ “ಸಮುದ್ರ ಸೇತು’ ಯೋಜನೆ ಮೂಲಕ ನೌಕಾಪಡೆ ಕೂಡ ತನ್ನ ಶಕ್ತಿ ಪ್ರದರ್ಶಿಸಿದೆ. ಮಾಲ್ಡೀವ್ಸ್‌ನಿಂದ ಹೊರಟ ಐಎನ್‌ಎಸ್‌ ಜಲಾಶ್ವ ಭಾನುವಾರ ಬೆಳಗ್ಗೆ ಸುಮಾರಿಗೆ ಕೇರಳದ ಕೊಚ್ಚಿ ಬಂದರನ್ನು ತಲುಪಲಿದ್ದು, ಬರೋಬ್ಬರಿ 600 ಪ್ರಜೆಗಳು ತಾಯ್ನಾಡಿಗೆ ಮರಳಲಿದ್ದಾರೆ.

Advertisement

ಇದರಲ್ಲಿ 400 ಮಂದಿ ಕೇರಳದವರಾಗಿದ್ದು, ಉಳಿದ 200 ಮಂದಿ ದೇಶದ ಇತರ ಭಾಗಕ್ಕೆ ಸೇರಿದವರಾಗಿದ್ದಾರೆ. ಕೇರಳ ತನ್ನ ನಾಡಿನ ವಿದೇಶಿ ಸಂತ್ರಸ್ತರನ್ನು ಆಯಾ ಜಿಲ್ಲೆಗಳಿಗೆ ತಲುಪಿಸಲು, ಸರ್ಕಾರಿ ಬಸ್ಸುಗಳ ವ್ಯವಸ್ಥೆ ಮಾಡಿಕೊಂಡಿದೆ. ಅಲ್ಲದೆ, ಪ್ರತಿ ಅನಿವಾಸಿ ಭಾರತೀಯ ನಿಗೂ ಪೊಲೀಸ್‌ ಸುಪರ್ದಿಯಲ್ಲಿ ಕ್ವಾರಂಟೈನ್‌ಗೆ ಅವಕಾಶ ಕಲ್ಪಿಸಿದೆ. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ನಿಂದ ಹೊರಟಿರುವ ಐಎನ್‌ಎಸ್‌ ಮಗರ್‌ ಕೂಡ, ಕೊಚ್ಚಿಯನ್ನು ತಲುಪಲಿದೆ.

ಗುಡ್‌ ಬೈ ಲಂಡನ್‌, ನಮಸ್ತೆ ಇಂಡಿಯಾ: ಕೋವಿಡ್-19ದಿಂದ ತತ್ತರಿಸಿ ಹೋಗಿರುವ ಇಂಗ್ಲೆಂಡ್‌ನಿಂದ “ವಂದೇ ಭಾರತ್‌’ನ ಮೊದಲ ವಿಮಾನ ಭಾರತದತ್ತ ಹೊರಟಿದೆ. ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ಪ್ರವಾಸಿಗರು ಸೇರಿದಂತೆ ಸುಮಾರು 250ಕ್ಕೂ ಅಧಿಕ ಮಂದಿಗೆ ಮೊದಲ ಪ್ರಯಾಣಕ್ಕೆ ಅವಕಾಶ ಸಿಕ್ಕಿದೆ. ಲಂಡನ್ನಿನ ಹೀಥ್ರೂ ಏರ್‌ಪೋರ್ಟ್‌ನಿಂದ ಹೊರಟ ಈ ವಿಮಾನ ಮುಂಬೈಯನ್ನು ಭಾನುವಾರ ಬೆಳಗ್ಗೆ ತಲುಪಲಿದೆ.

“ಕೊನೆಗೂ ಅಗ್ನಿಪರೀಕ್ಷೆಯನ್ನು ಗೆದ್ದು ಭಾರತಕ್ಕೆ ಮರಳುತ್ತಿದ್ದೇನೆ. ವಂದೇ ಭಾರತ್‌ ನಮ್ಮ ಸಂಕಷ್ಟಕ್ಕೆ ನೆರವಾಗಿದೆ’ ಎಂದು ಲಂಡನ್‌ಗೆ ಪರೀಕ್ಷೆ ಬರೆಯಲು ಹೋಗಿ, ಸಂಕಷ್ಟಕ್ಕೆ ಸಿಲುಕಿದ್ದ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ಮೇ 13ರ ವರೆಗೆ ಲಂಡನ್ನಿಂದ ಇನ್ನು 6 ವಿಮಾನಗಳು ಭಾರತಕ್ಕೆ ಹೊರಡಲಿದ್ದು, 1 ವಿಮಾನ ಭಾನುವಾರ ರಾತ್ರಿ ಬೆಂಗಳೂರನ್ನು ತಲುಪಲಿದೆ. ಶನಿವಾರ ಒಂದೇ ದಿನ 8 ವಿಶೇಷ ವಿಮಾನಗಳು, ವಿದೇಶದಿಂದ ಭಾರತಕ್ಕೆ ಬಂದಿಳಿದಿವೆ.

