ಅಹಮದಾಬಾದ್: ಭಾರತೀಯ ನೌಕಾಪಡೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತ್ ನ ಪೋರಬಂದರ್ ಸಮೀಪ ಹಡಗಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 3,300 ಕೆಜಿ ಮಾದಕವಸ್ತುಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಇದು ಇತ್ತೀಚೆಗಿನ ಬೃಹತ್ ಪ್ರಮಾಣದ ಡ್ರಗ್ ವಶಪಡಿಸಿಕೊಂಡ ಪ್ರಕರಣವಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಇದನ್ನೂ ಓದಿ:Santhan: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಸಂತನ್ ಚೆನ್ನೈ ಆಸ್ಪತ್ರೆಯಲ್ಲಿ ನಿಧನ
ನೌಕಾಪಡೆ ಮತ್ತು ಎನ್ ಸಿಬಿ ಸಣ್ಣ ಹಡಗನ್ನು ತಡೆದು 3089 ಕೆಜಿ ಚರಸ್, 158 ಕೆಜಿ ಮೆಥಾಂಫೆಟಾಮೈನ್ ಹಾಗೂ 25 ಕೆಜಿ ಮಾರ್ಫಿನ್ ಅನ್ನು ವಶಪಡಿಸಿಕೊಂಡಿದ್ದು, ಹಡಗಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.
ಭಾರೀ ಪ್ರಮಾಣದಲ್ಲಿ ವಶಪಡಿಸಿಕೊಂಡ ಡ್ರಗ್ಸ್ ಒಟ್ಟು ಮೊತ್ತ ಎಷ್ಟು ಎಂಬುದನ್ನು ಅಧಿಕಾರಿಗಳು ಇನ್ನಷ್ಟೇ ತಿಳಿಸಬೇಕಾಗಿದೆ. ಪಿಟಿಐ ನ್ಯೂಸ್ ಏಜೆನ್ಸಿ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಚರಸ್ ಬೆಲೆ 7 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ವಶಪಡಿಸಿಕೊಂಡ ಹಡಗು ಮತ್ತು ಆರೋಪಿಗಳನ್ನು ಭಾರತೀಯ ಬಂದರಿನಲ್ಲಿ ಕಾನೂನು ನಿರ್ದೇಶನಾಲಯ ಏಜೆನ್ಸಿಗೆ ಹಸ್ತಾಂತರಿಸಲಾಗಿದೆ ಎಂದು ನೌಕಾಪಡೆ ಪ್ರಕಟನೆಯಲ್ಲಿ ತಿಳಿಸಿದೆ. ಅರಬ್ಬಿ ಸಮುದ್ರದ ಅಂತಾರಾಷ್ಟ್ರೀಯ ಕರಾವಳಿ ಗಡಿಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಗುಜರಾತ್ ನ ಭಯೋತ್ಪಾದಕ ನಿಗ್ರಹ ದಳದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.