Advertisement

Navy: ನೌಕಾಪಡೆ ಅಧಿಕಾರಿಗಳಿಗೆ ಗಲ್ಲು: ಪ್ರಕರಣಕ್ಕೆ ಪಾಕಿಸ್ತಾನ ಲಿಂಕ್‌

08:57 PM Oct 27, 2023 | Team Udayavani |

ನವದೆಹಲಿ: ಕತಾರ್‌ನಲ್ಲಿ ಭಾರತೀಯ ನೌಕಾಪಡೆಯ 8 ನಿವೃತ್ತ ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯಾಗುವಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಕರಾಳ ಹಸ್ತದ ಜಾಲವಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಅಧಿಕಾರಿಗಳ ಬಂಧನದ ವೇಳೆ, ಅವರು ಇಸ್ರೇಲ್‌ ಪರ ಗೂಢಚರ್ಯೆ ನಡೆಸುತ್ತಿದ್ದರು ಎಂದು ಪಾಕ್‌ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು.
ಅಲ್ಲದೇ, ಅ.26ರಂದು ಪಾಕಿಸ್ತಾನದ “ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ಪತ್ರಿಕೆಯಲ್ಲಿ “ಗೂಢಚರ್ಯೆ ಆರೋಪದಲ್ಲಿ ಕತಾರ್‌ನ ಜೈಲಲ್ಲಿ ಇರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ಆಗಲಿದೆ” ಎಂಬ ಸುದ್ದಿ ಪ್ರಕಟವಾಗಿತ್ತು. ಅದೇ ದಿನ ಅಂದರೆ ಗುರುವಾರ ಕತಾರ್‌ ಕೋರ್ಟ್‌ ಶಿಕ್ಷೆಯನ್ನೂ ಪ್ರಕಟಿಸಿತ್ತು. ಈ ಅಧಿಕಾರಿಗಳ ವಿರುದ್ಧ ಪಾಕ್‌ನ ಜಾಲತಾಣಗಳಲ್ಲಿ ಐಎಸ್‌ಐ ಭಾರೀ ಅಪಪ್ರಚಾರ ನಡೆಸಿತ್ತು.

Advertisement

ಕಾನೂನು ಹೋರಾಟಕ್ಕೆ ಸಿದ್ಧ:
ಶಿಕ್ಷೆಗೆ ಗುರಿಯಾಗಿರುವವರನ್ನು ರಕ್ಷಿಸಿ ದೇಶಕ್ಕೆ ಕರೆತರುವ ನಿಟ್ಟಿನಲ್ಲಿ ವಿದೇಶಾಂಗ ಸಚಿವಾಲಯ ಕಾರ್ಯಪ್ರವೃತ್ತವಾಗಿದೆ ಎಂದು ಬಿಜೆಪಿ ವಕ್ತಾರ ಅಜಯ ಅಲೋಕ್‌ ಹೇಳಿದ್ದಾರೆ. ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತೀರ್ಪನ್ನು ಪ್ರಶ್ನಿಸಲಿದೆ ಎಂದಿದ್ದಾರೆ.

ಏನಿದು ಪ್ರಕರಣ?
ಭಾರತೀಯ ನೌಕಾಪಡೆಯ 8 ಮಂದಿ ನಿವೃತ್ತ ಅಧಿಕಾರಿಗಳು ದಹ್ರಾ ಗ್ಲೋಬಲ್‌ ಟೆಕ್ನಾಲಜೀಸ್‌ ಆ್ಯಂಡ್‌ ಕನ್ಸಲ್ಟೆನ್ಸಿ ಸರ್ವಿಸಸ್‌ ಎಂಬ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂಸ್ಥೆ ಕತಾರ್‌ನ ಸೇನೆಗೆ ತರಬೇತಿ ನೀಡುತ್ತಿತ್ತು. 2022ರ ಆ.30ರಂದು ಅವರನ್ನು ಗೂಢಚರ್ಯೆ ಆರೋಪದ ಮೇರೆಗೆ ಬಂಧಿಸಲಾಗಿತ್ತು. ಅವರ ವಿರುದ್ಧ ಇಸ್ರೇಲ್‌ ಪರ ಗೂಢಚರ್ಯೆ ನಡೆಸಲಾಗುತ್ತಿತ್ತು ಎಂದು ದೂರುಗಳಿವೆ. ಜಾಮೀನು ಕೋರಿ ಹಲವು ಬಾರಿ ಅರ್ಜಿ ಸಲ್ಲಿಸಲಾಗಿದ್ದರೂ ಅದು ತಿರಸ್ಕೃತಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next