Advertisement

ಗಲ್ಫ್ ಸಂತ್ರಸ್ತರ ಕರೆತರಲು ನಿಧಿ ಸಂಗ್ರಹ
ಗಲ್ಫ್ ರಾಷ್ಟ್ರಗಳಲ್ಲಿ ಇನ್ನೂ ಸಹಸ್ರಾರು ಮಂದಿ ಕೇರಳಿಗರು ಸಂಕಷ್ಟದಲ್ಲಿದ್ದು, ಅವರನ್ನೆಲ್ಲ ಕರೆತರಲು ಕೊಚ್ಚಿಯ ಶಾಪಿಂಗ್‌ ಕಾಂಪ್ಲೆಕ್ಸ್‌ ಅಸೋಸಿಯೇಶನ್‌ ದೇಣಿಗೆ ಸಂಗ್ರಹಿಸಲು ಮುಂದಾಗಿದೆ. ದಿ ಪೆಂಟಾ ಮೇನಕಾ ಮಾಲಕರ ಕಲ್ಯಾಣ ಸಂಘವು ಪ್ರಯಾಣಿಕರ ಟಿಕೆಟ್‌ ವೆಚ್ಚ ಭರಿಸಲು ನಿರ್ಧರಿಸಿದೆ.

ಇಬ್ಬರಲ್ಲಿ ಸೋಂಕು
ಏರ್‌ ಇಂಡಿಯಾ ವಿಮಾನದಲ್ಲಿ ಅಬುಧಾಬಿ ಮತ್ತು ದುಬೈನಿಂದ ಕೇರಳಕ್ಕೆ ಬಂದಿಳಿದ 363 ಭಾರತೀಯರ ಪೈಕಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಒಬ್ಬ ಸೋಂಕಿತನನ್ನು ಕಲ್ಲಿಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೂಬ್ಬರಿಗೆ ಕೊಚ್ಚಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ. ಈ ಎರಡು ಪ್ರಕರಣಗಳಿಂದಾಗಿ ಕೇರಳದಲ್ಲಿ ಸೋಂಕಿನ ಪ್ರಕರಣ 505ಕ್ಕೆ ಏರಿಕೆಯಾಗಿದೆ. ಈ ಪೈಕಿ 484 ಮಂದಿ ಗುಣಮುಖರಾಗಿದ್ದಾರೆ.

“ವಂದೇಭಾರತ್‌’ನ ಸ್ತ್ರೀ ಶಕ್ತಿ
ಮಲೇಷ್ಯಾ ಮತ್ತು ಒಮನ್‌ನತ್ತ ಶನಿವಾರ ಹೊರಟಿರುವ ಎರಡು ವಿಮಾನಗಳನ್ನು ಇಬ್ಬರು ಮಹಿಳಾ ಪೈಲಟ್‌ಗಳು ಚಲಾಯಿಸಿದ್ದಾರೆ. ತಿರುಚಿನಾಪಲ್ಲಿಯಿಂದ ಕೌಲಾಲಂಪುರ್‌ ಮತ್ತು ಕೊಚ್ಚಿಯಿಂದ ಮಸ್ಕತ್‌ಗೆ ಹೊರಟ ಈ ವಿಮಾನಗಳಿಗೆ ಕ್ರಮವಾಗಿ ಕವಿತಾ ರಾಜ್‌ಕುಮಾರ್‌, ಕ್ಯಾ| ಬಿಂದು ಸೆಬಾಸ್ಟಿಯನ್‌ ಸಾರಥಿಯಾಗಿದ್ದಾರೆ. ಇವೆರಡೂ ವಿಮಾನಗಳು ಶನಿವಾರ ತಡರಾತ್ರಿ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next